ದಾವಣಗೆರೆ: ನನಗೆ ಸಚಿವ ಸ್ಥಾನವೇ ಬೇಡ ಎಂದು ಹೇಳಿರುವಾಗ ಮುಖ್ಯಮಂತ್ರಿ ಆಗುವ ಆಸೆ ಇಲ್ಲ. ಅಲ್ಲಿ ಕುಳಿತುಕೊಳ್ಳುವ ಅನುಭವ, ಅರ್ಹತೆಯೂ ಇಲ್ಲ. ನಾನು ಇನ್ನೂ ಚಿಕ್ಕವನು ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಪಕ್ಷದ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ನಡುವೆ ಯಾವುದೇ ಮನಸ್ತಾಪ ಇಲ್ಲ. ನಳಿನ್‌ಕುಮಾರ್ ಅವರೊಂದಿಗೆ ಬೆಳಗ್ಗೆ ಮಾತನಾಡಿದ್ದು ವೈರಲ್ ಆಗಿರುವಂತಹ ಆಡಿಯೋ ನಕಲಿ. ಅದರ ಬಗ್ಗೆ ತನಿಖೆ ಆಗಲಿ ಎಂದು ಹೇಳಿದ್ದಾರೆ.
ನಳಿನ್‌ಕುಮಾರ್ ಕಟೀಲ್ ಅವರಿಗೆ ಕಪ್ಪುಚುಕ್ಕೆ ತರಲು ಕುತಂತ್ರ ನಡೆಸಲಾಗಿದೆ. ತನಿಖೆ ನಡೆಯುತ್ತಿದ್ದು, ಸತ್ಯಾಸತ್ಯತೆ ಬೆಳಕಿಗೆ ಬರಲಿದೆ ಎಂದರು. ನಾಯಕತ್ವ ಬದಲಾವಣೆ ಇಲ್ಲ: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹೇಳಿದರು.
ಜು.26ರಂದು ನಡೆಯುತ್ತಿರುವುದು ಶಾಸಕಾಂಗ ಪಕ್ಷದ ಸಭೆ ಅಲ್ಲ, ಔತಣಕೂಟ ಅಷ್ಟೆ. ನಾನು ಕ್ಷೇತ್ರಕ್ಕೆ ಬಂದಾಗ ಜನರ ಕೆಲಸ ಮಾಡುತ್ತೇನೆ. ಬೆಂಗಳೂರಿನಲ್ಲಿ ಏನೇನು ಆಗುತ್ತದೆ ಎಂದು ತಲೆಕೆಡಿಸಿಕೊಳ್ಳುವುದಕ್ಕೆ ಹೋಗುವುದಿಲ್ಲ. ನಾಯಕತ್ವ ಬದಲಾವಣೆ, ಸಂಪುಟ ವಿಸ್ತರಣೆ, ಪುನಾರಚನೆ ಬಗ್ಗೆ ನನಗೆ ಮಾಹಿತಿ ಇಲ್ಲ. ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ, ಹಾಗಾಗಿ ಸಿಎಂ ಬದಲಾವಣೆ ಇಲ್ಲ ಎಂದು ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ರಾಜ್ಯಾಧ್ಯಕ್ಷ ನಳಿನಕುಮಾರ್ ಕಟೀಲ್ ಸ್ಪಷ್ಟಪಡಿಸಿದ್ದಾರೆ.
ಸಿಎಂ ಯಡಿಯೂರಪ್ಪ ದೆಹಲಿಗೆ ಹೋಗಿ ಬಂದಿದ್ದಾರೆ. ವರಿಷ್ಠರೇ ರಾಜೀನಾಮೆಗೆ ಸೂಚಿಸಿಲ್ಲ ಎಂದು ತಿಳಿಸಿದ್ದಾರೆ. ಬಸವನಗೌಡ ಯತ್ನಾಳ್ ಬಗ್ಗೆ ಮಾತನಾಡುವುದಿಲ್ಲ. ಪಕ್ಷ ಹಾಗೂ ನಾಯಕತ್ವದ ವಿರುದ್ಧ ಮಾತನಾಡುವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಕಾಂಗ್ರೆಸ್ ಒಡೆದ ಮನೆ. ಜಿಪಂ, ತಾಪಂ ಚುನಾವಣೆಯಲ್ಲಿ ಗೆಲ್ಲುವುದರ ಬಗ್ಗೆಯಷ್ಟೇ ನಮ್ಮ ಗಮನ ಎಂದರು.