Advertisement

ವಿಶೇಷ ಆ್ಯಪ್‌ ಅಭಿವೃದ್ಧಿಗೆ ಯತ್ನ: ಮಮತಾ

09:46 PM Jun 18, 2021 | Team Udayavani |

ದಾವಣಗೆರೆ: ಜಿಲ್ಲೆಯಲ್ಲಿನ ಶಿಶು ಜನನ ಮತ್ತು ಮರಣದ ಮಾಹಿತಿಯನ್ನು ಪ್ರತಿಯೊಂದು ಸರ್ಕಾರಿ ಹಾಗೂ ಖಾಸಗಿ ಆರೋಗ್ಯ ಸಂಸ್ಥೆಗಳಲ್ಲಿ ನಮೂದಿಸುವಂತಾಗಲು ವಿಶೇಷ ಆ್ಯಪ್‌ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡರ್‌ ತಿಳಿಸಿದ್ದಾರೆ.

Advertisement

ಗುರುವಾರ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಪಿಸಿ ಮತ್ತು ಪಿಎನ್‌ಡಿಟಿ ಸಲಹಾ ಸಮಿತಿ ಸಭೆಯಲ್ಲಿ ಎಸ್‌.ಎಸ್‌. ಹೈಟೆಕ್‌ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕ ಡಾ| ಎನ್‌.ಕೆ. ಕಾಳಪ್ಪನವರ್‌, ಶಿಶು ಜನನ ಮತ್ತು ಮರಣದ ಮಾಹಿತಿಯನ್ನು ನಿಖರವಾಗಿ ಪಡೆಯುವ ನಿಟ್ಟಿನಲ್ಲಿ ವಿಶೇಷ ಆ್ಯಪ್‌ ಅಭಿವೃದ್ಧಿಪಡಿಸಬೇಕು ಎಂಬ ಸಲಹೆಗೆ ಪೂರಕವಾಗಿ ಸ್ಪಂದಿಸಿದ ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್‌, ಸಲಹೆಯನ್ನ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು, ವಿಶೇಷ ಆ್ಯಪ್‌ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದು ತಿಳಿಸಿದರು.

ಡಾ| ಎನ್‌.ಕೆ. ಕಾಳಪ್ಪನವರ್‌ ಮಾತನಾಡಿ, ಜಿಲ್ಲೆಯಲ್ಲಿ ಮಕ್ಕಳ ಲಿಂಗಾನುಪಾತ 2011ರ ಜನಗಣತಿಯಲ್ಲಿ 1ಸಾವಿರ ಗಂಡು ಮಕ್ಕಳಿಗೆ 948 ಹೆಣ್ಣು ಮಕ್ಕಳ ಅನುಪಾತ ದಾಖಲಾಗಿದೆ. 2021ರ ಜನಗಣತಿಗೆ ಸಿದ್ಧತೆ ಆಗುತ್ತಿವೆ. ಹಿಂದಿನ ಅಂಕಿ-ಅಂಶಗಳ ನಿಖರತೆಯ ಬಗ್ಗೆ ಸಂಶಯವಿದ್ದು, ಜಿಲ್ಲೆಯಲ್ಲಿ ಎಲ್ಲ ಗರ್ಭಿಣಿಯರ ನೋಂದಣಿ ಕಡ್ಡಾಯವಾಗಿ ಆಗಬೇಕು. ಶಿಶು ಜನನ ಮತ್ತು ಮರಣಗಳ ಅಂಕಿ-ಅಂಶಗಳ ದಾಖಲಿಗೆ ವಿಶೇಷ ಆ್ಯಪ್‌ ಅಭಿವೃದ್ಧಿಪಡಿಸಿದಲ್ಲಿ ಶಿಶುಗಳ ಜನನ, ಮರಣ ಮತ್ತು ಲಿಂಗಾನುಪಾತದ ನಿಖರ ಅಂಕಿ-ಅಂಶ ಪಡೆಯಲು ಸಾಧ್ಯವಾಗಲಿದೆ.

