ರಾ. ರವಿಬಾಬು
ದಾವಣಗೆರೆ: ಇಷ್ಟೊತ್ತಿಗೆ ಪರೀಕ್ಷೆ ಮುಗಿದಿದ್ರೆ ಚೆನ್ನಾಗಿ ಇರ್ತಾ ಇತ್ತು. ಓದೋಕೆ ಏನೋ ಟೈಮ್ ಸಿಕ್ಕಿದೆ. ಆದ್ರೂ ಎಕ್ಸಾಂ ಮುಗಿದು ಹೋಗಿದ್ರೆ, ಮುಂದಿನ ಕ್ಲಾಸ್‌ಗೆ ಹೋಗೋಕೆ ಅನುಕೂಲ ಆಗ್ತಾ ಇತ್ತು… ಇದು ದಾವಣಗೆರೆ ತಾಲೂಕಿನ ಅಣಬೇರು ಗ್ರಾಮದ ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಾಜರಾಗಲಿರುವ ಎ.ಆರ್. ಚಂದನ ಅನಿಸಿಕೆ. ಮಹಾಮಾರಿ ಕೊರೊನಾದಿಂದ ಸತತ ಎರಡನೇ ವರ್ಷವೂ ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಂದೂಡಲ್ಪಟ್ಟಿವೆ. ಜೂ. 21 ರಿಂದ ಪ್ರಾರಂಭವಾಗಿ ಜು. 10ಕ್ಕೆ ಮುಗಿಯಬೇಕಿದ್ದ ಪರೀಕ್ಷೆ ದಿನಾಂಕ ಇನ್ನೂ ನಿರ್ಧಾರವಾಗಿಲ್ಲ.
ಪರೀಕ್ಷೆಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಿರುವ ಸಾವಿರಾರು ವಿದ್ಯಾರ್ಥಿಗಳಲ್ಲಿ ಪರೀಕ್ಷೆ ಮುಗಿದರೆ ಸಾಕಿತ್ತು ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಜೂನ್‌ನಿಂದ ಶೈಕ್ಷಣಿಕ ಸಾಲು ಪ್ರಾರಂಭವಾಗಿ ಎಸ್ಸೆಸ್ಸೆಲ್ಸಿ ನಂತರ ಕಲಾ, ವಾಣಿಜ್ಯ, ವಿಜ್ಞಾನ, ಡಿಪ್ಲೋಮಾ, ಐಟಿಐ ಹೀಗೆ ವಿವಿಧ ಕೋಸ್ ಗಳಿಗೆ ದಾಖಲಾಗಬೇಕಿದ್ದ ವಿದ್ಯಾರ್ಥಿಗಳು ಇನ್ನೂ ಪರೀಕ್ಷೆಯನ್ನೇ ಬರೆದಿಲ್ಲ. ಯಾವಾಗ ನಡೆಯಲಿವೆ ಎಂಬ ಖಚಿತತೆಯೂ ಇಲ್ಲದೆ ಒಂದು ರೀತಿಯ ತೊಳಲಾಟದಲ್ಲಿದ್ದಾರೆ ಎಂಬುದಕ್ಕೆ ಚಂದನಳ ಮಾತುಗಳು ಸಾಕ್ಷಿಯಾಗಿವೆ.
ಕೊರೊನಾ ಕಾರಣಕ್ಕೆ ಎಕ್ಸಾಂ ಮುಂದಕ್ಕೆ ಹೋಗಿವೆ. ಎಕ್ಸಾಂ ಮುಂದೂಡಿರೋದು ಒಳ್ಳೆಯದು. ಓದೋಕೆ ಟೈಮ್ ಸಿಕ್ಕಿದೆ. ಆದರೂ, ಸರಿಯಾಗಿ ಓದೋಕೇ ಆಗ್ತಾನೇ ಇಲ್ಲ. ಇಂತಹ ದಿನದಿಂದ ಎಕ್ಸಾಂ ಅಂತಾ ಇದ್ದಿದ್ರೆ ಓದೋಕೆ ಮನಸ್ಸು ಬರ್ತಾ ಇತ್ತು. ಯಾವಾಗ ಎಕ್ಸಾಂ ಅನ್ನೋದೇ ಗೊತ್ತಿಲ್ಲ. ಹಂಗಾಗಿ ಓದೋಕೆ ಮನಸ್ಸಾಗೋದೇ ಇಲ್ಲ. ಹಂಗಂತಾ ಓದ್ತಾನೇ ಇಲ್ಲ ಅನ್ನೊಂಗಿಲ್ಲ. ದಿನಕ್ಕೆ ಏನಿಲ್ಲ ಅಂದ್ರೂ ಒಂದು ಗಂಟೆ ಓದ್ತಾ ಇದೀನಿ. ಎಕ್ಸಾಂ ಮುಗಿದಿದ್ರೆ ಚೆನ್ನಾಗಿರೋದು ಎಂಬ ಮಾತು ಸಾವಿರಾರು ವಿದ್ಯಾರ್ಥಿಗಳ ಅಪೇಕ್ಷೆಯ ಪ್ರತೀಕ. ಎಕ್ಸಾಂ ಮುಗಿದಿದ್ರೆ ಬಹಳ ಚೆನ್ನಾಗಿ ಇರೋದು. ಟೈಮೇನೋ ಇದೆ.
