Advertisement

ಮಕ್ಕಳ ಕಲಿಕೆಗೆ ಸ್ಮಾರ್ಟ್‌ಫೋನ್‌ ಕೊಕ್ಕೆ!

09:35 PM Jul 07, 2021 | Team Udayavani |

„ಎಚ್‌.ಕೆ. ನಟರಾಜ

Advertisement

ದಾವಣಗೆರೆ: ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಕೊರೊನಾ ಮೂರನೇ ಅಲೆ ಹೆಚ್ಚಾಗುವ ಭೀತಿ ಹಿನ್ನೆಲೆಯಲ್ಲಿ ಭೌತಿಕ ತರಗತಿಗಳನ್ನು ಆರಂಭ ಮಾಡದ ಸಾರ್ವಜನಿಕ ಶಿಕ್ಷಣ ಇಲಾಖೆ, ಆನ್‌ಲೈನ್‌ ಮತ್ತು ಆಫ್‌ಲೈನ್‌ ಮೂಲಕ ಮಕ್ಕಳ ನಿರಂತರ ಕಲಿಕೆಗೆ ಶ್ರಮಿಸುತ್ತಿದೆ. ಆದರೆ ಜಿಲ್ಲೆಯಲ್ಲಿ ಶೇ. 50ಕ್ಕೂ ಹೆಚ್ಚು ಮಕ್ಕಳು ಆನ್‌ ಲೈನ್‌ ಮತ್ತು ಆಫ್‌ಲೈನ್‌ ಎರಡೂ ಪಾಠದಿಂದ ವಂಚಿತರಾಗುತ್ತಿರುವುದು ಆತಂಕ ಸೃಷ್ಟಿಸಿದೆ.

ಮೊಬೈಲ್‌ ತಂತ್ರಜ್ಞಾನ ಬಳಸಿಕೊಂಡು ಮಕ್ಕಳ ಕಲಿಕೆ ನಿರಂತರವಾಗಿಸುವ ಹಿನ್ನೆಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯು ಜಿಲ್ಲೆಯಲ್ಲಿ ಸ್ಮಾರ್ಟ್‌ಫೋನ್‌ ಹೊಂದಿದವರು, ಕೀಪ್ಯಾಡ್‌ ಫೋನ್‌ ಹೊಂದಿದವರು ಹಾಗೂ ಎರಡೂ ಮಾಧ್ಯಮ ಉಪಕರಣ ಹೊಂದದೇ ಇರುವ ಮಕ್ಕಳ ಸಮೀಕ್ಷೆ ಮಾಡಿತ್ತು. ಈ ಸಮೀಕ್ಷೆ ಪ್ರಕಾರ ಶೇ. 50ರಷ್ಟು ಮಕ್ಕಳು ಮಾತ್ರ ಇಂಟರ್‌ನೆಟ್‌ ಸಹಿತ ಸ್ಮಾಟ್‌ಫೋನ್‌ ಸೌಲಭ್ಯ ಹೊಂದಿದ್ದಾರೆ.

ಇವರಲ್ಲಿ ಶೇ. 25ರಷ್ಟು ಮಕ್ಕಳು ಇಂಟರ್‌ನೆಟ್‌ರಹಿತ ಕೀಪ್ಯಾಡ್‌ ಮೊಬೈಲ್‌ ಫೋನ್‌ ಹೊಂದಿದ್ದಾರೆ. ಶೇ. 25 ರಷ್ಟು ಮಕ್ಕಳು ಯಾವುದೇ ಮಾಧ್ಯಮ ಉಪಕರಣಗಳನ್ನೇ ಹೊಂದಿಲ್ಲ. ಒಟ್ಟಾರೆ ಜಿಲ್ಲೆಯಲ್ಲಿ ಶೇ. 50ರಷ್ಟು ಮಕ್ಕಳು ಆನ್‌ಲೈನ್‌ ಮತ್ತು ಆಫ್‌ಲೈನ್‌ ಎರಡೂ ತರಗತಿಗಳಿಂದ ವಂಚಿತರಾಗುತ್ತಿದ್ದಾರೆ ಎಂಬ ಸಂಗತಿ ಸಮೀಕ್ಷೆಯಿಂದ ಬೆಳಕಿಗೆ ಬಂದಿದೆ.

