ದಾವಣಗೆರೆ: ರಕ್ತದಾನ ಮಾಡುವುದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಸದೃಢವಾಗಲಿದೆ. ಯುವ ಜನಾಂಗ ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನಕ್ಕೆ ಮುಂದಾಗಬೇಕು ಎಂದು ಆನಗೋಡು ಜಿಪಂ ಸದಸ್ಯ ಕೆ.ಎಸ್. ಬಸವಂತಪ್ಪ ಮನವಿ ಮಾಡಿದರು.
ಚನ್ನಗಿರಿ ತಾಲೂಕಿನ ಬಸವಾಪಟ್ಟಣ ಗ್ರಾಮದ ಜನತಾ ವಿದ್ಯಾಲಯದಲ್ಲಿ ಮಾಯಕೊಂಡ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಬಸವಾಪಟ್ಟಣ ಬ್ಲಾಕ್ ಕಾಂಗ್ರೆಸ್ ವತಿಯಿಂದ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಮತ್ತು ಶಾಸಕ ಶಾಮನೂರು ಶಿವಶಂಕರಪ್ಪ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಕೊರೊನಾದಂತಹ ಸಂದಿಗ್ಧ ಸಂದರ್ಭದಲ್ಲಿ ರೋಗಿಗಳಿಗೆ ರಕ್ತ ಅತ್ಯವಶ್ಯಕವಾಗಿದ್ದು, ರಕ್ತದ ಕೊರತೆ ಆಗುತ್ತಿರುವಂತಹ ಸಂದರ್ಭದಲ್ಲಿ ಯುವ ಜನಾಂಗ ಒಳಗೊಂಡಂತೆ ಅರ್ಹರು ರಕ್ತದಾನ ಮಾಡುವ ಮೂಲಕ ಬಡ ರೋಗಿಗಳ ಬಾಳಿಗೆ ಬೆಳಕಾಗಬೇಕು. ಕೊರೊನಾ ಲಸಿಕೆ ಹಾಕಿಸಿಕೊಂಡವರು 15 ದಿನ ಕೊಡುವುದಕ್ಕೆ ಬರುವುದಿಲ್ಲ. ಆದರೆ, ಲಸಿಕೆ ಹಾಕಿಸಿಕೊಂಡು 15 ದಿನ ಕಳೆದವರು ರಕ್ತದಾನ ಮಾಡಲು ಅವಕಾಶವಿದೆ. ರಕ್ತದಾನ ಮಾಡಲು ಮುಂದೆ ಬರಬೇಕು ಎಂದು ಮನವಿ ಮಾಡಿದರು.
ಕೊರೊನಾ ಎರಡನೇ ಅಲೆ ನಿಯಂತ್ರಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿವೆ. ಲಾಕ್‌ಡೌನ್ ನಿಂದ ಜನಸಾಮಾನ್ಯರ ಬದುಕು ಬೀದಿಗೆ ಬಂದರೂ ಕೂಡ ರಾಜ್ಯ ಸರ್ಕಾರ ನೆರವಿಗೆ ಬರಲಿಲ್ಲ. ಕೇವಲ ಪರಿಹಾರ ಘೋಷಣೆ ಮಾಡಿತು ವಿನಃ ಘೋಷಣೆ ಮಾಡಿದ ಪರಿಹಾರ ಅವರ ಖಾತೆಗಳಿಗೆ ಬಿದ್ದಿಲ್ಲ. ಕಾಂಗ್ರೆಸ್ ಕಾರ್ಯಕರ್ತರು ಬಡವರು, ರೋಗಿಗಳ ನೆರವಿಗಾಗಿ ರಕ್ತದಾನ, ಆಹಾರ ಪೊಟ್ಟಣ ವಿತರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಬಸವಾಪಟ್ಟಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ.ನಾಗರಾಜ್ ಮಾತನಾಡಿ, ಕೊರೊನಾ ಸಂಕಷ್ಟದ ಸಮಯದಲ್ಲೂ ಕಾಂಗ್ರೆಸ್ ಯುವ ಘಟಕದ ಯುವಕರು ರಕ್ತದಾನ ಶಿಬಿರ ಆಯೋಜಿಸುವ ಬಡ ರೋಗಿಗಳಿಗೆ ನೆರವಾಗುತ್ತಿರುವುದು ಸಂತಸ ತಂದಿದೆ. ಸಾಮಾಜಿಕ ಸೇವೆ ಮಾಡುವ ಮೂಲಕ ಪಕ್ಷ ಸಂಘಟನೆಗೆ ಮುಂದಾಗಬೇಕು ಎಂದು ತಿಳಿಸಿದರು.
ತಾಲೂಕು ಪಂಚಾಯತ್ ಸದಸ್ಯ ಜಿ.ಪಿ. ಪ್ರಕಾಶ್, ಯುವ ಕಾಂಗ್ರೆಸ್ ಅಧ್ಯಕ್ಷ ಓ.ಜಿ. ಕಿರಣ್, ಜಿ.ಎಂ. ಗಂಗಾಧರ, ಬಿ.ಜಿ. ಅಮಿತ್, ಮಾಯಕೊಂಡ ವಿಧಾನಸಭಾ ಕ್ಷೇತ್ರ ವಿದ್ಯಾರ್ಥಿ ಕಾಂಗ್ರೆಸ್ ಅಧ್ಯಕ್ಷ ಡಿ.ಜಿ. ವಿನಾಯಕ, ಕಾರ್ಮಿಕ ವಿಭಾಗದ ಇ. ಮಂಜುನಾಥ್, ಮಂಜುನಾಥ್ ಚಿರಡೋಣಿ ಕಾರ್ಯಕರ್ತರು ಇದ್ದರು.