ಈ ರೀತಿ ಆದಲ್ಲಿ ಜಿಲ್ಲೆ ಇಡೀ ರಾಜ್ಯಕ್ಕೆ ಮಾದರಿ ಆಗಲಿದೆ ಎಂದು ತಿಳಿಸಿದರು. ಜಿಲ್ಲೆಯಲ್ಲಿ ಮಕ್ಕಳ ಲಿಂಗಾನುಪಾತ 2001ರ ಜನಗಣತಿಯಲ್ಲಿ 1000 ಗಂಡು ಮಕ್ಕಳಿಗೆ 946 ಹೆಣ್ಣು, 2011ರ ಜನಗಣತಿಯಲ್ಲಿ 948 ಹೆಣ್ಣು ಮಕ್ಕಳ ಅನುಪಾತ ದಾಖಲಾಗಿದೆ. ಅಂದರೆ ಜಿಲ್ಲೆಯಲ್ಲಿ ಹೆಣ್ಣು ಮಕ್ಕಳ ಅನುಪಾತ ಕಡಿಮೆ ಇದೆ ಎಂಬುದು ದಾಖಲಾಗಿದೆ. ಶಿಶುಗಳ ಜನನ, ಮರಣದ ಬಗ್ಗೆ ಆರ್‌ಸಿಎಚ್‌ ಪೋರ್ಟಲ್‌ನಲ್ಲಿ ಕೇವಲ ಬಿಪಿಎಲ್‌ ಕುಟುಂಬಗಳ ಶಿಶು ಜನನದ ಬಗ್ಗೆ ಮಾತ್ರ ದಾಖಲಾಗುತ್ತಿದೆ.

ಇತರೆ ಕುಟುಂಬದಲ್ಲಿನ ಜನನಗಳ ಬಗ್ಗೆ ದಾಖಲಾಗುತ್ತಿಲ್ಲ, ಕೆಡಿಪಿ ವರದಿಯಲ್ಲಿ ಶಿಶುಗಳ ಜನನದ ಬಗ್ಗೆ ಆಯಾ ತಾಲೂಕುವಾರು ಮಾಹಿತಿ ಸಲ್ಲಿಕೆ ಆಗುತ್ತವೆ. ಆದರೆ, ಶಿಶುವಿನ ಲಿಂಗತ್ವದ ಬಗ್ಗೆ ಮಾಹಿತಿ ದಾಖಲಾಗುವುದಿಲ್ಲ. ಹೀಗಾಗಿ ಜನಗಣತಿಗೆ ಸಲ್ಲಿಕೆಯಾಗುವ ವರದಿಯಲ್ಲಿ ನ್ಯೂನತೆ ಇರುವ ಸಾಧ್ಯತೆಗಳಿದ್ದು, ಜಿಲ್ಲೆಯಲ್ಲಿ ಶಿಶುಗಳ ಜನನ ಮತ್ತು ಮರಣ, ಲಿಂಗತ್ವದ ಬಗ್ಗೆ ನಿಖರ ಅಂಕಿ-ಅಂಶ ಸಂಗ್ರಹಣೆಗೆ ಸೂಕ್ತ ವ್ಯವಸ್ಥೆ ಇದ್ದಂತೆ ಕಂಡುಬರುತ್ತಿಲ್ಲ ಎಂದು ತಿಳಿಸಿದರು. ಸಾಮಾಜಿಕ ಕಾರ್ಯಕರ್ತ ಎಂ.ಜಿ. ಶ್ರೀಕಾಂತ್‌ ಮಾತನಾಡಿ, ಜಿಲ್ಲೆಯ ಹಲವಾರು ಖಾಸಗಿ ನರ್ಸಿಂಗ್‌ ಹೋಂಗಳಲ್ಲಿ ಆಗುವ ಶಿಶು ಜನನ ಅಥವಾ ಮರಣದ ಬಗ್ಗೆ ದಾಖಲು ಸರಿಯಾಗಿ ಆಗುತ್ತಿಲ್ಲ. ಬಿಪಿಎಲ್‌ ಕುಟುಂಬಗಳಲ್ಲಿನ ಗರ್ಭಿಣಿಯರ ನೋಂದಣಿ ಮಾತ್ರ ಆಗುತ್ತಿದೆ. ಎಪಿಎಲ್‌ ಕುಟುಂಬಗಳ ನೋಂದಣಿ ಆಗುತ್ತಿಲ್ಲ. ಪ್ರತಿಯೊಬ್ಬ ತಾಯಂದಿರಿಗೂ ತಾಯಿ ಕಾರ್ಡ್‌ ನೀಡಲಾಗುತ್ತಿಲ್ಲ.

