ದಾವಣಗೆರೆ: ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ನೀಡಲು ಮುಖ್ಯಮಂತ್ರಿಗಳು ಸಮ್ಮತಿ ನೀಡಿದ್ದು ಪಿಪಿಪಿ (ಪಬ್ಲಿಕ್-ಪ್ರೈವೇಟ್ ಪಾರ್ಟನರ್‌ಶಿಪ್) ಮಾದರಿಯಲ್ಲಿ ಶೀಘ್ರದಲ್ಲಿಯೇ ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಗುವುದು ಎಂದು ನಗರಾಭಿವೃದ್ಧಿ ಇಲಾಖೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ್ ಹೇಳಿದರು.
ಸ್ಮಾರ್ಟ್‌ಸಿಟಿ ಯೋಜನೆಯಡಿ ನಗರದಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ಮಂಗಳವಾರ ವೀಕ್ಷಣೆ ಮಾಡಿದ ಬಳಿಕ ಅವರು ಮಾತನಾಡಿದರು. ಜಿಲ್ಲೆಯ ಜನರ ಬಹು ದಿನಗಳ ಬೇಡಿಕೆಯಾಗಿದ್ದ ಸರ್ಕಾರಿ ವೈದ್ಯಕೀಯ ಕಾಲೇಜು ಕಟ್ಟಡವನ್ನು ಜಿಲ್ಲಾ ಆಸ್ಪತ್ರೆಯ ಪಕ್ಕದಲ್ಲಿಯೇ ನಿರ್ಮಿಸಲು ಯೋಜನೆ ಸಿದ್ಧಪಡಿಸಲಾಗಿದೆ ಎಂದರು.
ನಂತರ ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ನಿರ್ಮಾಣ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಅಲ್ಲಿನ ಕಾಮಗಾರಿಗಳನ್ನು ವೀಕ್ಷಿಸಿದ ಸಚಿವರು, ಕಾಮಗಾರಿ ತ್ವರಿತಗತಿಯಲ್ಲಿ ಸಾಗಬೇಕು. ಕೊರೊನಾ ಹಿನ್ನೆಲೆಯಲ್ಲಿ ಕಾಮಗಾರಿಗಳು ಸ್ಥಗಿತಗೊಂಡಿದ್ದು, ಈ ಕಾಮಗಾರಿ 120 ಕೋಟಿ ರೂ. ವೆಚ್ಚದ್ದಾಗಿದೆ.
ಕಾಮಗಾರಿಗೆ ಹೆಚ್ಚಿನ ಸಂಖ್ಯೆಯ ಕಾರ್ಮಿಕರು ಮತ್ತು ಪರಿಕರಗಳನ್ನು ಬಳಸಿಕೊಂಡು ದಿನಕ್ಕೆ ಎರಡು ಪಾಳಿಯಂತೆ ಕೆಲಸ ನಡೆಸಿ. ಇನ್ನು ಒಂದು ವರ್ಷದ ಒಳಗಾಗಿ ಎಲ್ಲ ಕೆಲಸ ಪೂರ್ಣಗೊಳ್ಳಬೇಕು ಹಾಗೂ ಸ್ಮಾರ್ಟ್ ಸಿಟಿ ಯೋಜನೆಯ ಪ್ರಕಾರ ಕೆಎಸ್‌ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಬಿಗ್ ಬಜಾರ್, ಮಲ್ಟಿಪ್ಲೆಕ್ಸ್, ಮಾಲ್ ಮತ್ತು ಎಲ್ಲ ಮೂಲ ಸೌಕರ್ಯಗಳನ್ನು ಒಳಗೊಂಡ ಸುಸಜ್ಜಿತವಾದ ತಂಗುದಾಣವಾಗಿ ನಿರ್ಮಾಣವಾಗಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಖಾಸಗಿ ಬಸ್ ನಿಲ್ದಾಣ 25 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದು, ಇನ್ನೂ ಪೂರ್ಣಗೊಂಡಿಲ್ಲ. ಈ ನಿಲ್ದಾಣದಲ್ಲಿ ಎರಡು ಎಲಿವೇಟರ್, ಮೂರು ಲಿಫ್ rಗಳನ್ನು ಒಳಗೊಂಡಂತಹ ಸುಂದರವಾದ ಖಾಸಗಿ ಬಸ್ ನಿಲ್ದಾಣವಾಗಿ ನಿರ್ಮಾಣವಾಗಬೇಕಾಗಿದೆ. ಇನ್ನು ಆರು ತಿಂಗಳ ಒಳಗಾಗಿ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಸಂಚಾರ ಮಾಡಲು ಅನುಕೂಲವಾಗುವಂತೆ ವ್ಯವಸ್ಥಿತವಾದ ನಿಲ್ದಾಣ ನಿರ್ಮಿಸಬೇಕು ಎಂದರು.
ನಗರದ ಜಯದೇವ ಸರ್ಕಲ್‌ಗೆ ಭೇಟಿ ನೀಡಿ ಅಲ್ಲಿನ ಪಾದಚಾರಿಗಳಿಗೆ ಓಡಾಡಲು ವ್ಯವಸ್ಥಿತವಾದ ಫುಟ್‌ಪಾತ್ ನಿರ್ಮಾಣ ನಿಧಾನಗತಿಯಲ್ಲಿ ಸಾಗುತ್ತಿದ್ದು, ಸಾರ್ವಜನಿಕರು ಓಡಾಡಲು ಸ್ಥಳಾವಕಾಶ ಕಿರಿದಾಗಿದೆ. ವಾಹನಗಳ ಸಂಚಾರಕ್ಕೂ ಅಡೆತಡೆ ಉಂಟಾಗುತ್ತಿದೆ. ಫುಟ್‌ಪಾತ್‌ಗಳ ಮೇಲೆ ಬೀದಿಬದಿ ವ್ಯಾಪಾರ ಮಾಡುತ್ತಾರೆ. ಇದರಿಂದಾಗಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಗುಂಪು ಸೇರುವುದರಿಂದ ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತದೆ.
ಹೀಗಾಗಿ ಫುಟ್‌ಪಾತ್ ಕಾಮಗಾರಿಯನ್ನು ತೀವ್ರಗತಿಯಲ್ಲಿ ಮುಗಿಸುವ ಕಾರ್ಯವಾಗಬೇಕು ಎಂದು ಸೂಚನೆ ನೀಡಿದರು.