Advertisement

ಜು. 5ರವರೆಗೂ ಇರುತ್ತೆ ಬೀಗ ಮುದ್ರೆ

08:50 PM Jun 21, 2021 | Team Udayavani |

ದಾವಣಗೆರೆ: ಕೊರೊನಾ ಪ್ರಕರಣಗಳು ಸತತವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಜೂ.21 ರ ಬೆಳಗ್ಗೆ 6 ರಿಂದ ಜು.5 ರ ಬೆಳಗ್ಗೆ 5 ರವರೆಗೆ ಲಾಕ್‌ ಡೌನ್‌ ಮುಂದುವರೆಯಲಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.

Advertisement

ಭಾನುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಕೊರೊನಾ ಮಾರ್ಗಸೂಚಿಗಳ ಪಾಲನೆಯ ಷರತ್ತಿಗೆ ಒಳಪಟ್ಟು ಗರಿಷ್ಠ ಶೇ. 50ರ ಆಸನಗಳ ಸಾಮರ್ಥ್ಯದೊಂದಿಗೆ ಬಸ್‌ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಬಸ್‌ಗಳಲ್ಲಿ ನಿಂತು ಪ್ರಯಾಣಿಸಲು ಅವಕಾಶ ಇರುವುದಿಲ್ಲ ಎಂದರು.

ಪ್ರತಿ ದಿನ ಸಂಜೆ 7 ಗಂಟೆಯಿಂದ ಬೆಳಗ್ಗೆ 5 ರ ವರೆಗೆ ರಾತ್ರಿ ಕರ್ಫ್ಯೂ ಇರಲಿದೆ. ಶುಕ್ರವಾರ ಸಂಜೆ 7 ರಿಂದ ಸೋಮವಾರ ಬೆಳಗ್ಗೆ 5 ರ ವರೆಗೆ ವಾರಂತ್ಯದ ಕರ್ಫ್ಯೂ ಜಾರಿ ಮಾಡಲಾಗಿದೆ. ಜಿಲ್ಲೆಯಲ್ಲಿ ಪಾಸಿಟಿವಿಟಿ ದರ ಶೇ. 6.37 ರಷ್ಟಿದ್ದು ಮುಂದಿನ 2-3ದಿನಗಳಲ್ಲಿ ಶೇ. 5 ರೊಳಗೆ ತರಲು ಪ್ರಯತ್ನಿಸಲಾಗುತ್ತಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹೊಸ ನಿಬಂಧನೆಗಳನ್ವಯ ಕೆಲವು ಕಟ್ಟುನಿಟ್ಟಿನ ಮಾರ್ಗಸೂಚಿಗಳು ಜು. 5 ರವರೆಗೆ ಜಾರಿಯಲ್ಲಿರುತ್ತದೆ. ಎಲ್ಲ ಅಂಗಡಿ ಮುಂಗಟ್ಟು, ವಾಣಿಜ್ಯ ಚಟುವಟಿಕೆ ನಿರ್ಬಂಧಿಸಲಾಗಿದೆ. ಸರಕು ಸಾಗಾಣಿಕೆ ವಾಹನಗಳಿಗೆ ಸಂಚಾರಕ್ಕೆ ಅವಕಾಶ ಇರುವ ಹಿನ್ನಲೆಯಲ್ಲಿ  ರಶೀದಿಯಲ್ಲಿ ನಮೂದಿತ ವಿಳಾಸದ ಅಂಗಡಿ, ಗೋದಾಮುಗಳಲ್ಲಿ ಇಳಿಸಲು ಮತ್ತು ತೆಗೆದುಕೊಂಡು ಹೋಗಲು ಮಾತ್ರ ದಿನ ಪೂರ್ತಿ ಅವಕಾಶ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಕೃಷಿ ಸಂಬಂಧಿತ ಕಾರ್ಯಚಟುವಟಿಕೆಗಳಿಗೆ ಅನುಮತಿ ಇದೆ. ಸೋಮವಾರ ದಿಂದ ಶುಕ್ರವಾರದವರೆಗೆ ಬೆಳಗ್ಗೆ 6 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ವ್ಯಾಪಾರ ವಹಿವಾಟು ನಡೆಸಲು ಅನುಮತಿ ನೀಡಲಾಗಿದೆ. ಸಾರ್ವಜನಿಕರು ತುರ್ತು ಅಗತ್ಯ ಚಟುವಟಿಕೆಗಳಿಗೆ ವಾಹನಗಳಲ್ಲಿ ಸಂಚರಿಸಲು ಅವಕಾಶ ನೀಡಿದೆ. ಅನಗತ್ಯವಾಗಿ ಯಾವುದೇ ವಾಹನ ಸಂಚಾರಕ್ಕೆ ಅವಕಾಶ ಇರುವುದಿಲ್ಲ.

