ದಾವಣಗೆರೆ: ರಾಜ್ಯದ ಪ್ರತಿಯೊಬ್ಬರಿಗೂ ಸೆಪ್ಟಂಬರ್ ವೇಳೆಗೆ ಕೋವಿಡ್ ಲಸಿಕೆ ನೀಡಬೇಕು ಎಂದು ಒತ್ತಾಯಿಸಿ ಗುರುವಾರ ಕರ್ನಾಟಕ ರಕ್ಷಣಾ ವೇದಿಕೆ (ಟಿ.ಎ. ನಾರಾಯಣ ಗೌಡ ಬಣ) ಪದಾಧಿಕಾರಿಗಳು, ಕಾರ್ಯಕರ್ತರು ಮನೆಗಳ ಮುಂದೆ ಪ್ರತಿಭಟನೆ ನಡೆಸಿದರು. ಮಹಾಮಾರಿ ಕೊರೊನಾ ವ್ಯಾಪಕವಾಗಿ ಹರಡುತ್ತಿದೆ. ಸರ್ಕಾರಿ ಅಂಕಿ-ಅಂಶದ ಪ್ರಕಾರವೇ 30 ಸಾವಿರಕ್ಕೂ ಅಧಿಕ ಜನರು ಸಾವನ್ನಪಿದ್ದಾರೆ. ಲಕ್ಷಾಂತರ ಜನರು ಸೋಂಕಿನಿಂದ ನರಳುತ್ತಿದ್ದಾರೆ.
ಎರಡನೇ ಅಲೆ ಮುಗಿಯುವ ಮುನ್ನವೇ ಮೂರನೇ ಅಲೆಯ ಬಗ್ಗೆ ತಜ್ಞರು ಎಚ್ಚರಿಸುತ್ತಿದ್ದಾರೆ. ಕೊರೊನಾದಿಂದ ರಕ್ಷಿಸಲು ಲಸಿಕೆ ಸೂಕ್ತ ಪರಿಹಾರ. ಹಾಗಾಗಿ ಸರ್ಕಾರ ಸೆಪ್ಟಂಬರ್ ವೇಳೆಗೆ ಪ್ರತಿಯೊಬ್ಬರಿಗೆ ಲಸಿಕೆ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಸರ್ಕಾರ ಬೂತ್ ಮಟ್ಟದಲ್ಲಿ ಲಸಿಕಾ ಅಭಿಯಾನ ಪ್ರಾರಂಭಿಸುವ ಮೂಲಕ ಎಲ್ಲರಿಗೂ ಲಸಿಕೆ ದೊರೆಯುವ ವ್ಯವಸ್ಥೆ ಮಾಡಬೇಕು. ಬಡವ-ಶ್ರೀಮಂತರು ಎಂಬ ತಾರತಮ್ಯ ಮಾಡುವುದನ್ನು ನಿಲ್ಲಿಸಬೇಕು.
ಖಾಸಗಿ ಆಸ್ಪತ್ರೆಗಳಿಗೆ ಶೇ. 25 ರಷ್ಟು ಲಸಿಕೆ ಖರೀದಿಸುವ ಅನುಮತಿಯನ್ನೇ ರದ್ದುಪಡಿಸಬೇಕು. ಸರ್ಕಾರದ ಮೂಲಕವೇ ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡಬೇಕು. ಪ್ರಾರಂಭಿಕ ಹಂತದಲ್ಲಿ ಪ್ರಥಮ ಡೋಸ್ ಪಡೆದಂತಹವರು ಎರಡನೇ ಡೋಸ್ ಪಡೆಯುವುದಕ್ಕೆ ಇನ್ನಿಲ್ಲದ ತೊಂದರೆ ಪಡುವಂತಾಗಿದೆ. ಮೊದಲನೇ ಡೋಸ್ ಪಡೆದವರಿಗೆ ಅತೀ ತುರ್ತಾಗಿ ಆದ್ಯತೆ ಮೇರೆಗೆ ಎರಡನೇ ಡೋಸ್ ನೀಡಬೇಕು ಎಂದರು. ಅಕ್ಟೋಬರ್ ವೇಳೆಗೆ ಮೂರನೇ ಅಲೆ ಬರಲಿದ್ದು ಮಕ್ಕಳ ಮೇಲೆ ತೀವ್ರ ಪರಿಣಾಮ ಉಂಟು ಮಾಡಲಿದೆ ಎಂದು ಹೇಳಲಾಗುತ್ತಿದೆ.
ಮಕ್ಕಳ ಅಮೂಲ್ಯ ಪ್ರಾಣ ರಕ್ಷಣೆಗೆ ಸರ್ಕಾರ ಅಗತ್ಯ ಕ್ರಮ ತೆಗೆದುಕೊಳ್ಳಬೇಕು. ಮಕ್ಕಳಿಗೆ ಮತ್ತು ಪೋಷಕರಿಗೆ ಕಡ್ಡಾಯವಾಗಿ ಲಸಿಕೆ ಕೊಡಬೇಕು. ಲಸಿಕೆ ಪಡೆಯಲು ಅನುಕೂಲವಾಗುವಂತೆ ನೋಂದಣಿ ಪ್ರಕ್ರಿಯೆ ಸರಳೀಕರಿಸಬೇಕು. ಜೂ. 21 ರಿಂದ ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ. ಜನಸಂಖ್ಯೆ ಆಧಾರದಲ್ಲಿ ಲಸಿಕೆ ವಿತರಣೆ ಮಾಡಬೇಕು. ಅತ್ಯಂತ ವೈಜ್ಞಾನಿಕ ನೀತಿ ಮಾದರಿಯಲ್ಲಿ ಲಸಿಕಾಕರಣದ ವ್ಯವಸ್ಥೆ ಆಗಬೇಕು.
ಕೊರೊನಾ ಲಸಿಕೆ ಜೊತೆಗೆ ಸೋಂಕಿತರ ಚಿಕಿತ್ಸೆಗೆ ಅತೀ ಅಗತ್ಯವಾಗಿರುವ ವೈದ್ಯಕೀಯ, ವೈದ್ಯಕೀಯೇತರ ಸಿಬ್ಬಂದಿ, ವೆಂಟಿಲೇಟರ್, ಆಕ್ಸಿಜನ್, ಔಷಧಿಗಳನ್ನು ಸಮರ್ಪಕವಾಗಿ ಪೂರೈಸಬೇಕು ಎಂದು ಆಗ್ರಹಿಸಿದರು. ಜಿಲ್ಲಾಧ್ಯಕ್ಷ ಎಂ.ಎಸ್. ರಾಮೇಗೌಡ, ರವಿಕುಮಾರ್, ಶ್ರೀನಿವಾಸ ಚಿನ್ನಿಕಟ್ಟಿ ,ರಂಗನಾಥ್, ಶ್ರೀನಿವಾಸ್, ಮಹೇಶಪ್ಪ, ರಾಮಣ್ಣ , ಬಸಮ್ಮ, ಮಂಜುಳಮ್ಮ, ಶಾಂತಮ್ಮ ಇತರರು ಇದ್ದರು. ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡರ ಜನ್ಮದಿನದ ಅಂಗವಾಗಿ ವಿವಿಧೆಡೆ ಸಸಿ ನೆಡಲಾಯಿತು.