ದಾವಣಗೆರೆ: ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಮಂಜೂರು ಮಾಡಿಸಲು ಸರ್ವ ಪ್ರಯತ್ನ ನಡೆದಿದೆ. ಇದನ್ನು ತಡೆಯುವ ಏಕೈಕ ಉದ್ದೇಶದಿಂದ ಮಾಜಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಹಾಗೂ ಶಾಸಕ ಡಾ| ಶಿವಶಂಕರಪ್ಪ, ಸಂಸದ ಡಾ| ಜಿ.ಎಂ. ಸಿದ್ದೇಶ್ವರ ವಿರುದ್ಧ ವೈಯಕ್ತಿಕವಾಗಿ ಟೀಕೆ ಮಾಡುತ್ತಿದ್ದಾರೆ ಎಂದು ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್ ಆರೋಪಿಸಿದರು.
ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಪ್ರಾರಂಭವಾದರೆ ಚಿಗಟೇರಿ ಆಸ್ಪತ್ರೆಯೊಂದಿಗೆ ಸೇರ್ಪಡೆಯಾ ಗಿರುವ ಶಾಮನೂರು ಒಡೆತನದ ಮೆಡಿಕಲ್ ಕಾಲೇಜಿಗೆ ಚಿಗಟೇರಿ ಆಸ್ಪತ್ರೆ ಕೈತಪ್ಪುತ್ತದೆ. ಇದರಿಂದ ವರ್ಷಕ್ಕೆ 250 ಕೋಟಿ ರೂ. ನಷ್ಟವಾಗಲಿದೆ. ಆದ್ದರಿಂದ ಸಂಸದರ ವಿರುದ್ಧ ವಿನಾಕಾರಣ ಆರೋಪ ಮಾಡುತ್ತಿದ್ದಾರೆ ಎಂದರು.
ಬಿ.ಎಸ್. ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿ ಎಂಬ ಹೇಳಿಕೆ ಹಿಂದೆ ಸರ್ಕಾರಿ ವೈದ್ಯಕೀಯ ಕಾಲೇಜು ತಡೆಯುವ ಹುನ್ನಾರವಿದೆ. ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಬಂದರೆ ಸ್ವಾಗತಿಸುತ್ತೇನೆ ಎಂಬ ಶಾಮನೂರು ಶಿವಶಂಕರಪ್ಪ ಹೇಳಿಕೆ ಕೇವಲ ಕಣ್ಣೊರೆಸುವ ತಂತ್ರ. ಇವರು ಯಡಿಯೂರಪ್ಪ ಅವರಿಂದ ತಮಗೆ ಬೇಕಾದ ಕೆಲಸ ಮಾಡಿಸಿಕೊಂಡು ಬರುತ್ತಾರೆ. ಹೀಗಾಗಿ ಇಬ್ಬರೂ ಕೇವಲ ಕಾಂಗ್ರೆಸ್ ಸದಸ್ಯರಲ್ಲ, ಸರ್ವ ಪಕ್ಷಗಳ ಸದಸ್ಯರಾಗಿದ್ದಾರೆ ಎಂದು ಲೇವಡಿ ಮಾಡಿದರು.
ಶಾಮನೂರು ಒಡೆತನದ ಎರಡೂ ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿ ತರಿಗೆ ಸರ್ಕಾರದ ಮಾರ್ಗಸೂಚಿ ಪ್ರಕಾರ ಬೆಡ್ ನೀಡಿಲ್ಲ. ಬಡವರಿಂದ ಏಳೆಂಟು ಲಕ್ಷ ರೂ. ಪಡೆದು ಚಿಕಿತ್ಸೆ ನೀಡಿರುವ ದಾಖಲೆ ನಮ್ಮ ಬಳಿ ಇದೆ. ಇದರಲ್ಲಿಯೇ ಕೋಟ್ಯಂತರ ರೂ. ಲಾಭ ಮಾಡಿಕೊಂಡಿರುವ ಇವರು, ಮೂರ್ನಾಲ್ಕು ಕೋಟಿ ರೂ. ವ್ಯಯಿಸಿ ಲಸಿಕೆ ಹಾಕುವ ನಾಟಕ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಸಂಸದರು ಕೋವಿಡ್ ಸಮಯದಲ್ಲಿ ರಾಜಕೀಯ ಸಂಘರ್ಷ ಬೇಡ ಎಂದು ಸುಮ್ಮನಿದ್ದಾರೆ. ಅವರು ಭೀಮಸಮುದ್ರದ ಭೀಮ ಎಂದು ಬಣ್ಣಿಸಿದರು. ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಮಹಾನಗರ ಪಾಲಿಕೆ ಮಾಜಿ ಸದಸ್ಯ ಶಿವಕುಮಾರ ದೇವರಮನಿ ಇನ್ನಿತರರು ಸುದ್ದಿಗೋಷ್ಠಿಯಲ್ಲಿದ್ದರು.