ಇಂಟರ್‌ನೆಟ್‌ ಸಹಿತ ಸ್ಮಾರ್ಟ್‌ಫೋನ್‌ ಇಲ್ಲದ ವಿದ್ಯಾರ್ಥಿಗಳು ದೂರದರ್ಶನದಲ್ಲಿ ಪ್ರಸಾರವಾಗುವ ಸಂವೇದ ತರಗತಿ ಪಾಠಗಳು ಮಾತ್ರ ವೀಕ್ಷಿಸಿ ಕಲಿಕೆಯಲ್ಲಿ ತೊಡಗಿಕೊಳ್ಳಬೇಕಾಗಿದೆ. ಇದರಲ್ಲಿಯೂ ಶೇ. 5-10 ರಷ್ಟು ಪ್ರಮಾಣದ ಮಕ್ಕಳು ಟಿವಿ ಇಲ್ಲದೇ ಕಲಿಕೆಯಿಂದ ಸಂಪೂರ್ಣ ದೂರ ಉಳಿದಿರುವ ಸಾಧ್ಯತೆ ಇದೆ. ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಒಂದರಿಂದ 10ನೇ ತರಗತಿವರೆಗೆ 2,50,740 ಮಕ್ಕಳು ದಾಖಲಾಗಿದ್ದಾರೆ.

Advertisement

ಇವರಲ್ಲಿ 1,39,479 ವಿದ್ಯಾರ್ಥಿ ಪೋಷಕರ ಬಳಿ ಇಂಟರ್‌ನೆಟ್‌ ಸಹಿತ ಸ್ಮಾರ್ಟ್‌ಫೋನ್‌ ಹೊಂದಿದ್ದಾರೆ. 67,004 ವಿದ್ಯಾರ್ಥಿಗಳ ಮನೆಯಲ್ಲಿ ಇಂಟರ್‌ನೆಟ್‌ರಹಿತ ಕಿಪ್ಯಾಡ್‌ ಫೋನ್‌ ಇದೆ. 44,257 ವಿದ್ಯಾರ್ಥಿಗಳಲ್ಲಿ ಯಾವುದೇ ಮಾಧ್ಯಮ ಉಪಕರಣಗ ಳನ್ನು ಹೊಂದಿಲ್ಲ. ಹೀಗಾಗಿ ಆನ್‌ಲೈನ್‌, ಆಫ್‌ಲೈನ್‌ ಪಾಠ ಮಾಡುವ ಇಲಾಖೆಯ ಯೋಜನೆ ಫಲಪ್ರದವಾಗುವ ಸಾಧ್ಯತೆ ತೀರಾ ಕಡಿಮೆಯಾಗಿದೆ.

ಸಮೀಕ್ಷೆಯ ಅಂಕಿ-ಅಂಶ: ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಜಿಲ್ಲೆಯ ಚನ್ನಗಿರಿ ತಾಲೂಕಿನಲ್ಲಿ 40,373, ದಾವಣಗೆರೆ ಉತ್ತರ ವಲಯದಲ್ಲಿ 49,920, ದಾವಣಗೆರೆ ದಕ್ಷಿಣ ವಲಯದಲ್ಲಿ 70,840, ಹರಿಹರ ತಾಲೂಕಿನಲ್ಲಿ 29,212, ಹೊನ್ನಾಳಿ ತಾಲೂಕಿನಲ್ಲಿ 32,812, ಜಗಳೂರು ತಾಲೂಕಿನಲ್ಲಿ 27,583 ಸೇರಿ ಒಟ್ಟು 2,50,740 ವಿದ್ಯಾರ್ಥಿಗಳು ಶಾಲೆಗೆ ದಾಖಲಾಗಿದ್ದಾರೆ.

ಚನ್ನಗಿರಿ ತಾಲೂಕಿನಲ್ಲಿ 29,664, ದಾವಣಗೆರೆ ಉತ್ತರ ವಲಯದಲ್ಲಿ 19,721, ದಾವಣಗೆರೆ ದಕ್ಷಿಣ ವಲಯದಲ್ಲಿ 45,951, ಹರಿಹರ ತಾಲೂಕಿನಲ್ಲಿ 12,871, ಹೊನ್ನಾಳಿ ತಾಲೂಕಿನಲ್ಲಿ 20,608, ಜಗಳೂರು ತಾಲೂಕಿನಲ್ಲಿ 10,664 ಸೇರಿದಂತೆ ಒಟ್ಟು 1,39,479 ವಿದ್ಯಾರ್ಥಿಗಳಲ್ಲಿ ಇಂಟರ್‌ನೆಟ್‌ ಸಹಿತ ಸ್ಮಾರ್ಟ್‌ಫೋನ್‌ ಇದೆ.

