Advertisement

ಕೊರೊನಾ ಲಸಿಕೆ ಮುಕ್ತ ಮಾರು ಕ ಟ್ಟೆಯಲ್ಲಿ ಸಿಗಲಿ

09:02 PM May 23, 2021 | Team Udayavani |

ದಾವಣಗೆರೆ: ಕ್ಷೇತ್ರದ ಜನರಿಗೆ ಬೇಕಾಗುವಷ್ಟು ಕೊರೊನಾ ಲಸಿಕೆಯನ್ನು ನಾನೇ ಖಾಸಗಿಯಾಗಿ ಖರೀದಿಸಲು ಯೋಚನೆ ಮಾಡಿದ್ದು, ಈಗಾಗಲೇ ಕೆಲವು ಕಂಪನಿಗಳ ಜತೆಯೂ ಚರ್ಚಿಸಿದ್ದೇನೆ ಎಂದು ಕಾಂಗ್ರೆಸ್‌ ಮುಖಂಡ, ಮಾಜಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ತಿಳಿಸಿದರು.

Advertisement

ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಲಸಿಕೆಗಾಗಿ ಜಿಲ್ಲಾಡಳಿತದ ಕೈಗೆ 18 ಕೋಟಿ ರೂ. ಕೊಟ್ಟರೆ ಸಂಸದರು ಅದರಲ್ಲಿಯೂ ಶೇ. 30ರಷ್ಟು ಕಮಿಶನ್‌ ಹೊಡೆಯುತ್ತಾರೆ. ಹಾಗಾಗಿ ನಾನೇ ಖರೀದಿಸಲು ಯೋಚಿಸಿದ್ದೇನೆ ಎಂದರು.

ಕೊರೊನಾ ಲಸಿಕೆ ಪ್ರಸ್ತುತ ಸರ್ಕಾರದ ಅಧೀನದಲ್ಲಿರುವುದರಿಂದ ಮುಕ್ತ ಖರೀದಿಗೆ ಸ್ವಲ್ಪ ಅಡ್ಡಿಯಾಗಿದೆ. ಲಸಿಕೆ ಶೀಘ್ರ ಮುಕ್ತ ಮಾರುಕಟ್ಟೆಗೆ ಬರುವಂತಾಗಬೇಕು ಎಂದ ಅವರು, ಒಂದು ವೇಳೆ ಜನರಿಗೆ ಲಸಿಕೆ ಕೊಡಿಸಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ, ಸರ್ಕಾರ ಸಂಪೂರ್ಣ ದಿವಾಳಿಯಾಗಿದೆ ಎಂದು ಘೋಷಿಸಿದರೆ ನಾಳೆಯೇ 18 ಕೋಟಿ ರೂ.ಗಳನ್ನು ಸರ್ಕಾರಕ್ಕೆ ಕೊಡುತ್ತೇನೆ ಎಂದು ಘೋಷಿಸಿದರು.

