ಎಚ್.ಕೆ. ನಟರಾಜ
ದಾವಣಗೆರೆ: ಕೊರೊನಾ ಲಸಿಕೆ ಹಾಕಿಸಿಕೊಳ್ಳಲು ಲಸಿಕಾ ಕೇಂದ್ರಕ್ಕೆ ಬಂದವರು ಕಡ್ಡಾಯವಾಗಿ ಕೊರೊನಾ ಸೋಂಕು ಪರೀಕ್ಷೆಯನ್ನೂ ಮಾಡಿಸಿಕೊಳ್ಳುವಂತೆ ಆರೋಗ್ಯ ಸಿಬ್ಬಂದಿ ಸಾರ್ವಜನಿಕರ ಮೇಲೆ ಒತ್ತಡ ಹೇರುತ್ತಿರುವುದು ಬೆಳಕಿಗೆ ಬಂದಿದೆ.
ಆರೋಗ್ಯ ಇಲಾಖೆ ಕೊರೊನಾ ಲಕ್ಷಣಗಳಿದ್ದರೆ ಮಾತ್ರ ಕೆಲ ದಿನ ಲಸಿಕೆ ಬೇಡ ಎಂದಿದೆಯೇ ಹೊರತು ಕೊರೊನಾ ಲಸಿಕೆ ಪಡೆಯಲು ಕೊರೊನಾ ಸೋಂಕು ಪರೀಕ್ಷೆ ಕಡ್ಡಾಯ ಎಂದು ಎಲ್ಲಿಯೂ ಆದೇಶ ಹೊರಡಿಸಿಲ್ಲ. ಆದರೆ ಲಸಿಕಾ ಕೇಂದ್ರದ ಆರೋಗ್ಯ ಸಿಬ್ಬಂದಿ ಮಾತ್ರ ಲಸಿಕೆಗೆ ಬಂದವರನ್ನು ಕಡ್ಡಾಯವಾಗಿ ಕೊರೊನಾ ಸೋಂಕು ಪರೀಕ್ಷೆಗೊಳಪಡಿಸಿ ಗಂಟಲು ದ್ರವ ಸಂಗ್ರಹಿಸುತ್ತಿರುವುದು ಸಾರ್ವಜನಿಕರಿಗೆ ಕಿರಿಕಿರಿಯನ್ನುಂಟು ಮಾಡಿದೆ.
ಲಸಿಕೆ ಹಾಕಿಸಿಕೊಳ್ಳಲು ಬರುವ ಜನರನ್ನು ಅನಗತ್ಯವಾಗಿ ಕೊರೊನಾ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಈ ಬಗ್ಗೆ ಯಾರಾದರೂ ಪ್ರಶ್ನಿಸಿದರೆ, ಸೋಂಕು ಪರೀಕ್ಷೆಗೊಳಪಡಿಸಲು ಹಿರಿಯ ಅಧಿಕಾರಿಗಳಿಂದ ಮೌಖೀಕ ಆದೇಶವಿದೆ ಎನ್ನುತ್ತಿದ್ದಾರೆ. ಸಿಬ್ಬಂದಿಯ ಈ ನಡೆಯಿಂದ ಲಸಿಕೆ ಹಾಕಿಸಿಕೊಳ್ಳಲು ಕೆಲವರು ಹಿಂದೇಟು ಹಾಕುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಇದು ಮುಂದೆ ಲಸಿಕೆ ಗುರಿ ಸಾಧನೆಗೂ ಹಿನ್ನಡೆ ತರುವ ಅಪಾಯವೂ ಇದೆ ಎಂಬುದನ್ನು ಅಧಿಕಾರಿ ವರ್ಗ ಅರಿಯಬೇಕಾಗಿದೆ.
ಗುರಿ ಸಾಧನೆಗಾಗಿ ಪರೀಕ್ಷೆ: ಜಿಲ್ಲೆಯಲ್ಲಿ ಪ್ರತಿದಿನ ನಾಲ್ಕೈದು ಸಾವಿರ ಕೊರೊನಾ ಸೋಂಕು ಪರೀಕ್ಷೆಯಾಗುತ್ತಿತ್ತು. ಈಗ ಸೋಂಕು ಕಡಿಮೆಯಾಗುತ್ತಿದ್ದಂತೆ ಪರೀಕ್ಷೆಗೆ ಯಾರೂ ಮುಂದೆ ಬಾರದೇ ಇರುವುದರಿಂದ ಪ್ರತಿ ದಿನ ಒಂದು ಸಾವಿರ ಪರೀಕ್ಷೆ ಸಹ ಆಗುತ್ತಿಲ್ಲ.
ಕೊರೊನಾ ಪಾಸಿಟಿವ್ ಬಂದವರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರನ್ನು ಸೇರಿಸಿ ಪರೀಕ್ಷೆಗೊಳಪಡಿಸಿದರೂ ಕನಿಷ್ಠ 2500 ಗುರಿ ತಲುಪಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಆರೋಗ್ಯ ಇಲಾಖೆ ಅಧಿಕಾರಿಗಳು ಗುರಿ ಸಾಧನೆಗಾಗಿ ಕೊರೊನಾ ಲಸಿಕೆಗೆ ಬಂದವರನ್ನು ಕೋವಿಡ್ ಪರೀಕ್ಷೆಗೊಳಪಡಿಸುತ್ತಿದ್ದಾರೆ.
ಈ ರೀತಿಯ ಒತ್ತಡದ ಹಾಗೂ ಅನಗತ್ಯ ಸೋಂಕು ಪರೀಕ್ಷೆ ಅನೇಕರಿಗೆ ಕಿರಿಕಿರಿಯಾಗಿ ಪರಿಣಮಿಸಿದೆ.