Advertisement

ಶಿಶು ಜನನ, ಮರಣದ ಅಂಕಿ-ಅಂಶದಲ್ಲಿ ವ್ಯತ್ಯಾಸವಾಗುತ್ತಿದೆ. ಹೀಗಾಗಿ ಗರ್ಭಿಣಿಯರ ನೋಂದಣಿ ಸಂಖ್ಯೆ, ಶಿಶು ಜನನ, ಗರ್ಭಪಾತದ ಅಂಕಿ-ಅಂಶಗಳು ಒಂದಕ್ಕೊಂದು ತಾಳೆ ಆಗದಿರುವುದರಿಂದ ಲಿಂಗಾನುಪಾತದಲ್ಲಿ ಅಸಮತೋಲನ ಕಂಡುಬರುತ್ತಿದೆ. ಅದು ವಾಸ್ತವವೂ ಕೂಡ ಆಗಿದೆ ಎಂದು ತಿಳಿಸಿದರು. ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಾಗರಾಜ್‌ ಮಾತನಾಡಿ, ಸರ್ಕಾರಿ ಅಥವಾ ಖಾಸಗಿ ನರ್ಸಿಂಗ್‌ ಹೋಂಗಳಲ್ಲಿ ದಾಖಲಾಗುವ ಎಪಿಎಲ್‌ ಕುಟುಂಬಸ್ಥರಿಗೆ ತಾಯಿ ಕಾರ್ಡ್‌ ನೀಡುವುದು ಕಡ್ಡಾಯವಲ್ಲ. ಕಾರ್ಡ್‌ ಪಡೆಯಲೇಬೇಕು ಎಂದು ಒತ್ತಾಯಿಸುವಂತೆಯೂ ಇಲ್ಲ ಎಂದರು.

ಸ್ಥಳ ಪರಿಶೀಲನೆಗೆ ನಿರ್ಧಾರ: ಜಿಲ್ಲೆಯಲ್ಲಿ ಕೆಲವು ನರ್ಸಿಂಗ್‌ ಹೋಂಗಳಲ್ಲಿ ಅಲ್ಟ್ರಾಸೌಂಡ್‌ ಸ್ಕಾ ನಿಂಗ್‌ ಉಪಕರಣ ಅಳವಡಿಸಲು ಹಾಗೂ ಉಪಯೋಗಿಸಲು, ಮಾರಾಟ, ಸ್ಥಳಾಂತರದ ಬಗ್ಗೆ ನಿಯಮಾನುಸಾರ ನೋಂದಣಿ, ಮಾಹಿತಿ ನೀಡುತ್ತಿಲ್ಲ. ಅನುಮತಿ ಕೋರಿ ಸಲ್ಲಿಕೆಯಾಗುವ ಅರ್ಜಿಗಳಿಗೆ ದಿನಾಂಕ ಹಾಗೂ ಸ್ಥಳವನ್ನೂ ನಮೂದಿಸದೆ ಇರುವ ಬಗ್ಗೆ ಸಮಿತಿ ಸದಸ್ಯರು ಆಕ್ಷೇಪಿಸಿದರು. ಅರ್ಜಿ ಸ್ವೀಕರಿಸುವ ಸಂದರ್ಭದಲ್ಲಿ ಸಂಬಂಧಪಟ್ಟ ಸಿಬ್ಬಂದಿ ಸಮರ್ಪಕವಾಗಿ ಪರಿಶೀಲಿಸಿದ ಬಳಿಕವೇ ಸ್ವೀಕರಿಸಬೇಕು ಎಂದು ಉಪ ವಿಭಾಗಾಧಿಕಾರಿ ತಾಕೀತು ಮಾಡಿದರು. ಎಂ.ಜಿ. ಶ್ರೀಕಾಂತ್‌ ಮಾತನಾಡಿ, ಅಲ್ಟ್ರಾಸೌಂಡ್‌ ಸ್ಕಾ ನಿಂಗ್‌ ಯಂತ್ರಗಳ ಅಳವಡಿಕೆಗಾಗಿ ಅನುಮತಿ, ಸ್ಥಳಾಂತರ ಅಥವಾ ಮಾರಾಟ ಮಾಡಲು ಅರ್ಜಿ ಸಲ್ಲಿಸುವ ನರ್ಸಿಂಗ್‌ ಹೋಂಗಳು ಪಿಸಿ ಅಂಡ್‌ ಪಿಎನ್‌ ಡಿಟಿ ಸಲಹಾ ಸಮಿತಿಯಿಂದ ನಿಯಮಾನುಸಾರ ಅನುಮತಿ ಪಡೆಯುವುದಕ್ಕೂ ಮೊದಲೆ ಬಳಕೆ ಮಾಡುತ್ತಿರುವ ಸಾಧ್ಯತೆಗಳಿವೆ.

