ದಾವಣಗೆರೆ: ಮಹಾಮಾರಿ ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಜಾರಿಯಲ್ಲಿರುವ ಸಂಪೂರ್ಣ ಲಾಕ್ ಡೌನ್ ನಡುವೆ ಗುರುವಾರ ಎರಡನೇ ಬಾರಿಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿತ್ತು. ಬಿರುಸಿನ ಮಳೆಯ ಕಾರಣಕ್ಕೆ ಕೆಲ ಕಾಲ ಜನರ ಸುಳಿವು ಇರಲಿಲ್ಲ.
ಆ ನಂತರ ಎಂದಿನಂತೆಯೇ ಜನಸಂದಣಿ ಕಂಡು ಬಂತು. ಕಳೆದ ಸೋಮವಾರ(ಮೇ 24) ದಿಂದ ಜಿಲ್ಲಾಡಳಿತ ಜಿಲ್ಲೆಯಾದ್ಯಂತ ಸಂಪೂರ್ಣ ಲಾಕ್ ಡೌನ್ ಘೋಷಿಸಿದ್ದು, ಮೇ 31 ಮತ್ತು ಜೂ. 3 ರಂದು ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ 6 ರಿಂದ ಮಧ್ಯಾಹ್ನ 12ರ ವರೆಗೆ ಸಮಯಾವಕಾಶ ನೀಡಲಾಗಿತ್ತು. ಎರಡು ದಿನಗಳ ಹಿಂದೆಯಷ್ಟೇ ಅಗತ್ಯ ವಸ್ತುಗಳ ಖರೀದಿಗೆ ಜನರು ಮುಗಿ ಬಿದ್ದಿದ್ದರು.
ಗುರುವಾರ ಸಹ ಮತ್ತೆ ಅದೇ ವಾತಾವರಣ ನಿರ್ಮಾಣವಾಗಿತ್ತು. ಬೆಳ್ಳಂಬೆಳಗ್ಗೆಯಿಂದಲೇ ಮಳೆ ಸುರಿಯಲಾರಂಭಿಸಿದ್ದರಿಂದ 9 ಗಂಟೆಯವರೆಗೆ ಜನರು ದಿನಸಿ, ಹೋಟೆಲ್, ಮಾಂಸ, ತರಕಾರಿ ಅಂಗಡಿಗಳತ್ತ ಸುಳಿಯಲಿಲ್ಲ. ಮಳೆ ನಿಲ್ಲುತ್ತಿದ್ದಂತೆ ನಿಧಾನವಾಗಿ ಮಾರುಕಟ್ಟೆ ಮತ್ತಿತರೆ ಕಡೆ ದೌಡಾಯಿಸಿದರು.
ಕೆ.ಆರ್. ಮಾರ್ಕೆಟ್, ಚೌಕಿಪೇಟೆ, ಗಡಿಯಾರದ ಕಂಬ ರಸ್ತೆ, ವಿಜಯಲಕ್ಷ್ಮಿ ರಸ್ತೆ, ಅಶೋಕ ರಸ್ತೆ, ವಿನೋಬ ನಗರ ಎರಡನೇ ಮುಖ್ಯ ರಸ್ತೆ, ವಿದ್ಯಾನಗರ, ಆಂಜನೇಯ ಬಡಾವಣೆ, ಶಾಮನೂರು ರಸ್ತೆ, ಜಿಲ್ಲಾ ಆಸ್ಪತ್ರೆ ರಸ್ತೆ…. ಹೀಗೆ ಎಲ್ಲ ಕಡೆ ಅಗತ್ಯ ವಸ್ತುಗಳ ಖರೀದಿ ಜೋರಾಗಿತ್ತು. ಈಗಾಗಲೇ ಜಾರಿಯಲ್ಲಿರುವ ಸಂಪೂರ್ಣ ಲಾಕ್‌ಡೌನ್ ಯಾವಾಗ ಮುಗಿಯುತ್ತದೋ ಅಥವಾ ಮುಂದುವರೆ ಯುತ್ತದೆಯೋ ಎಂಬುದರ ಬಗ್ಗೆ ಖಚಿತತೆ ಇಲ್ಲದ ಹಿನ್ನೆಲೆಯಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ದಿನಸಿ, ತರಕಾರಿ ಖರೀದಿಗೆ ಧಾವಿಸಿ ಬಂದಿದ್ದರು.
