ಹೊನ್ನಾಳಿ: ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲೂಕುಗಳಲ್ಲಿ ಕೊರೊನಾ ಮಹಾಮಾರಿಯನ್ನು ತೊಲಗಿಸಲು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಸಮರ್ಥವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಸಂಸದ ಡಾ| ಜಿ.ಎಂ. ಸಿದ್ದೇಶ್ವರ ಮೆಚ್ಚುಗೆ ವ್ಯಕ್ತಪಡಿಸಿದರು.
ಎಂ.ಪಿ. ರೇಣುಕಾಚಾರ್ಯ ಅವರು ತಮ್ಮ ತಂದೆ-ತಾಯಿ ಸ್ಮರಣಾರ್ಥ ನೀಡಿರುವ 4 ಆಂಬ್ಯುಲೆನ್ಸ್, 50 ಸ್ಟೀಲ್ ಕಾಟ್ ಹಾಗೂ 50 ಬೆಡ್‌ಗಳನ್ನು ಬುಧವಾರ ಪಟ್ಟಣದ ತಾಲೂಕು ಆಸ್ಪತ್ರೆಯಲ್ಲಿ ಹಸ್ತಾಂತರಿಸಿ ಆರೋಗ್ಯ ಇಲಾಖೆಗೆ ಹಸ್ತಾಂತರಿಸಿ ಮಾತನಾಡಿದರು. ತಾಲೂಕು ಆಸ್ಪತ್ರೆಗೆ ಅವಶ್ಯವಿರುವಷ್ಟು ಆಕ್ಸಿಜನ್ ಕಾನ್ಸಂಟ್ರೇಟರ್‌ಗಳು, ಆಕ್ಸಿಜನ್ ಘಟಕ ಸೆರಿದಂತೆ ಅನೇಕ ಸೌಲಭ್ಯಗಳನ್ನು ಕಲ್ಪಿಸಿದ್ದಾರೆ.
ಅಲ್ಲದೆ ಕೊರೊನಾ ವಿರುದ್ಧ ತಾವೇ ವಾರಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದೊಂದು ದೊಡ್ಡ ಸಾಧನೆ ಎಂದರು. ಹೊನ್ನಾಳಿ ಮತ್ತು ನ್ಯಾಮತಿ ತಾಲೂಕುಗಳಲ್ಲಿ ಕೊರೊನಾ ವ್ಯಾಪಕವಾಗಿ ಹಬ್ಬುತ್ತಿದೆ. ಜನರು ಸರ್ಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ತಪ್ಪಿದಲ್ಲಿ ಅವಘಡಗಳು ಸಂಭವಿಸುತ್ತವೆ ಎಂದು ಎಚ್ಚರಿಸಿದರು.
ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ನನ್ನ ತಾಯಿ ಕಮಲಮ್ಮ ಹಾಗೂ ತಂದೆ ಪಂಚಾಕ್ಷರಯ್ಯ ಅವರ ಬಲವಾದ ಆಶೀರ್ವಾದವೇ ನಾನು ಉನ್ನತ ಸ್ಥಾನಕ್ಕೇರಲು ಕಾರಣ. ಅವರ ಹೆಸರಿನಲ್ಲಿ ಅಳಿಲು ಸೇವೆ ಎನ್ನುವಂತೆ ಕೊರೊನಾ ವೇಳೆಯಲ್ಲಿ ಆಸ್ಪತ್ರೆಗೆ ತುರ್ತಾಗಿ ಬೇಕಾಗಿರುವ ಆಂಬ್ಯುಲೆನ್ಸ್, ಕಾಟ್ ಮತ್ತು ಬೆಡ್‌ಗಳನ್ನು ವೈಯಕ್ತಿಕವಾಗಿ ನೀಡಿದ್ದೇನೆ. ಅವುಗಳ ಸದುಪಯೋಗವಾದರೆ ಅದೇ ನನ್ನ ಪುಣ್ಯ ಎಂದು ಭಾವಿಸುವುದಾಗಿ ತಿಳಿಸಿದರು.
ಅವಳಿ ತಾಲೂಕುಗಳ ಜನರ ರಕ್ಷಣೆ ನನ್ನ ಮೊದಲ ಕರ್ತವ್ಯ. ನಾನೆಂದೂ ಮಾಲೀಕ ಎಂದು ತಿಳಿದುಕೊಳ್ಳದೇ ಜನರ ಸೇವಕನೆಂದು ಭಾವಿಸಿ ಕಾರ್ಯ ನಿರ್ವಹಿಸುತ್ತಿದ್ದೇನೆ. ನಾನು ದಿನದ 24 ಗಂಟೆಗಳಲ್ಲಿ 18 ಗಂಟೆ ಕೆಲಸ ಮಾಡುತ್ತೇನೆ. ಇದಕ್ಕೆ ಅವಳಿ ತಾಲೂಕುಗಳ ನಾಗರಿಕರ ಆಶೀರ್ವಾದವೇ ಕಾರಣ ಎಂದರು.
ಜಿಲ್ಲಾ ಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ಸದ್ಯದ ಪರಿಸ್ಥಿತಿಯಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿದ್ದು, ಮುಂದಿನ ದಿನಗಳಲ್ಲಿ ಇಳಿಕೆಯಾಗುವ ನಿರೀಕ್ಷೆ ಇದೆ. ಜಿಲ್ಲೆಯಲ್ಲಿ ಒಟ್ಟು 1059 ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲೂಕುಗಳಲ್ಲಿ 416 ಪ್ರಕರಣಗಳು ಇವೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ಆರೋಗ್ಯಾಧಿ ಕಾರಿ ಡಾ| ನಾಗರಾಜ್, ಪುರಸಭಾಧ್ಯಕ್ಷ ಕೆ.ವಿ. ಶ್ರೀಧರ, ತಹಶೀಲ್ದಾರ್ ಬಸನಗೌಡ ಕೋಟೂರ, ಪಿಎಸ್‌ಐ ಬಸವರಾಜ ಆರ್. ಬಿರಾದಾರ್, ತಾಲೂಕು ಆರೋಗ್ಯಾಧಿಕಾರಿ ಡಾ.ಕೆಂಚಪ್ಪ ಇದ್ದರು.