ಈ ರೀತಿ ಮಾಡುವುದು ಕಾಯ್ದೆಯನ್ವಯ ಶಿಕ್ಷಾರ್ಹ ಅಪರಾಧ. ಅನುಮತಿಗೂ ಮುನ್ನಯಂತ್ರಗಳ ಬಳಕೆ ಆಗಿಲ್ಲ ಎನ್ನುವ ಬಗ್ಗೆ ಸಂಬಂಧಪಟ್ಟ ಕಂಪನಿಯಿಂದಲೇ ಅ ಧಿಕೃತ ದೃಢೀಕರಣ ಪಡೆದ ಬಳಿಕವೇ ಅನುಮತಿ ನೀಡಬೇಕು. ನಿಯಮ ಉಲ್ಲಂಘನೆ ಕಂಡುಬಂದಲ್ಲಿ ಸಕ್ಷಮ ಪ್ರಾ ಧಿಕಾರದಿಂದ ಜಪ್ತಿ ಮಾಡಬೇಕು ಎಂದು ಒತ್ತಾಯಿಸಿದರು. ವಕೀಲ ರವಿಕುಮಾರ್‌ ಮಾತನಾಡಿ, ಕಾಯ್ದೆ ಉಲ್ಲಂಘನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳುವ ಮೊದಲು ನಿಯಮಾನುಸಾರ ಕಾನೂನು ಪ್ರಕ್ರಿಯೆಗಳನ್ನು ಸಮರ್ಪಕವಾಗಿ ಕೈಗೊಂಡ ಬಳಿಕವೇ, ಜಪ್ತಿ ಮಾಡುವಂತಹ ಕಾರ್ಯಕ್ಕೆ ಮುಂದಾಗುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು.

ಉಪ ವಿಭಾಗಾಧಿಕಾರಿ ಮಾತನಾಡಿ, ಅರ್ಜಿ ಸಲ್ಲಿಕೆಯಾಗಿರುವುದಕ್ಕೆ ಸಂಬಂಧಿಸಿದ ಎಲ್ಲ ನರ್ಸಿಂಗ್‌ ಹೋಂಗಳಿಗೆ ಸಮಿತಿಯಿಂದ ಸ್ಥಳ ಪರಿಶೀಲನೆ ನಡೆಸಿ, ವರದಿ ಸಲ್ಲಿಸಬೇಕು, ನಿಯಮ ಉಲ್ಲಂಘನೆ ಆಗಿರುವುದು ಖಚಿತಪಟ್ಟಲ್ಲಿ, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು. ಶೀಘ್ರ ಸ್ಥಳ ಪರಿಶೀಲನೆಗೆ ಕ್ರಮ ವಹಿಸಲಾಗುವುದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ| ನಾಗರಾಜ್‌ ತಿಳಿಸಿದರು. ಜಿಲ್ಲಾ ಕುಟುಂಬ ಕಲ್ಯಾಣಾ ಧಿಕಾರಿ ಡಾ| ಎ.ಎಂ. ರೇಣುಕಾರಾಧ್ಯ, ಸಮಿತಿಯ ಸದಸ್ಯೆ ಡಾ| ಸುಮಿತ್ರ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next