ರಾ. ರವಿಬಾಬು
ದಾವಣಗೆರೆ: ವಿಶ್ವವಿಖ್ಯಾತ ಮಂಡ್ಯದ ಕೆ.ಆರ್.ಎಸ್. ಬೃಂದಾನವನದಲ್ಲಿ ಜನಮನಸೂರೆಗೊಳ್ಳುವ ಸಂಗೀತ ಕಾರಂಜಿ ಇದೆ. ಆ ಸಂಗೀತ ಕಾರಂಜಿಗಿಂತಲೂ ವಿಶಿಷ್ಟ ಮತ್ತು ವಿಭಿನ್ನವಾಗಿರುವ ಸಂಗೀತ ಕಾರಂಜಿ, ಇನ್ನು ಮುಂದೆ ನಡು ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆಯಲ್ಲಿರುವ ಏಷ್ಯಾದಲ್ಲೇ ಎರಡನೇ ಅತಿ ದೊಡ್ಡ ಗಾಜಿನಮನೆ ಆವರಣದಲ್ಲಿ ಕಾಣಸಿಗಲಿದೆ.
ಸ್ಮಾರ್ಟ್‌ಸಿಟಿ ಯೋಜನೆಯಡಿ 5 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ಮಾದರಿಯ ಸಂಗೀತ ಕಾರಂಜಿ ಹಾಗೂ ಅತಿ ವಿಶಿಷ್ಟವಾದ ಲೇಸರ್ ಷೋ ಪ್ರದರ್ಶನವನ್ನು ಇನ್ನು ಮೂರು ತಿಂಗಳಲ್ಲಿ ಸಾರ್ವಜನಿಕರು ಕಣ್ತುಂಬಿಕೊಳ್ಳಬಹುದು. ಏಷ್ಯಾದಲ್ಲೇ ಎರಡನೇ ಅತಿ ದೊಡ್ಡ ಗಾಜಿನಮನೆ ಆವರಣದಲ್ಲಿ ಸಂಗೀತ ಕಾರಂಜಿ ತಲೆ ಎತ್ತಲಿದೆ. ಜು. 14 ರಂದು ಬುಧವಾರ ಬೆಳಗ್ಗೆ 10 ಗಂಟೆಗೆ ನಗರಾಭಿವೃದ್ಧಿ ಇಲಾಖೆ ಸಚಿವರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ್ ಸಂಗೀತ ಕಾರಂಜಿ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಿದ್ದಾರೆ.
ಸಂಸದ ಡಾ| ಜಿ.ಎಂ. ಸಿದ್ದೇಶ್ವರ, ಶಾಸಕರಾದ ಎಸ್.ಎ. ರವೀಂದ್ರನಾಥ್, ಡಾ| ಶಾಮನೂರು ಶಿವಶಂಕರಪ್ಪ ಇತರರು ಭಾಗವಹಿಸುವರು. ಇದೇ ಸಂದರ್ಭದಲ್ಲಿ ಲೇಸರ್ ಷೋ ಪ್ರದರ್ಶನ ಕಾಮಗಾರಿಗೂ ಚಾಲನೆ ನೀಡಲಾಗುತ್ತದೆ. ಕಳೆದ ಎರಡು ವರ್ಷದಿಂದ ದಾವಣಗೆರೆಯ ಪ್ರಮುಖ ಆಕರ್ಷಣೀಯ ಕೇಂದ್ರವಾಗಿರುವ ಗಾಜಿಮನೆಯ ಆವರಣದಲ್ಲಿ 20 ಗುಂಟೆ ಜಾಗದಲ್ಲಿ ಸಂಗೀತ ಕಾರಂಜಿ ತಲೆ ಎತ್ತಲಿದೆ. ಕೆಆರ್‌ಎಸ್‌ನ ಬೃಂದಾವನ ದಲ್ಲಿರುವ ಸಂಗೀತ ಕಾರಂಜಿಗಿಂತಲೂ ವಿಭಿನ್ನ ಮತ್ತು ವಿಶೇಷವಾಗಿರಲಿದೆ ಇಲ್ಲಿನ ಸಂಗೀತ ಕಾರಂಜಿ. ಸಂಗೀತ ಕಾರಂಜಿ ಆಗುವುದರಿಂದ ಗಾಜಿನಮನೆ ಇನ್ನೂ ಹೆಚ್ಚು ಅತ್ಯಾಕರ್ಷಕವಾಗಲಿದೆ.
ಸಾರ್ವಜನಿಕರ ಅಚ್ಚುಮೆಚ್ಚಿನ ತಾಣವಾಗಲಿದೆ. ಮುಂದಿನ ದಿನಗಳಲ್ಲಿ ಜನಾಕರ್ಷಣೆಯ ಪ್ರವಾಸಿ ತಾಣವಾಗುವ ಎಲ್ಲ ಸಾಧ್ಯತೆಗಳು ದಟ್ಟವಾಗಿವೆ. ಬೆಂಗಳೂರಿನ ಬಿ.ಎನ್.ಎ. ಟೆಕ್ನಾಲಜಿ ಕನ್ಸಲ್ಟಿಂಗ್ ಕಂಪನಿ ಸಂಗೀತ ಕಾರಂಜಿ ನಿರ್ಮಾಣದ ಗುತ್ತಿಗೆ ಪಡೆದಿದೆ. ಮೂರು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಿ ನವೆಂಬರ್ 1ರ ಕನ್ನಡ ರಾಜ್ಯೋತ್ಸವದ ವೇಳೆಗೆ ಸಂಗೀತ ಕಾರಂಜಿ ಲೋಕಾರ್ಪಣೆ ಆಗಲಿದೆ.
ಲೇಸರ್ ಷೋ: ಸಂಗೀತ ಕಾರಂಜಿ ಜೊತೆಗೆ ಗಾಜಿನಮನೆಯಲ್ಲಿ ಲೇಸರ್ ಷೋ ಪ್ರದರ್ಶನಕ್ಕೂ ಸಿದ್ಧತೆ ನಡೆದಿದೆ. ಲೇಸರ್ ಷೋ ಮೂಲಕ ಕನ್ನಡನಾಡಿನ ವಿಶೇಷತೆಯನ್ನು ಕಟ್ಟಿಕೊಡಲಾಗುವುದು. ಲೇಸರ್ ಷೋನಲ್ಲಿ ಕರ್ನಾಟಕದ ಕಾಡುಗಳು, ಬೆಣ್ಣೆನಗರಿ ದಾವಣಗೆರೆ ಒಳಗೊಂಡಂತೆ 10 ಥೀಮ್ (ಕಥೆ) ಪ್ರದರ್ಶನದ ವ್ಯವಸ್ಥೆ ಮಾಡಲಾಗುತ್ತದೆ.
ಎಲ್ಲವೂ ಅಂದುಕೊಂಡತೆ ಆದಲ್ಲಿ ಕನ್ನಡ ರಾಜ್ಯೋತ್ಸವದ ವೇಳೆಗೆ ದಾವಣಗೆರೆ ಮತ್ತು ಸುತ್ತಮುತ್ತಲಿನ ಜನರು ಸಂಗೀತ ಕಾರಂಜಿಯ ಜೊತೆಗೆ ಲೇಸರ್ ಷೋ ಪ್ರದರ್ಶನದ ಸವಿಯನ್ನು ಸವಿಯಬಹುದು.