Advertisement

ನಿಗದಿತ ಮದುವೆ ಕಾರ್ಯಕ್ರಮಗಳನ್ನು ನಡೆಸಲು, ಸಂಬಂಧಿಸಿದ ಪ್ರಾಧಿಕಾರದಿಂದ ಅನುಮತಿ ಪಡೆದು ಗರಿಷ್ಠ 40 ಹತ್ತಿರದ ಸಂಬಂಧಿಗಳು ಮಾತ್ರ ಭಾಗವಹಿಸಿ ಮನೆಯಲ್ಲಿ ಮದುವೆ ಕಾರ್ಯಕ್ರಮ ನಡೆಸಲು ಅವಕಾಶ ನೀಡಲಾಗಿದೆ. ಸಾರ್ವಜನಿಕರಿಗೆ ಊಟದ ವ್ಯವಸ್ಥೆ ನಿರ್ಬಂಧಿಸಲಾಗಿದೆ. ಉಳಿದ ಎಲ್ಲ ಸಾಮಾಜಿಕ, ಧಾರ್ಮಿಕ ಸಭೆ, ಸಮಾರಂಭಗಳಿಗೆ ಅವಕಾಶ ಇಲ್ಲ. ಅಂತ್ಯಸಂಸ್ಕಾರಗಳಲ್ಲಿ ಗರಿಷ್ಟ 5 ಜನರಿಗೆ ಮಾತ್ರ ಭಾಗವಹಿಸಲು ಅನುಮತಿ ಇದೆ. ದಾವಣಗೆರೆ ಜಿಲ್ಲೆಗೆ ಅಗಮಿಸುವವರನ್ನು ಪ್ರತಿ ಚೆಕ್‌ಪೋಸ್ಟ್‌ಗಳಲ್ಲಿ ವಿಚಾರಣೆ ನಡೆಸಿ, ಜಿಲ್ಲೆಯಲ್ಲಿಯೇ ವಾಸ್ತವ್ಯ ಹೂಡುವುದಾದಲ್ಲಿ ಎಲ್ಲಿ ತಂಗುತ್ತಾರೆ ಎಂಬ ಬಗ್ಗೆ ಪೂರ್ಣ ವಿಳಾಸ, ಮೊಬೈಲ್‌ ಸಂಖ್ಯೆ ಪಡೆಯಲಾಗುವುದು. ಹೊರ ಜಿಲ್ಲೆಯಿಂದ ಆಗಮಿಸುವವರು ಕಡ್ಡಾಯವಾಗಿ 14 ದಿನಗಳ ಕಾಲ ಹೋಂ ಕ್ವಾರಂಟೈನ್‌ನಲ್ಲಿ ಇರಬೇಕು ಎಂದು ತಿಳಿಸಿದರು.

ತುರ್ತು ವೈದ್ಯಕೀಯ ಸೇವೆಗಳಿಗೆ ಮಾತ್ರ ವಾಹನ ಬಳಕೆ ಮಾಡಬಹುದು. ವೈದ್ಯಕೀಯ ದಾಖಲೆಗಳನ್ನು ಚೆಕ್‌ಪೋಸ್ಟ್‌ಗಳಲ್ಲಿ ತೋರಿಸಬೇಕು. ಇತರೆ ಎಲ್ಲಾ ಖಾಸಗಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಖಾಸಗಿ ಭದ್ರತಾ ಸೇವೆಗಳಿಗೆ ಅನುಮತಿಸಲಾಗಿದೆ. ಕ್ಲಿನಿಕ್‌, ಆಸ್ಪತ್ರೆ, ಲಸಿಕೆ ಹಾಗೂ ಪರೀಕ್ಷೆ ಉದ್ದೇಶಗಳಿಗೆ ಕನಿಷ್ಟ ವೈದ್ಯಕೀಯ ದಾಖಲೆ,ವೈದ್ಯರ ಸಲಹಾ ಚೀಟಿ, ಆಸ್ಪತ್ರೆಯಲ್ಲಿ ದಾಖಲಾದ ವಿವರಗಳ ಹಾಜರಪಡಿಸಿ ಸಂಚರಿಸಲು ಅನುಮತಿಸಿದೆ. ಹೋಟೆಲ್‌, ರೆಸ್ಟೋರೆಂಟ್‌, ಉಪಹಾರ ಗೃಹಗಳು ಪಾರ್ಸಲ್‌ ವಿತರಿಸಲು ಮಾತ್ರ ಅನುಮತಿ ಇದೆ ಎಂದು ತಿಳಿಸಿದರು.