ಜೂ. 7ನೇ ತಾರೀಖೀನ ನಂತರವೂ ಸರ್ಕಾರ ಲಾಕ್‌ಡೌನ್ ಮುಂದುವರೆಸಲಿದೆ ಎಂಬ ಸುದ್ದಿ ಇದೆ. ಮತ್ತೆ ಯಾವಾಗ ಬೇಕಾದ ಸಾಮಾನು, ಸರಂಜಾಮು, ತರಕಾರಿ ಖರೀದಿಗೆ ಅವಕಾಶ ಮಾಡಿಕೊಡಲಾಗುತ್ತದೆಯೋ ಗೊತ್ತೇ ಆಗುತ್ತಿಲ್ಲ. ಮತ್ತೇನಾದ್ರೂ ಕಂಪೀಟ್ ಲಾಕ್‌ಡೌನ್ ಆದರೆ ಹೊರಗೆ ಬರುವಂತೆಯೇ ಇಲ್ಲ. ಏನೂ ಇಲ್ಲ ಅಂದರೂ ನಡೆಯುತ್ತದೆ. ಅಕ್ಕಿ, ಬೇಳೆ, ಎಣ್ಣೆ, ತರಕಾರಿ ಇಲ್ಲ ಅಂದರೆ ಏನೂ ನಡೆಯೋದೇ ಇಲ್ಲ. ಹಂಗಾಗಿ ಮನೆಗೆ ಏನೇನೂ ಬೇಕೋ ಅದನ್ನ ತೆಗೆದುಕೊಂಡು ಹೋಗಲು ಬಂದಿದೀವಿ ಎಂದು ಅನೇಕರು ತಿಳಿಸಿದರು.
ಚೌಕಿಪೇಟೆ, ದೊಡ್ಡಪೇಟೆ, ಮಹಾರಾಜಪೇಟೆ, ಚಾಮರಾಜಪೇಟೆ ಒಳಗೊಂಡಂತೆ ಹಳೆಯ ದಾವಣಗೆರೆಯ ಕೆಲ ಭಾಗಗಳಲ್ಲಿ ಲಾರಿಗಳಲ್ಲಿ ಲೋಡಿಂಗ್, ಅನ್‌ಲೋಡಿಂಗ್‌ಗೆ ಅವಕಾಶ ನೀಡಿದ್ದರಿಂದ ಟ್ರಾμಕ್ ಜಾಮ್ ಉಂಟಾಗಿತ್ತು. ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಿದ ದಿನಗಳಲ್ಲಿ ಲೋಡಿಂಗ್, ಅನ್‌ಲೋಡಿಂಗ್‌ಗೆ ಅನುಮತಿ ನೀಡಬಾರದು ಎಂದು ಹಲವಾರು ಬಾರಿ ಮನವಿ ಮಾಡಿಕೊಂಡಿದ್ದರೂ ಯಾವುದೇ ಪ್ರಯೋಜನ ಆಗಿಲ್ಲ. ಲೋಡಿಂಗ್, ಅನ್ ಲೋಡಿಂಗ್ ಇದ್ದಾಗ ಲಾರಿಗಳು ನಿಲ್ಲುವುದರಿಂದ ಟ್ರಾಕ್‌ಗೆ ತೊಂದರೆ ಆಗುತ್ತದೆ. ಹಾಗಾಗಿ ಬೇರೆ ದಿನ ಅನುಮತಿ ನೀಡಬೇಕು ಎಂದು ಹಲವರು ಒತ್ತಾಯಿಸಿದರು.