ದಾವಣಗೆರೆ: ದೇಶದ 117 ವರ್ಷದ ಸಹಕಾರಿ ಚಳವಳಿ ಇತಿಹಾಸದಲ್ಲೇ ಮೊದಲ ಬಾರಿಗೆ ಕೇಂದ್ರ ಸರ್ಕಾರ ಪ್ರತ್ಯೇಕವಾಗಿ ಸಹಕಾರ ಸಚಿವಾಲಯ ಪ್ರಾರಂಭಿಸಿರುವುದು ಸ್ವಾಗತಾರ್ಹ ಎಂದು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ ಜೆ.ಎಸ್. ವೇಣುಗೋಪಾಲ ರೆಡ್ಡಿ ತಿಳಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ “ಸಹರ್ ಸೆ ಸಮೃದ್ಧಿ’ ಎಂಬ ಧ್ಯೇಯವಾಕ್ಯವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಪ್ರಾರಂಭಿಸಿರುವ ಸಹಕಾರ ಸಚಿವಾಲಯ ದೇಶದ ಸಹಕಾರ ಕ್ಷೇತ್ರದ ಅಭ್ಯುದಯಕ್ಕೆ ಕಾರಣವಾಗಲಿದೆ. ಸಚಿವಾಲಯ ಪ್ರಾರಂಭದ ನಿರ್ಧಾರ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಷಾ ಅಭಿನಂದನಾರ್ಹರು ಎಂದರು.
ದೇಶದ ಸಹಕಾರಿ ಕ್ಷೇತ್ರದಲ್ಲಿ 91 ಸಾವಿರದಷ್ಟು ಕೃಷಿ ಪತ್ತಿನ ಸಹಕಾರಿ ಸಂಘಗಳಲ್ಲಿ 30 ಕೋಟಿಗೂ ಅಧಿಕ ಸದಸ್ಯರಿದ್ದಾರೆ. 3,83,285 ಮಿಲಿಯನ್ ನಷ್ಟು ಷೇರು ಬಂಡವಾಳ ಹೊಂದಿದೆ. 3.30 ಲಕ್ಷ ಗ್ರಾಮಗಳಲ್ಲಿ ಸಹಕಾರ ಕ್ಷೇತ್ರ ವ್ಯಾಪಿಸಿದೆ. ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಶೇ. 40 ರಷ್ಟು ಪಾಲನ್ನು ಸಹಕಾರ ಕ್ಷೇತ್ರ ನೀಡುತ್ತಿದೆ.
ಅಂತಹ ಕ್ಷೇತ್ರಕ್ಕೆ ಇದೇ ಮೊದಲ ಬಾರಿಗೆ ಪ್ರತ್ಯೇಕ ಸಚಿವಾಲಯ ಪ್ರಾರಂಭಿಸಿರುವುದು ಸಂತೋಷದ ವಿಚಾರ ಎಂದು ಹೇಳಿದರು. ದಾವಣಗೆರೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ 6154.18 ಲಕ್ಷ ಷೇರು ಬಂಡವಾಳ, 4121.8 ಲಕ್ಷ ರೂ. ನಿಧಿ, 83188.29 ಲಕ್ಷ ರೂ. ದುಡಿಯುವ ಬಂಡವಾಳ, 39029.33 ಲಕ್ಷ ರೂ. ಠೇವಣಿ ಹೊಂದಿದೆ. 47556.48 ಲಕ್ಷ ರೂ. ಕೃಷಿ, 20870.83 ಲಕ್ಷ ರೂ. ಕೃಷಿಯೇತರ ಸಾಲ, 1366.44 ಲಕ್ಷ ರೂ. ಕೆಸಿಸಿ ಸಾಲ ನೀಡಿದೆ. ಮಾ. 31ರ ಅಂತ್ಯಕ್ಕೆ 123.43 ಲಕ್ಷ ರೂ.ಗಳ ಲಾಭ ಗಳಿಸಿದೆ. ಶೇ. 92 ರಷ್ಟು ಸಾಲ ವಸೂಲಾತಿ ಮಾಡಲಾಗಿದೆ.
ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನಡಿ ವಿವಿಧ ಕೃಷಿ ಪತ್ತಿನ ಸಹಕಾರಿ ಸಂಘಗಳಲ್ಲಿ ಸಾಲ ಪಡೆದಿದ್ದ 420ಕ್ಕೂ ಹೆಚ್ಚು ರೈತರು ಕೊರೊನಾದಿಂದ ಮೃತಪಟ್ಟಿರುವ ಬಗ್ಗೆ ರಾಜ್ಯ ಸರ್ಕಾರಕ್ಕೆ ಮಾಹಿತಿ ನೀಡಿರುವುದಾಗಿ ತಿಳಿಸಿದರು.
ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಎನ್.ಎ. ಮುರುಗೇಶ್ ಮಾತನಾಡಿ, ರಾಜ್ಯದಲ್ಲಿ 264 ಪಟ್ಟಣ ಸಹಕಾರ ಬ್ಯಾಂಕ್‌ಗಳ 11,145 ಶಾಖೆಗಳಿವೆ. 25,55,442 ಸದಸ್ಯರು, 9068 ಸಿಬ್ಬಂದಿ ಇದ್ದಾರೆ. 1593.34 ಕೋಟಿ ರೂ. ಷೇರು ಬಂಡವಾಳ, 50161.42 ಕೋಟಿ ರೂ. ದುಡಿಯುವ ಬಂಡವಾಳ, 43191.27 ಕೋಟಿ ರೂ. ಠೇವಣಿ ಹೊಂದಿದೆ.
ರಾಜ್ಯ ಸರ್ಕಾರ ಸಹಕಾರ ಕ್ಷೇತ್ರದಲ್ಲಿ ಹಸ್ತಕ್ಷೇಪ ಕಡಿಮೆ ಮಾಡಬೇಕು. ಸಹಕಾರಿಗಳಿಗೆ ಅನುಕೂಲ ಆಗುವಂತೆ ಮತ್ತೆ ಯಶಸ್ವಿನಿ ಯೋಜನೆ ಮುಂದುವರೆಸಬೇಕು ಎಂದು ಒತ್ತಾಯಿಸಿದರು. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಉಪಾಧ್ಯಕ್ಷ ಬಿ. ಶೇಖರಪ್ಪ, ಜಿ.ಎನ್. ಸ್ವಾಮಿ ಸುದ್ದಿಗೋಷ್ಠಿಯಲ್ಲಿದ್ದರು.