ದಾವಣಗೆರೆ: ಸಮರ್ಥನಂ ಅಂಗವಿಕಲರ ಸಂಸ್ಥೆಯು ಸರ್ವಿಸ್ ಮ್ಯಾಕ್ಸ್ ಮತ್ತು ಇಂಡಸ್ ಬ್ಯಾಂಕ್ ಸಹಯೋಗದೊಂದಿಗೆ 48.25 ಲಕ್ಷ ರೂ. ಮೌಲ್ಯದ ವೈದ್ಯಕೀಯ ಪರಿಕರಗಳನ್ನು ಜಿಲ್ಲಾಸ್ಪತ್ರೆಗೆ ಕೊಡುಗೆಯಾಗಿ ನೀಡಿದೆ.
ವಿಶ್ವ ಕುರುಡರ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರು ಹಾಗೂ ಸಮರ್ಥನಂ ಅಂಗವಿಕಲರ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ್ ಜಿ.ಕೆ. ಅವರು ಸಂಸದ ಡಾ| ಜಿ.ಎಂ. ಸಿದ್ದೇಶ್ವರ, ಶಾಸಕ ಎಸ್.ಎ. ರವೀಂದ್ರನಾಥ್, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಪಂ ಸಿಇಒ ಡಾ| ವಿಜಯಮಹಾಂತೇಶ ಹಾಗೂ ಇತರ ಗಣ್ಯರ ಸಮ್ಮುಖದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ಡಾ| ಜಿ.ಎಂ. ಸಿದ್ದೇಶ್ವರ, ಸರ್ಕಾರವೇ ಎಲ್ಲ ಕೆಲಸ ಮಾಡಲು ಆಗುವುದಿಲ್ಲ. ಸಂಘ-ಸಂಸ್ಥೆಗಳು ಸಹಾಯ ಮಾಡಿದಲ್ಲಿ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಿಸಲು ಸಮರ್ಥವಾಗಿ ಕೆಲಸ ಮಾಡಲು ಅನುಕೂಲವಾಗುತ್ತದೆ ಎಂದರು.
ವಿಶ್ವ ಕುರುಡರ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಹಾಗೂ ಸಮರ್ಥನಂ ಅಂಗವಿಕಲರ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ್ ಜಿ.ಕೆ ಮಾತನಾಡಿ, ವಿಕಲಚೇತನರು ಸಮಾಜದ ಪ್ರಮುಖ ಅಂಗ. ಸಮರ್ಥನಂ ಅಂಗವಿಕಲರ ಸಂಸ್ಥೆಯು ಪ್ರಮುಖವಾಗಿ ವಿಕಲಚೇತನರ ಏಳಿಗೆಗಾಗಿ ಕಾರ್ಯ ನಿರ್ವಹಿಸುತಿದ್ದು, ಅವರ ಅಭಿವೃದ್ಧಿಗೆ ಶ್ರಮಿಸುತ್ತದೆ ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ| ನಾಗರಾಜ್, ಜಿಲ್ಲಾ ಚಿಗಟೇರಿ ಆಸ್ಪತ್ರೆ ಸರ್ಜನ್ ಡಾ| ಜಯಪ್ರಕಾಶ್, ಡಾ| ಸಂಜಯ್, ಸಂಸ್ಥೆಯ ಸಿಬ್ಬಂದಿ ಹಾಗೂ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ಇದ್ದರು.