ಹರಿಹರ: ತಾಲೂಕಿನ ಎಲ್ಲಾ ವರ್ಗದ ಬಡ ನಿರ್ವಸತಿಕರಿಗೆ ವಸತಿ ವ್ಯವಸ್ಥೆ ದೊರಕಿಸಿಕೊಡಲು ಆಗ್ರಹಿಸಿ ಡಿಎಸ್‌ಎಸ್ ನಿಂದ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ಭಾನುವಾರ ವಸತಿ ಸಚಿವ ವಿ.ಸೋಮಣ್ಣರಿಗೆ ಮನವಿ ನೀಡಲಾಯಿತು.
ದಸಂಸ ತಾಲೂಕು ಸಂಚಾಲಕ ಪಿ.ಜೆ. ಮಹಾಂತೇಶ್ ಮಾತನಾಡಿ, ಹಾಲಿ ಕೇಂದ್ರ ಮತ್ತು ರಾಜ್ಯ ಸರಕಾರದ ನಾನಾ ವಸತಿ ಯೋಜನೆಗಳ ಲಾಭ ಎಲ್ಲಾ ವರ್ಗದ ಫಲಾನುಭವಿಗಳಿಗೆ ತಲುಪುತ್ತಿಲ್ಲ. ರಾಜಕಾರಣಿಗಳ ಬಾಲ ಬಡಿಯುವವರಿಗೆ ಮಾತ್ರ ದೊರಕುತ್ತಿದೆ. ಈ ಯೋಜನೆಗಳು ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿದೆ.
ಸ್ವಂತ ಮನೆ ಹೊಂದುವುದು ಪ್ರತಿಯೊಬ್ಬರ ಹೆಬ್ಬಯಕೆ ಹಾಗೂ ಹಕ್ಕಾಗಿದೆ. ಆರ್ಥಿಕ ಚೈತನ್ಯ ಇಲ್ಲದವರಿಗೆ ಸ್ವಂತ ಮನೆ ಹೊಂದುವುದು ಕನ್ನಡಿಯ ಗಂಟಾಗಿದೆ. ಚುನಾವಣೆಯಲ್ಲಿ ಎಲ್ಲಾ ಪಕ್ಷಗಳ ರಾಜಕಾರಣಿಗಳು ವಸತಿ ಯೋಜನೆ ಬಗ್ಗೆ ಪುಂಖಾನು, ಪುಂಖವಾಗಿ ಭಾಷಣ ಬಿಗಿಯುತ್ತಾರೆ. ಸಭೆಗಳಲ್ಲಿ ಅ ಧಿಕಾರಿಗಳು ಅಂಕಿ, ಅಂಶಗಳ ಸರಮಾಲೆಯನ್ನು ಪೋಣಿಸುತ್ತಾರೆ. ಆದರೆ ವಸತಿ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಪ್ರತಿ ಗ್ರಾಮದಲ್ಲೂ ಸರಕಾರದ ಜಮೀನು ಲಭ್ಯವಿದೆ. ಅಲ್ಲಿ ವಸತಿ ಯೋಜನೆಗಳನ್ನು ಜಾರಿ ಮಾಡಬಹುದು.
ಆದರೆ ಈ ಕಾರ್ಯಕ್ಕೆ ಆಡಳಿತ, ವಿಪಕ್ಷದ ರಾಜಕಾರಣಿಗಳಾಗಲಿ, ಅಧಿಕಾರಿಗಳಾಗಲಿ ಮನಸ್ಸು ಮಾಡದಿರುವುದು ವಿಪರ್ಯಾಸವಾಗಿದೆ. ಮನೆಯಿಲ್ಲದವರು ಬಾಡಿಗೆ ಮನೆಗಳಲ್ಲಿ, ಸರಕಾರದ ಜಾಗಗಳ ಅಂಚುಗಳಲ್ಲಿ, ರಸ್ತೆ ಬದಿಯಲ್ಲಿ ಗುಡಿಸಲು ರೂಪದ ಮನೆಗಳಲ್ಲಿ ಕನಿಷ್ಠ ಜೀವನ ನಡೆಸುತ್ತಿದ್ದಾರೆ. ಬಯಲು ಶೌಚಾಲಯವೇ ಇವರಿಗೆ ಗತಿಯಾಗಿದೆ. ಇತರೆ ಮೂಲ ಸೌಕರ್ಯ ಕನಸಿನ ಮಾತಾಗಿದೆ.
ಪ್ರತಿ ಗ್ರಾಮದಲ್ಲಿ ಹಾಗೂ ನಗರದ ವಾರ್ಡ್‌ಗಳಲ್ಲಿರುವ ಬಡ ನಿರ್ವಸತಿಕರಿಗೆ ಸಭೆ ನಡೆಸಿ ಮನೆಗಳ ಅಗತ್ಯದ ಬಗ್ಗೆ ಮಾಹಿತಿ ಸಂಗ್ರಹಿಸಬೇಕು. ಒಟ್ಟಿನಲ್ಲಿ ನಗರ ಹಾಗೂ ಗ್ರಾಮೀಣ ಭಾಗದ ಬಡ ನಿರ್ವಸತಿಕರಿಗೆ ನಿವೇಶನ, ಮನೆ ದೊರಕಿಸಲು ತಾವು ಆದ್ಯತೆ ನೀಡಬೇಕಾಗಿ ಆಗ್ರಹಿಸಿದರು.
ಮನವಿ ಸ್ವೀಕರಿಸಿದ ಸಚಿವರು ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು. ಸಂಸದ ಜಿ.ಎಂ.ಸಿದ್ದೇಶ್ವರ, ಶಾಸಕ ಎಸ್.ರಾಮಪ್ಪ, ಮಾಜಿ ಶಾಸಕ ಬಿ.ಪಿ.ಹರೀಶ್, ಉಮಾ ಮಹೇಶ್ವರ, ಸುಭಾಷ್ ಎಚ್.ಜಿ., ಜಿಗಳಿ ಪ್ರದೀಪ್ ಕುಮಾರ್, ವೇಟ್ ಲಿಫ್ಟರ್ ಮೊಹಮ್ಮದ್ ರμàಕ್ ಎಂ.ಡಿ., ರವಿಕುಮಾರ್ ಇತರರಿದ್ದರು.