ಆದರೆ, ಮನೆ -ಹೊಲದ ಕೆಲಸ ಅಂತ ಓದೋಕೆ ಆಗ್ತಾನೇ ಇಲ್ಲ. ಎಕ್ಸಾಂ ಬಂದಾಗ ನೋಡೋಣ ಬಿಡು. ಅನೌನ್ಸ್ ಆದ ಮೇಲೆ ಓದೋಕೆ ಸ್ಟಾರ್ಟ್ ಮಾಡಿದ್ರೆ ಆಗುತ್ತೆ ಅನಿಸ್ತಾ ಇದೆ. ಕೊರೊನಾ ಕಾರಣಕ್ಕೆ ಯಾರೂ ಫ್ರೆಂಡ್ಸ್ ಸಿಗ್ತಾನೇ ಇಲ್ಲ. ನಮ್ ಮನಿಗೆ ಅವರಿಗೆ ಬರೋಕೆ ಭಯ. ನಂಗೆ ಅವರ ಮನೆಗೆ ಹೋಗೋಕೆ ಭಯ. ಹಂಗಾಗಿ ಒಂದು ರೀತಿಯ ಬೋರ್ ಆಗ್ತಾ ಇದೆ ಎನ್ನುವುದು ಕುಕ್ಕುವಾಡ ಗ್ರಾಮದ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ 10ನೇ ತರಗತಿ ವಿದ್ಯಾರ್ಥಿ ಪಿ.ಆರ್. ರಾಕೇಶ್ ಅನಿಸಿಕೆ. ವಿದ್ಯಾರ್ಥಿಗಳು ಸಹ ಅಂತರ ಕಾಪಾಡಿಕೊಳ್ಳುತ್ತಿರುವುದು. ಒಬ್ಬರಿಗೊಬ್ಬರನ್ನು ಭೇಟಿ ಮಾಡುವುದಕ್ಕೂ ಹಿಂಜರಿಯುವಂತೆ ಮಾಡುತ್ತಿರುವುದಕ್ಕೆ ಕಾರಣ ಗ್ರಾಮಗಳಲ್ಲಿ ಊಹೆಗೂ ಮೀರಿ ವ್ಯಾಪಿಸುತ್ತಿರುವ ಕೊರೊನಾ ಎಂಬ ಮಹಾಮಾರಿ.
ಕೊರೊನಾ ಎಲ್ಲಿಯೋ ಒಂದು ಕಡೆ ವಿದ್ಯಾರ್ಥಿ ಸಮುದಾಯದ ಮೇಲೆ ಗಾಢ ಪರಿಣಾಮ ಉಂಟು ಮಾಡುತ್ತಿದೆ ಎಂಬುದಕ್ಕೆ ರಾಕೇಶ್‌ನ ಮಾತು ಪುಷೀrಕರಿಸುತ್ತದೆ. ವಿದ್ಯಾರ್ಥಿಗಳು ಕಲಿಕಾ ವಾತಾವರಣದಿಂದ ದೂರವಾಗಬಾರದು. ವಿದ್ಯಾರ್ಥಿ ಜೀವನದ ಅತಿ ಪ್ರಮುಖ ಘಟ್ಟ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಸಮರ್ಥವಾಗಿ ಮತ್ತು ಆತ್ಮವಿಶ್ವಾಸದಿಂದ ಬರೆಯುವಂತಾಗಬೇಕು ಎಂದು ಶಿಕ್ಷಕ ಸಮೂಹ ನಿರಂತರವಾಗಿ ವಿದ್ಯಾರ್ಥಿಗಳ ಸಂಪರ್ಕದಲ್ಲಿದೆ. ಆನ್‌ಲೈನ್, ಮೊಬೈಲ್ ಸಂಪರ್ಕದ ಮೂಲಕ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮೂಡಿಸುವ ಕೆಲಸ ನಡೆಯುತ್ತಲೇ ಇದೆ.
ಆದರೂ, ವಿದ್ಯಾರ್ಥಿಗಳಲ್ಲಿ ಪರೀಕ್ಷೆ ನಡೆದು ಹೋಗಿದ್ದರೆ ಚೆನ್ನಾಗಿ ಇರುತ್ತಾ ಇತ್ತು… ಎಂಬ ಭಾವನೆ ಆಳವಾಗಿ ಬೇರೂರಿದೆ. ಆದರೆ, ಕೊರೊನಾ ಕಾರಣಕ್ಕೆ ಪರೀಕ್ಷೆ ಮುಂದೂಡಲೇಬೇಕಾಗಿದೆ. ವಾತಾವರಣ ತಿಳಿಯಾದ ನಂತರ ಪರೀಕ್ಷೆ ನಡೆಯಲಿವೆ. ಅಲ್ಲಿಯವರೆಗೆ ವಿದ್ಯಾರ್ಥಿಗಳು ಓದಿನತ್ತ ಗಮನ ಹರಿಸಬೇಕು ಎನ್ನುತ್ತಾರೆ ಅಣಬೇರು ಗ್ರಾಮದ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕ ಟಿ. ಸುರೇಶ್.