ಕೋವಿಡ್‌-19ಗೆ ಸಂಬಂಧಿಸಿದ ಕಾರ್ಯಕ್ಕೆ ನಿಯೋಜಿಸಿದ ಎಲ್ಲ ಕಚೇರಿ, ಅಧಿಕಾರಿಗಳು ಹಾಗೂ ಸಿಬ್ಬಂದಿ ಸರ್ಕಾರದ ಆದೇಶದಂತೆ ಮೇ 7 ರಂತೆ ಕಾರ್ಯ ನಿರ್ವಹಿಸಬಹುದು. ಆದರೆ ಸಾರ್ವಜನಿಕರ ಭೇಟಿಗೆ ಅವಕಾಶ ಇಲ್ಲ. ಬಿಎಸ್ಸೆನ್ನೆಲ್‌, ಅಂಚೆ, ಬ್ಯಾಂಕ್‌, ಆರ್‌ಬಿಐ ನಿಯಂತ್ರಿತ ಹಣಕಾಸು ಸಂಸ್ಥೆ, ರೈಲ್ವೆ ಮತ್ತು ತತ್ಸಂಬಂಧಿತ ಇಲಾಖೆಯಲ್ಲಿ ಕನಿಷ್ಟ ಸಿಬ್ಬಂದಿಯೊಂದಿಗೆ ಮಾತ್ರ ಕಾರ್ಯನಿರ್ವಹಿಸಲು ಅವಕಾಶ ಇದೆ ಎಂದರು. ಹಾಲು, ಡೈರಿ, ಹಾಲಿನ ಬೂತು, ಪಶು ಆಹಾರ ಅಂಗಡಿಗಳು, ಕಿರಾಣಿ ಅಂಗಡಿ, ಹಣ್ಣು, ತರಕಾರಿ, ಮಾಂಸ ಮತ್ತು ಮೀನು ಹಾಗೂ ಎಲ್ಲಾ ಮದ್ಯದ ಅಂಗಡಿಗಳು ಮತ್ತು ಸಿಎಲ್‌-4 ಸನ್ನದು ಹೊಂದಿರುವ ಕ್ಲಬ್‌ಗಳಲ್ಲಿ ಪಾರ್ಸ್‌ಲ್‌ಗೆ ಮಾತ್ರ ಅವಕಾಶ ಇದೆ. ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸಿಮೆಂಟ್‌, ಕಬ್ಬಿಣ, ಪೇಂಟ್‌ ಇತರೆ ವಸ್ತುಗಳ ಮಾರಾಟಕ್ಕೆ ಅವಕಾಶ ಇದೆ ಎಂದು ತಿಳಿಸಿದರು.

ಗರಿಷ್ಠ ಇಬಬ್ರು ಪ್ರಯಾಣಿಕರ ಸಾಮರ್ಥ್ಯದೊಂದಿಗೆ ಆಟೋ ರಿಕ್ಷಾ ಮತ್ತು ಟ್ಯಾಕ್ಸಿಗಳು ಸಂಚರಿಸಲು ಅನುಮತಿಸಿದೆ. ವಾಕಿಂಗ್‌ ಮತ್ತು ಜಾಗಿಂಗ್‌ ಉದ್ದೇಶಕ್ಕಾಗಿ ಮಾತ್ರ ಉದ್ಯಾನವನಗಳನ್ನು ಬೆಳಗ್ಗೆ 5 ರಿಂದ 10 ರ ವರೆಗೆ ಮಾತ್ರ ತೆರೆಯಲು ಅವಕಾಶವಿದೆ. ಆದರೆ ಯಾವುದೇ ಗುಂಪು ಚಟುವಟಿಕೆಗಳಿಗೆ ಅವಕಾಶ ಇಲ್ಲ. ಅಂತರ ರಾಜ್ಯ ಮತ್ತು ಅಂತರ ಜಿಲ್ಲಾ ಸಂಚಾರವನ್ನು ಮೇ 7ರ ಸರ್ಕಾರದ ಆದೇಶದಂತೆ ಅನುಮತಿಸಲಾಗಿದೆ. ಸೀಮಿತ ಸಂಖ್ಯೆಯಲ್ಲಿ ತಳ್ಳುವ ಗಾಡಿಯ ಮೂಲಕ ತರಕಾರಿ, ಹಣ್ಣು ಮಾರಾಟಕ್ಕೆ ಅವಕಾಶ ಇದೆ ಎಂದರು.

ಜಿಪಂ ಸಿಇಒ ಡಾ| ವಿಜಯಮಹಾಂತೇಶ ದಾನಮ್ಮನವರ್‌, ಜಿಲ್ಲಾ ರಕ್ಷಣಾಧಿಕಾರಿ ಸಿ.ಬಿ. ರಿಷ್ಯಂತ್‌, ಜಿಲ್ಲಾ ಆರೋಗ್ಯಾಧಿಕಾರಿ ಡಾ| ನಾಗರಾಜ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next