Advertisement

ಪಾಸಿಟಿವಿಟಿ ಪ್ರಮಾಣ ಕಡಿಮೆಯಾಗಿಸಲು ಶ್ರಮಿಸಿ

09:24 PM Jun 09, 2021 | Team Udayavani |

ದಾವಣಗೆರೆ: ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವಿಟಿ ಪ್ರಮಾಣ ಶೇ. 5ಕ್ಕಿಂತಲೂ ಕಡಿಮೆಯಾಗುವಂತೆ ಮಾಡಲು ಅಧಿಕಾರಿಗಳು ಶ್ರಮಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ್‌ ಸೂಚಿಸಿದರು.

Advertisement

ಮಂಗಳವಾರ ತುಂಗಭದ್ರಾ ಸಭಾಂಗಣದಲ್ಲಿ ಜಿಲ್ಲೆಯಲ್ಲಿನ ಕೋವಿಡ್‌ ಸ್ಥಿತಿ-ಗತಿ ಹಾಗೂ ಕೈಗೊಳ್ಳಬೇಕಾದ ಕ್ರಮಗಳ ಕುರಿತು ನಡೆದ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪ್ರಸ್ತುತ ಜಿಲ್ಲೆಯಲ್ಲಿ ಶೇ. 19 ಪಾಸಿಟಿವಿಟಿ ಇದೆ. ಮುಂದಿನ ದಿನಗಳಲ್ಲಿ ಶೇ.5 ಕ್ಕಿಂತಲೂ ಕಡಿಮೆ ಮಾಡಬೇಕು ಎಂದರು.

ಜಿಲ್ಲೆಯಲ್ಲಿ ಸದ್ಯ ಕೋವಿಡ್‌ ನಿಯಂತ್ರಣಕ್ಕೆ ಬರುತ್ತಿದೆ. ಆದರೆ ಯಾವುದೇ ಕಾರಣಕ್ಕೂ ಮೈ ಮರೆಯುವಂತಿಲ್ಲ. ಜೂ. 14ಕ್ಕೆ ಲಾಕ್‌ಡೌನ್‌ ಮುಗಿಯಲಿದ್ದು, ಅಲ್ಲಿಯವರೆಗೆ ಕಾಲಾವಕಾಶ ಇದೆ. ಅಧಿಕಾರಿಗಳು ಪಾಸಿಟಿವಿಟಿ ಪ್ರಮಾಣ ಕಡಿಮೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ತಿಳಿಸಿದರು. ಒಂದರೆಡು ವಾರಗಳ ಕಾಲಾವಕಾಶದಲ್ಲಿ ಸೋಂಕು ಕಡಿಮೆ ಮಾಡಲು ಎಲ್ಲ ರೀತಿಯಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.

ಗ್ರಾಮೀಣ ಪ್ರದೇಶಗಳಲ್ಲಿ ಸೋಂಕು ಇನ್ನೂ ಕಡಿಮೆಯಾಗಿಲ್ಲ. ಸೋಂಕಿತರನ್ನು ಕಡ್ಡಾಯವಾಗಿ ಕೋವಿಡ್‌ ಕೇರ್‌ ಸೆಂಟರ್‌ಗೆ ದಾಖಲಿಸಬೇಕು. ಮನೆಯಲ್ಲಿ ಸೋಂಕಿತರಿರುವುದರಿಂದ ಹರಡುವುದನ್ನು ತಡೆಯಲು ಕಷ್ಟ ಆಗುತ್ತದೆ. ಆದ್ದರಿಂದ ಕಡ್ಡಾಯವಾಗಿ ಕೋವಿಡ್‌ ಕೇರ್‌ ಸೆಂಟರ್‌ ಗೆ ಸೇರಿಸಬೇಕು. ಸರ್ಕಾರ ಸೋಂಕು ನಿವಾರಣೆಗೆ ಎಲ್ಲ ರೀತಿಯಲ್ಲಿ ಸಹಾಯ ಮಾಡಲು ಬದ್ಧ. ಗ್ರಾಮಗಳಲ್ಲಿನ ಕಾರ್ಯಪಡೆಗಳು ಹೆಚ್ಚು ಜವಾಬ್ದಾರಿಯಿಂದ ಕೆಲಸ ಮಾಡಬೇಕು. ಗ್ರಾಮೀಣ ಭಾಗದಲ್ಲಿ ಸೋಂಕು ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಚಿವ ಬೈರತಿ, ಜಿಪಂ ಸಿಇಒಗೆ ಸೂಚಿಸಿದರು.

ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ಗರ್ಭಿಣಿಯರು ಮತ್ತು ಬಾಣಂತಿಯರು ಹಾಗೂ ಗಂಭೀರ ಆರೋಗ್ಯ ಸಮಸ್ಯೆ ಇರುವವರನ್ನು ಹೊರತುಪಡಿಸಿ ಉಳಿದ ಎಲ್ಲರನ್ನೂ ಕೋವಿಡ್‌ ಕೇರ್‌ ಸೆಂಟರ್‌ಗೆ ದಾಖಲಿಸಲಾಗುತ್ತಿದೆ ಎಂದರು.

Advertisement

ಯಾವುದೇ ಕಾರಣಕ್ಕೂ ಜಿಲ್ಲೆಯ ನಾಗರಿಕರಿಗೆ ಲಸಿಕೆಯಲ್ಲಿ ತೊಂದರೆ ಆಗಬಾರದು. ಲಸಿಕಾ ಕೇಂದ್ರಕ್ಕೆ ಅಲೆಯುವುದು, ನರಳುವಂತೆ ಆಗಬಾರದು. ಕೇಂದ್ರಕ್ಕೆ ಬಂದಂತಹವರಿಗೆ ತಕ್ಷಣ ಲಸಿಕೆ ನೀಡಿ ಕಳುಹಿಸುವ ವ್ಯವಸ್ಥೆ ಆಗಬೇಕು ಎಂದು ಸಚಿವರು ಸೂಚಿಸಿದರು.

ದಾವಣಗೆರೆ ನಗರ, ಗ್ರಾಮೀಣ ಭಾಗದಲ್ಲಿ ತ್ವರಿತವಾಗಿ ಲಸಿಕೆ ನೀಡಲಾಗುತ್ತಿದೆ. ಲಸಿಕೆ ಲಭ್ಯತೆಯ ಆಧಾರದಲ್ಲಿ ಲಸಿಕೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿನ 15 ಸಾವಿರ ವಿಕಲಚೇತನರಲ್ಲಿ 12,500 ವಿಕಲ ಚೇತನರಿಗೆ ಲಸಿಕೆ ನೀಡಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ| ನಾಗರಾಜ್‌ ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಕೋವಿಡ್‌ ಪರೀಕ್ಷಾ ಪ್ರಮಾಣ ಹೆಚ್ಚಿಸಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಪರೀಕ್ಷೆ ನಡೆಸುವುದರಿಂದ ಸೋಂಕಿತರು ಪತ್ತೆಯಾಗುತ್ತಾರೆ. ಚಿಕಿತ್ಸೆಯ ಮೂಲಕ ಗುಣಪಡಿಸಬಹುದು ಎಂದು ಸಚಿವ ಬೈರತಿ ತಿಳಿಸಿದರು.

ಜಿಲ್ಲೆಯಲ್ಲಿ ಪ್ರತಿ ದಿನ 4,736 ಕೋವಿಡ್‌ ಪರೀಕ್ಷೆಯ ಗುರಿ ನೀಡಲಾಗಿದೆ. ಅದಕ್ಕಿಂತಲೂ ಹೆಚ್ಚಿನ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಹೇಳಿದರು. ಜಿಲ್ಲೆಗೆ ನೀಡಿರುವ ಗುರಿಗಿಂತಲೂ ಹೆಚ್ಚು ಅಂದರೆ ದಿನಕ್ಕೆ 5 ರಿಂದ 6 ಸಾವಿರ ಪರೀಕ್ಷೆ ನಡೆಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಸೂಚನೆ ನೀಡಿದರು.

ಆಮ್ಲಜನಕ ಘಟಕ ಸ್ಥಾಪಿಸುವಂತೆ ತಮ್ಮ ಆಪ್ತರೊಬ್ಬರಿಗೆ ಕೋರಿದ್ದು, ಅವರು ಒಪ್ಪಿಗೆ ನೀಡಿದ್ದಾರೆ. ಮುಂದಿನ ಸೋಮವಾರ (ಜೂ. 21) ಮಾಯಕೊಂಡದಲ್ಲಿ ಪ್ರಾರಂಭಿಸುವುದಾಗಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next