Advertisement

ಬಸ್‌ ಪ್ರಯಾಣ ದರ ಹೆಚ್ಚಳ ಕೈಬಿಡಲು ಆಗ್ರಹ

09:49 PM Jul 07, 2021 | Team Udayavani |

ದಾವಣಗೆರೆ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ದಾವಣಗೆರೆ ವಿಭಾಗ ಹೆಚ್ಚಿಸಿರುವ ಪ್ರಯಾಣ ದರವನ್ನು ಹಿಂಪಡೆಯುವಂತೆ ಒತ್ತಾಯಿಸಿ ಮಂಗಳವಾರ ಸೋಷಲಿಸ್ಟ್‌ ಯೂನಿಟಿ ಸೆಂಟರ್‌ ಆಫ್‌ ಇಂಡಿಯಾ(ಕಮ್ಯೂನಿಸ್ಟ್‌) ಪಕ್ಷದ ಮುಖಂಡರು, ಸದಸ್ಯರು ಹೈಸ್ಕೂಲ್‌ ಮೈದಾನದಲ್ಲಿನ ಸಾರಿಗೆ ಸಂಸ್ಥೆಯ ತಾತ್ಕಾಲಿಕ ಬಸ್‌ ನಿಲ್ದಾಣದ ಬಳಿ ಪ್ರತಿಭಟನೆ ನಡೆಸಿದರು.

Advertisement

ರಾಜ್ಯ ಸಮಿತಿ ಸದಸ್ಯ ಡಾ| ಟಿ.ಎಸ್‌. ಸುನಿತ್‌ಕುಮಾರ್‌ ಮಾತನಾಡಿ, ಎರಡು ವರ್ಷಗಳಿಂದ ಕೊರೊನಾದಿಂದ ಜನಜೀವನ ದುಸ್ತರ ಆಗಿರುವಂತಹ ಸಂದರ್ಭದಲ್ಲಿ ಆಡಳಿತ ಪಕ್ಷಗಳು ಜನರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ ಗಾಯದ ಮೇಲೆ ಬರೆ ಎಳೆಯುತ್ತಿವೆ. ಸಾರಿಗೆ ಸಂಸ್ಥೆಯ ದಾವಣಗೆರೆ ವಿಭಾಗಾಧಿಕಾರಿಗಳು ಸಾರಿಗೆ ಪ್ರಯಾಣ ದರ ಹೆಚ್ಚಿಸಿರುವ ಕ್ರಮ ಅಕ್ಷಮ್ಯ ಎಂದು ದೂರಿದರು.

ಬದುಕು, ಉದ್ಯೋಗ, ಆದಾಯವನ್ನು ಕಳೆದುಕೊಂಡು ಜೀವನದಲ್ಲಿ ನೆಲ ಕಚ್ಚಿರುವ ಜನಸಾಮಾನ್ಯರ ಮೇಲೆ ಬೆಲೆ ಏರಿಕೆ ಅದರಲ್ಲೂ ಸಾರಿಗೆ ಸಂಸ್ಥೆಯ ಪ್ರಯಾಣದರ ಹೆಚ್ಚಳ ಕಲ್ಲು ಹೇರಿದಂತಾಗಿದೆ. ಕೂಡಲೇ ಸಾರಿಗೆ ಸಂಸ್ಥೆಯ ದಾವಣಗೆರೆ ವಿಭಾಗದಲ್ಲಿ ಹೆಚ್ಚಿಸಿರುವ ಪ್ರಯಾಣ ದರವನ್ನು ಹಿಂಪಡೆಯಬೇಕು. ಎಲ್ಲಾ ತಾಲೂಕು, ಗ್ರಾಮೀಣ ಭಾಗದಲ್ಲಿ ಬಸ್‌ ಸೌಲಭ್ಯ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.

ಮಂಜುನಾಥ್‌ ಕುಕ್ಕುವಾಡ, ತಿಪ್ಪೇಸ್ವಾಮಿ ಅಣಬೇರು, ಮಧು ತೊಗಲೇರಿ, ಟಿ.ವಿ.ಎಸ್‌. ರಾಜು, ಭಾರತಿ, ಪರಶುರಾಮ್‌, ಶಿವಾಜಿರಾವ್‌, ನಾಗಜ್ಯೋತಿ, ಪೂಜಾ, ಕಾವ್ಯ, ನಾಗಸ್ಮಿತ, ಪುಷ್ಪಾ ಇತರರು ಇದ್ದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಸಾರಿಗೆ ಸಂಸ್ಥೆಯ ದಾವಣಗೆರೆ ವಿಭಾಗದ ನಿಯಂತ್ರಣಾಧಿಕಾರಿ ಸಭೆ ನಡೆಸುವುದಾಗಿ ಭರವಸೆ ನೀಡಿದರು. ಈ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಹೋರಾಟವನ್ನು ಹಿಂಪಡೆಯಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next