ಇನ್ನು ಚನ್ನಗಿರಿ ತಾಲೂಕಿನಲ್ಲಿ 7501, ದಾವಣಗೆರೆ ಉತ್ತರ ವಲಯದಲ್ಲಿ 15,382, ದಾವಣಗೆರೆ ದಕ್ಷಿಣ ವಲಯದಲ್ಲಿ 16,067, ಹರಿಹರ ತಾಲೂಕಿನಲ್ಲಿ 10,051, ಹೊನ್ನಾಳಿ ತಾಲೂಕಿನಲ್ಲಿ 8804, ಜಗಳೂರು ತಾಲೂಕಿನಲ್ಲಿ 9199 ಸೇರಿದಂತೆ ಒಟ್ಟು 67,004 ವಿದ್ಯಾರ್ಥಿಗಳಲ್ಲಿ ಇಂಟರ್‌ನೆಟ್‌ರಹಿತ ಕೀಪ್ಯಾಡ್‌ ಮೊಬೈಲ್‌ ಇದೆ.

ಅದೇ ರೀತಿ ಚನ್ನಗಿರಿ ತಾಲೂಕಿನಲ್ಲಿ 3208, ದಾವಣಗೆರೆ ಉತ್ತರ ವಲಯದಲ್ಲಿ 14,817, ದಾವಣಗೆರೆ ದಕ್ಷಿಣ ವಲಯದಲ್ಲಿ 8822, ಹರಿಹರ ತಾಲೂಕಿನಲ್ಲಿ 6290, ಹೊನ್ನಾಳಿ ತಾಲೂಕಿನಲ್ಲಿ 3400, ಜಗಳೂರು ತಾಲೂಕಿನಲ್ಲಿ 7720 ಸೇರಿದಂತೆ ಒಟ್ಟು 44,257ವಿದ್ಯಾರ್ಥಿಗಳಲ್ಲಿ ಯಾವುದೇ ಮಾಧ್ಯಮ ಉಪಕರಣಗಳೇ ಇಲ್ಲ. ಹಳ್ಳಿ ಮಕ್ಕಳಿಗೆ ಟಿವಿಯೇ ಆಸರೆ: ಶಿಕ್ಷಣ ಇಲಾಖೆ ನಡೆಸಿದ ಮೊಬೈಲ್‌ ಸಾಧನ ಸಮೀಕ್ಷೆಯನ್ನು ಗಮನಿಸಿದಾಗ ಇದರಲ್ಲಿ ಪಟ್ಟಣ, ನಗರ, ಮಹಾನಗರ ಪ್ರದೇಶಗಳಲ್ಲಿ ವಾಸವಾಗಿರುವ ಮಕ್ಕಳಲ್ಲಿಯೇ ಹೆಚ್ಚಾಗಿ ಇಂಟರ್‌ ನೆಟ್‌ ಸಹಿತ ಸ್ಮಾರ್ಟ್‌ಫೋನ್‌ ಲಭ್ಯವಿದೆ.

ಗ್ರಾಮೀಣ ಪ್ರದೇಶದ ಮಕ್ಕಳ ಮನೆಗಳಲ್ಲಿ ಕೀಪ್ಯಾಡ್‌ ಮೊಬೈಲ್‌ಗ‌ಳೇ ಅಧಿಕವಾಗಿವೆ. ಹೀಗಾಗಿ ಗ್ರಾಮೀಣ ಪ್ರದೇಶದ ಮಕ್ಕಳೇ ಹೆಚ್ಚಾಗಿ ಆನ್‌ಲೈನ್‌ ಮತ್ತು ಆಫ್‌ಲೈನ್‌ ಪಾಠದಿಂದ ವಂಚಿತರಾಗುತ್ತಿದ್ದಾರೆ.

ಈ ಮಕ್ಕಳಿಗೆ ದೂರದರ್ಶನದಲ್ಲಿ ಪ್ರಸಾರವಾಗುತ್ತಿರುವ ಸಂವೇದ ಪಾಠಗಳೇ ಆಸರೆಯಾಗಿದೆ. ಹಳ್ಳಿ ಮಕ್ಕಳ ನಿರಂತರ ಕಲಿಕೆಗೆ ಸೌಲಭ್ಯಗಳೇ ಅಡ್ಡಿಯಾಗಿ ಪರಿಣಮಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next