Advertisement

ಪುಕ್ಕಟೆ ಉಪದೇಶ ನಿಲ್ಲಿಸಿ ರಾಜ್ಯದ ನೆರವಿಗೆ ಧಾವಿಸಿ

08:56 PM May 18, 2021 | Team Udayavani |

ದಾವಣಗೆರೆ: ಪ್ರಧಾನಿ ನರೇಂದ್ರ ಮೋದಿಯವರು ಪುಕ್ಕಟೆ ಉಪದೇಶ ನೀಡುವ ಬದಲಿಗೆ ಕೊರೊನಾದಿಂದ ತತ್ತರಿಸುತ್ತಿರುವ ರಾಜ್ಯದ ನೆರವಿಗೆ ಧಾವಿಸಿ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು ಎಂದು ಕೆಪಿಸಿಸಿ ವಕ್ತಾರ ಡಿ. ಬಸವರಾಜ್‌ ತಾಕೀತು ಮಾಡಿದ್ದಾರೆ.

Advertisement

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರತಿ ನಿತ್ಯ ಸಾವಿರಾರು ಜನರು ಕೊರೊನಾ ಸೋಂಕಿಗೆ ಒಳಗಾಗುತ್ತಿದ್ದಾರೆ ಮತ್ತು ಸಾವನ್ನಪ್ಪುತ್ತಿದ್ದಾರೆ. ಮೋದಿಯವರು ಖುದ್ದು ರಾಜ್ಯಕ್ಕೆ ಭೇಟಿ ನೀಡಿ ಲಸಿಕೆ, ಆಕ್ಸಿಜನ್‌, ವೆಂಟಿಲೇಟರ್‌ ಇತರೆ ಅಗತ್ಯ ಸೌಲಭ್ಯಗಳ ಒದಗಿಸಬೇಕು. ಎಲ್ಲಿಯೋ ಕುಳಿತು ಪುಕ್ಕಟೆ ಉಪದೇಶ ನೀಡುವುದ ನಿಲ್ಲಿಸಬೇಕು ಎಂದರು.

ಪ್ರಧಾನಿ ಪ್ರತಿನಿ ಧಿಸುವ ವಾರಣಾಸಿಯ ಪವಿತ್ರ ಗಂಗಾನದಿಯಲ್ಲಿ ನೂರಾರು ಶವಗಳು ತೇಲಾಡುತ್ತಿರುವುದು ದೇಶದ ದುರಂತ. ಚುನಾವಣೆಗಳಿಗೆ ದೌಡಾಯಿಸುವ ಅವರು ರಾಜ್ಯದಲ್ಲೂ ಚುನಾವಣೆ ನಡೆದರೆ ರ್ಯಾಲಿ ನಡೆಸಲು ಓಡೋಡಿ ಬರುತ್ತಾರೆ. ಆದರೆ ಕೊರೊನಾ ಸಂಕಷ್ಟದಲ್ಲಿರುವ ಜನರ ನೆರವಿಗೆ ರಾಜ್ಯಕ್ಕೆ ಬರುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ದಿನನಿತ್ಯ ಸಾವಿರಕ್ಕೂ ಅ ಧಿಕ ಕೋವಿಡ್‌ ಪಾಸಿಟಿವ್‌ ಪ್ರಕರಣಗಳು ಬರುತ್ತಿವೆ. ಬಡ ಜನತೆ ಬೆಡ್‌, ಆಕ್ಸಿಜನ್‌, ವೆಂಟಿಲೇಟರ್‌, ಕೋವಿಡ್‌ ಲಸಿಕೆಗಾಗಿ ಪರಿತಪಿಸುತ್ತಿದ್ದಾರೆ. ಜವಾಬ್ದಾರಿ ಸ್ಥಾನದಲ್ಲಿರುವ ಸಂಸದ ಜಿ.ಎಂ. ಸಿದ್ದೇಶ್ವರ ದೆಹಲಿ, ಬೆಂಗಳೂರಿಗೆ ತೆರಳಿ ಜಿಲ್ಲೆಗೆ ಬೇಕಾಗಿರುವ ಆಕ್ಸಿಜನ್‌, ವೆಂಟಿಲೇಟರ್‌, ಇತರೆ ಅಗತ್ಯ ಸೌಲಭ್ಯ ತರುವ ಮೂಲಕ ಬಡವರ ಕಷ್ಟಕ್ಕೆ ಸ್ಪಂದಿಸಬೇಕು. ಜಿಲ್ಲಾಧಿಕಾರಿಗಳ ಹಿಂದೆ ಸಂಸದರು ಸುತ್ತುವುದು ಆಗಬಾರದು. ಜಿಲ್ಲಾಧಿಕಾರಿ ಸಂಸದರ ಹಿಂದೆ ಸುತ್ತುವಂತೆ ಆಗಬೇಕು ಎಂದರು.

ಜಿಲ್ಲೆಯ ಬಿಜೆಪಿಯ ಐದು ಶಾಸಕರಲ್ಲಿ ನಾಲ್ವರು ಮಂತ್ರಿ ಸ್ಥಾನಮಾನದ ನಿಗಮ ಮಂಡಳಿಗಳ ಅಧ್ಯಕ್ಷರಾಗಿದ್ದಾರೆ. ಇಬ್ಬರು ವಿಧಾನ ಪರಿಷತ್‌ ಸದಸ್ಯರಿದ್ದಾರೆ. ಪ್ರಭಾವಿ ಲೋಕಸಭೆಯ ಸದಸ್ಯರು ಇದ್ದರೂ ಆಟಕ್ಕೂಂಟು ಲೆಕ್ಕಕ್ಕಿಲ್ಲ ಎಂಬುತಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್‌ ಪಿಕ್‌ನಿಕ್‌ಗೆ ಬಂದವರಂತೆ ಬಂದು ಹೋಗುತ್ತಾರೆ. 15 ದಿನ ದಾವಣಗೆರೆಯಲ್ಲೇ ವಾಸ್ತವ್ಯ ಮಾಡಿ ಕೊರೊನಾ ನಿಯಂತ್ರಣಕ್ಕೆ ಅತೀ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

Advertisement

ಮಹಾನಗರಪಾಲಿಕೆ ಸದಸ್ಯ ಜಿ.ಎಸ್‌. ಮಂಜುನಾಥ್‌ ಮಾತನಾಡಿ, ಕೊರೊನಾ ಕರ್ಫ್ಯೂ ದಾವಣಗೆರೆಯಲ್ಲಿ ವಿಫಲವಾಗಿದೆ. ಬೆಳಗಿನ ಸಂದರ್ಭದಲ್ಲಿ ಸಾವಿರಾರು ಜನರು ಓಡಾಡುತ್ತಾರೆ. ಜಿಲ್ಲಾಡಳಿತ, ಜಿಲ್ಲಾ ರಕ್ಷಣಾ ಇಲಾಖೆ ಬಿಗಿಯಾದ ಕ್ರಮ ತೆಗೆದುಕೊಳ್ಳಬೇಕು ಎಂದರು.

ಮಹಾನಗರಪಾಲಿಕೆ ಸದಸ್ಯ ಕೆ. ಚಮನ್‌ಸಾಬ್‌ ಮಾತನಾಡಿ, ಸಣ್ಣ ