Advertisement

ಸರ್ವೋನ್ನತ ಏಳಿಗೆಗೆ ಯೋಗ ಸಹಕಾರಿ: ಡಾ|ಶಂಕರ ಗೌಡ

09:18 PM Jun 15, 2021 | Team Udayavani |

ದಾವಣಗೆರೆ: ಪ್ರತಿಯೊಬ್ಬರ ಸರ್ವೋನ್ನತ ಏಳಿಗೆಗೆ ಯೋಗ ತುಂಬಾ ಸಹಕಾರಿ. ಯೋಗ ವಿಶ್ವಮಾನ್ಯವಾಗಿ ಜಾತಿ, ಮತ, ಧರ್ಮಗಳನ್ನು ಮೀರಿ ಬೆಳೆಯುತ್ತಿದೆ ಎಂದು ಜಿಲ್ಲಾ ಆಯುಷ್‌ ಅಧಿಕಾರಿ ಡಾ| ಶಂಕರ ಗೌಡ ಹೇಳಿದರು.

Advertisement

ಸೋಮವಾರ ಸರ್ಕಾರಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯ ವತಿಯಿಂದ ಏಳನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಏಳು ದಿನಗಳ ಉಚಿತ ಆನ್‌ಲೈನ್‌ ಯೋಗ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಯೋಗ ನಮ್ಮ ಪುರಾತನ ಚಿಕಿತ್ಸಾ ಪದ್ಧತಿ, ದಾವಣಗೆರೆಯವರ ಅಚ್ಚುಮೆಚ್ಚಿನ ಚಿಕಿತ್ಸಾ ಪದ್ಧತಿ ಆಗಿದೆ ಎಂದರು.

ಪ್ರಕೃತಿ ಚಿಕಿತ್ಸಾ ಆಸ್ಪತ್ರೆಗೆ ದಿನನಿತ್ಯ ಚಿಕಿತ್ಸೆಗೆ ಬರುವ ರೋಗಿಗಳ ಗಮನಿಸಿದರೆ ಯೋಗಕ್ಕೆ ಸ್ಥಳೀಯರ ಸಹಕಾರ ಗೊತ್ತಾಗುತ್ತದೆ. ಈ ಬಾರಿಯ ಅಂತಾರಾಷ್ಟ್ರೀಯ ಯೋಗ ದಿನದ ಧ್ಯೇಯವಾಕ್ಯ ಯೋಗದೊಂದಿಗೆ ಇರಿ ಮತ್ತು ಮನೆಯಲ್ಲಿಯೇ ಇರಿ’ ಎನ್ನುವುದಾಗಿದೆ. ಮನೆಯಲ್ಲಿಯೇ ಇದ್ದು ಆನ್‌ಲೈನ್‌ ಯೋಗದ ಪ್ರಯೋಜನವನ್ನು ಪ್ರತಿಯೊಬ್ಬರೂ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದ ನಿರ್ವಾಹಕ ಮತ್ತು ಪ್ರಕೃತಿ ಚಿಕಿತ್ಸಾ ತಜ್ಞ ಡಾ| ಗಂಗಾಧರ ವರ್ಮ ಮಾತನಾಡಿ, ಯೋಗ ಭಾರತದ 4000 ವರ್ಷಗಳಷ್ಟು ಹಿಂದಿನ ಪುರಾತನ ತತ್ವ. ಯೋಗದ ಪ್ರಕಾರ ದೇಹವು ಪಂಚಕೋಶಗಳಿಂದ ಮಾಡಲ್ಪಟ್ಟಿದೆ. ಅವುಗಳೆಂದರೆ ಅನ್ನಮಯ ಕೋಶ, ಪ್ರಾಣಮಯ ಕೋಶ, ಮನೋಮಯ ಕೋಶ, ವಿಜ್ಞಾನಮಯ ಕೋಶ, ಆನಂದಮಯ ಕೋಶ ಎಂದು ಮಾಹಿತಿ ನೀಡಿದರು.

ಯೋಗದ ಪ್ರಕಾರ ಎಲ್ಲ ರೀತಿಯ ತೊಂದರೆಗಳು ಮಾನವನಿಗೆ ವಿಜ್ಞಾನ ಮಯ ಕೋಶದಲ್ಲಿ ಉದ್ಭವಿಸುತ್ತವೆ. ಆದರೆ ಅವುಗಳು ಕಾಣಿಸಿಕೊಳ್ಳುವುದು ಮನೋಮಯ ಕೋಶದಲ್ಲಿ. ಮಾನಸಿಕ ಉದ್ವೇಗ ಅಥವಾ ಮಾನಸಿಕ ಒತ್ತಡವು ಮನಸ್ಸಿನ ಸಮತೋಲನವನ್ನು ಏರುಪೇರು ಮಾಡುತ್ತದೆ. ಮಾನಸಿಕ ಉದ್ವೇಗ ತೀವ್ರವಾದ ಬೇಕು- ಬೇಡಗಳು, ರಾಗ-ದ್ವೇಷಗಳು, ಇಚ್ಛೆ- ನಿಚ್ಛೆಗಳಿಂದ ಕಾಣಿಸಿಕೊಳ್ಳುತ್ತವೆ. ಮನೋಮಯ ಕೋಶದ ಅಸಮತೋಲನವು ಪ್ರಾಣಮಯ ಕೋಶದ ಮೇಲೆ ಪ್ರಭಾವ ಬೀರಿ ಅಲ್ಲಿನ ಪ್ರಾಣದ ಹರಿಯುವಿಕೆಯಲ್ಲಿ ಅಡಚಣೆಯನ್ನುಂಟು ಮಾಡುತ್ತದೆ.

Advertisement

ಅಡಚಣೆಯು ಅನ್ನಮಯ ಕೋಶದಲ್ಲಿ ವ್ಯಾಧಿ ಯಾಗಿ ಕಾಣಿಸಿಕೊಳ್ಳುತ್ತದೆ. ಅದನ್ನು ದೂರ ಮಾಡಲು ಪ್ರತಿ ನಿತ್ಯ ಯೋಗಾಭ್ಯಾಸ ಮಾಡಬೇಕೆಂದರು. ಸರ್ಕಾರಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯ ಡಾ| ಡಿ.ಎಂ. ರತ್ನ ಇತರರು ಇದ್ದರು. 95 ಜನರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next