ನಮ್ಮ ಸಂಸ್ಥೆಯ ಆಸ್ಪತ್ರೆಗಳಲ್ಲಿ ಕೊರೊನಾ ರೋಗಿಗಳ ಚಿಕಿತ್ಸೆಗೆ ಸಂಬಂಧಿಸಿ ಏನೇ ಇದ್ದರೂ ಕುಳಿತು ಅಧಿಕಾರಿಗಳು, ಮಂತ್ರಿಗಳು ನಮ್ಮೊಂದಿಗೆ ಕುಳಿತು ಚರ್ಚೆ ಮಾಡಲಿ. ನಿಖರ ಅಂಕಿ-ಅಂಶ ಪಡೆದು ದಾಖಲೆ ಪರಿಶೀಲಿಸಲಿ. ವಾಸ್ತವ ಏನಿದೆ ಎಂಬುದನ್ನು ಅರಿಯಲಿ. ಆಗ ಸಮಸ್ಯೆ ಏನೇ ಇದ್ದರೂ ಚರ್ಚಿಸಿ ಬಗೆಹರಿಸಬಹುದು. ಬಾಯಿಗೆ ಬಂದಂತೆ ಆರೋಪ ಮಾಡಿ ಜನರ ದಿಕ್ಕು ತಪ್ಪಿಸುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸರ್ಕಾರವೇ ಬಾಕಿದಾರ: ಕಳೆದ ವರ್ಷ ಕೊರೊನಾ ಸಂದರ್ಭದಲ್ಲಿ ಚಿಕಿತ್ಸೆ ನೀಡಿದ ಮೊತ್ತವೇ ಎಸ್‌. ಎಸ್‌. ಹಾಗೂ ಬಾಪೂಜಿ ಎರಡೂ ಆಸ್ಪತ್ರೆ ಸೇರಿ 8-10 ಕೋಟಿ ರೂ. ಸರ್ಕಾರದಿಂದ ಬರುವುದು ಬಾಕಿ ಇದೆ. ಪಿಜಿ ವಿದ್ಯಾರ್ಥಿಗಳ ಸ್ಟೈಫಂಡ್‌ ಕೂಡ ಬಂದಿಲ್ಲ. ಅದ್ಯಾವುದನ್ನೂ ನಾವು ಕೇಳಿಲ್ಲ. ನಾವು ಹೇಗಾದರೂ ಸುಧಾರಿಸಿಕೊಳ್ಳುತ್ತೇವೆ, ಆದರೆ ಐಸೋಲೇಶನ್‌ ಗೆ ಕೊಠಡಿ ಕೊಟ್ಟ ಖಾಸಗಿ ವಸತಿ ಗೃಹದವರಿಗೆ, ಊಟ ಕೊಟ್ಟವರಿಗೂ ಜಿಲ್ಲಾಡಳಿತ ಒಂದು ವರ್ಷವಾದರೂ ಕೊಡದೆ ಇದ್ದರೆ ಅವರ ಗತಿ ಏನು ಎಂದು ಮಲ್ಲಿಕಾರ್ಜುನ್‌ ಪ್ರಶ್ನಿಸಿದರು.

Advertisement

ಬಾಪೂಜಿ ಆಸ್ಪತ್ರೆಯು ಚಿಗಟೇರಿ ಆಸ್ಪತ್ರೆಯೊಂದಿಗೆ ಸೇರಿಕೊಂಡಿದೆ. ಈ ರೀತಿಯ ಒಪ್ಪಂದದ ಆಸ್ಪತ್ರೆಗಳು ರಾಜ್ಯದಲ್ಲಿ ಬಹಳಷ್ಟಿವೆ. ಚಿಗಟೇರಿಯನ್ನು ಸಂಪೂರ್ಣ ಕೋವಿಡ್‌ ಆಸ್ಪತ್ರೆಯನ್ನಾಗಿಸಿ ಪರಿವರ್ತಿಸಿದ ಮೇಲೆ ಕೋವಿಡೇತರ ಚಿಕಿತ್ಸೆಯನ್ನು ಬಾಪೂಜಿ ಆಸ್ಪತ್ರೆ ನಿಭಾಯಿಸುತ್ತಿದೆ. ಹೀಗಾಗಿ ಜಿಲ್ಲಾಡಳಿತ ಬಾಪೂಜಿಗೆ ಯಾವ ಕೋವಿಡ್‌ ರೋಗಿಯನ್ನು ಶಿಫಾರಸು ಮಾಡುತ್ತಿರಲಿಲ್ಲ. ಈಗ ಒಂದು ವಾರದಿಂದ ಶಿಫಾರಸು ಮಾಡುತ್ತಿದೆ.

