ದಾವಣಗೆರೆ: ಕೊರೊನಾ ಸೋಂಕು ಪರಿಸ್ಥಿತಿ ನಿಭಾಯಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಜತೆಗೆ ತೈಲ ಬೆಲೆ ಏರಿಕೆ ನಿಯಂತ್ರಿಸಿ ಜನರಿಗೆ ಅನುಕೂಲ ಮಾಡಿಕೊಡುವಲ್ಲಿ ಉದಾಸೀನ ತೋರಿದೆ ಎಂದು ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್ ಜಿಲ್ಲಾ ವೀಕ್ಷಕ ಕೆ.ಎಚ್. ಮುನಿಯಪ್ಪ ಆರೋಪಿಸಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಕೋವಿಡ್ ಸೋಂಕು ನಿಯಂತ್ರಿಸುವುದು ಸರ್ಕಾರಗಳ ಜವಾಬ್ದಾರಿ. ಆದರೆ ಈ ವಿಚಾರದಲ್ಲಿ ಕೇಂದ್ರ ಹಾಗೂ ರಾಜ್ಯ ಎರಡೂ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ ಎಂದರು. ಯುಪಿಎ ಸರ್ಕಾರ ಅಧಿಕಾರದಲ್ಲಿದ್ದ ಸಮಯ 2013ರಲ್ಲಿ ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ 107.14 ಡಾಲರ್ ಇತ್ತು. ಆಗ ನಮ್ಮ ಸರ್ಕಾರ 63.37 ರೂ.ಗೆ ಒಂದು ಲೀಟರ್ ಪೆಟ್ರೋಲ್ ನೀಡುತ್ತಿತ್ತು.
ಆದರೆ ಈಗ ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ 59.35 ಡಾಲರ್ ಇದೆ. ಆದರೂ ಕೇಂದ್ರ ಸರ್ಕಾರ ಒಂದು ಲೀಟರ್ ಪೆಟ್ರೋಲ್ ಮತ್ತು ಡೀಸೆಲ್‌ಗೆ 50 ರೂ. ಹೆಚ್ಚು ತೆರಿಗೆ ವಿಧಿಸಿ ಜನರ ಮೇಲೆ ಆರ್ಥಿಕ ಹೊರೆ ಹೊರೆಸಿದೆ. ತೆರಿಗೆ ಇಳಿಸುವ ಮೂಲಕ ಜನರ ನೆರವಿಗೆ ಸರ್ಕಾರ ಬಂದಿಲ್ಲ ಎಂದು ದೂರಿದರು.
ಮೋದಿ ಸರ್ಕಾರ ರೈತರಿಗೆ, ಕಾರ್ಮಿಕರಿಗೆ, ಯುವಕರಿಗೆ, ಮಹಿಳೆಯರಿಗೆ ಏನೂ ಅನುಕೂಲ ಮಾಡಲಿಲ್ಲ. ಉದ್ಯೋಗ ಸೃಷ್ಟಿಸಲಿಲ್ಲ, ವಿದೇಶಗಳಿಗೆ ದೇಶಿ ಉತ್ಪನ್ನಗಳ ರಫು¤ ಹೆಚ್ಚಿಸಿಲ್ಲ. ಬೇರೆ ದೇಶಗಳೊಂದಿಗೆ ಸರಿಯಾದ ಸಂಬಂಧವನ್ನೂ ಹೊಂದಲಿಲ್ಲ. ಇದು ದೇಶ ಆರ್ಥಿಕ ಮುಗ್ಗಟ್ಟು ಎದುರಿಸಲು ಕಾರಣ ಎಂದು ಪ್ರತಿಪಾದಿಸಿದರು.
ಯುಪಿಎ ಸರ್ಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ರೈತರ 72 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಿ, ರೈತರ ಸಂಕಷ್ಟಕ್ಕೆ ಸ್ಪಂದಿಸಿತ್ತು. ಆದರೆ ಮೋದಿ ಸರ್ಕಾರ ರೈತರ ಸಾಲ ಮನ್ನಾ ಮಾಡುವ ಬದಲು ಬಂಡವಾಳಶಾಹಿಗಳ ಸಾಲ ಮನ್ನಾ ಮಾಡುತ್ತಿದೆ. ಉಳ್ಳವರ ಪರವಾಗಿ ಯೋಜನೆ ರೂಪಿಸುತ್ತಿದೆ ಎಂದು ಕುಟುಕಿದರು.
ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಸೋಂಕಿತರಿಗೆ ಕಾಂಗ್ರೆಸ್‌ನಿಂದ ಉಚಿತ ಆಂಬ್ಯುಲೆನ್ಸ್ ಸೇವೆ, ಔಷಧ ಕಿಟ್, ಆಹಾರ ಸಾಮಗ್ರಿ ಒದಗಿಸಲಾಗುತ್ತಿದೆ. ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲ ಬೆಲೆ ಏರಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆಯನ್ನೂ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಮುಖಂಡರಾದ ಬಿ.ಎಚ್. ವೀರಭದ್ರಪ್ಪ, ಡಾ. ವೈ. ರಾಮಪ್ಪ, ಕೆ.ಎಸ್. ಬಸವಂತಪ್ಪ, ದಿನೇಶ್ ಕೆ. ಶೆಟ್ಟಿ, ನಾಗೇಂದ್ರಪ್ಪ, ಎ. ನಾಗರಾಜ್, ರಂಗಸ್ವಾಮಿ, ಚಂದ್ರಶೇಖರ್, ಚನ್ನಬಸಪ್ಪ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.