ಜಿಲ್ಲಾಡಳಿತ ಶಿಫಾರಸು ಮಾಡಿದ 250 ಜನರಿಗೆ ಎಸ್‌ಎಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಜಿಲ್ಲಾಡಳಿತ ಶಿಫಾರಸು ಮಾಡುವ ಯಾವ ರೋಗಿಯನ್ನೂ ಈವರೆಗೆ ತಿರಸ್ಕರಿಸಿಲ್ಲ. ಎಲ್ಲರಿಗೂ ಚಿಕಿತ್ಸೆ ನೀಡಿದ್ದೇವೆ. ದಾಖಲೆ ನೋಡಿದರೆ ಶೇ. 50ಕ್ಕಿಂತ ಹೆಚ್ಚು ಬೆಡ್‌ ಸರ್ಕಾರ ಶಿಫಾರಸು ಮಾಡಿದವರಿಗೇ ನೀಡಲಾಗಿದೆ. ಇದನ್ನೆಲ್ಲ ಗಮನಿಸದೇ ಮಂತ್ರಿಗಳು, ಸಂಸದರು ಮಾತನಾಡುವುದು ಸರಿಯಲ್ಲ ಎಂದರು.

ಸೌಲಭ್ಯ ಬಳಸಿಕೊಂಡಿಲ್ಲ: ಚಿಗಟೇರಿ ಆಸ್ಪತ್ರೆಯಲ್ಲಿ ಕೇವಲ 15-20 ಮಾತ್ರ ಖಾಯಂ ವೈದ್ಯರಿದ್ದು, ಉಳಿದೆಲ್ಲ ವೈದ್ಯರು ಬಾಪೂಜಿ ಸಂಸ್ಥೆಯ ವೈದ್ಯರಾಗಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿರುವ ಅರ್ಧಕ್ಕರ್ಧ ವೆಂಟಿಲೇಟರ್‌ಗಳು ತಜ್ಞರಿಲ್ಲದೇ ಉಪಯೋಗವಾಗುತ್ತಿಲ್ಲ. ನಮ್ಮ ಸಂಸ್ಥೆ ಸಿಬ್ಬಂದಿಯನ್ನು ನಿಯೋಜಿಸಿ ನಿರ್ವಹಣೆ ಮಾಡಿಕೊಳ್ಳಿ ಎಂದು 15 ದಿನಗಳ ಹಿಂದೆಯೇ ಹೇಳಿದ್ದರೂ ಅದನ್ನು ಬಳಕೆ ಮಾಡಿಕೊಂಡಿಲ್ಲ.

5000 ಹಾಸಿಗೆಯ ಕೋವಿಡ್‌ ಆರೈಕೆ ಕೇಂದ್ರ ಮಾಡಲು ಹಾಸ್ಟೆಲ್‌ಗ‌ಳನ್ನು ಬಿಟ್ಟು ಕೊಡುವುದಾಗಿಯೂ ಹೇಳಿದ್ದೇನೆ. ಆದರೂ ಬಳಸಿಕೊಂಡಿಲ್ಲ ಎಂದು ಆರೋಪಿಸಿದರು.

ಸಂಸದರು ಕೇವಲ ರಾಜಕಾರಣ ಮಾಡುವುದನ್ನು ಬಿಟ್ಟು ಜಿಲ್ಲೆಗೆ ಈಗ ತುರ್ತಾಗಿ ಬೇಕಾಗಿರುವ ಲಸಿಕೆ ತರುವುದು, ಬ್ಲಾಕ್‌ ಮತ್ತು ವೈಟ್‌ ಫಂಗಸ್‌ ಚಿಕಿತ್ಸೆಗೆ ಬೇಕಾದ ಔಷಧಿ ತರುವುದು, ರೆಮ್‌ಡಿಸಿವಿಯರ್‌, ಆಕ್ಸಿಜನ್‌, ವೈದ್ಯಕೀಯ ಮೂಲಸೌಲಭ್ಯ ಹೆಚ್ಚಿಸುವ ಕೆಲಸ ಮಾಡಲಿ. ಅದನ್ನು ಬಿಟ್ಟು ಸತ್ತವರ ಮನೆಯ ಬೆಂಕಿಯಲ್ಲಿ ಬೇಳೆ ಬೇಯಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next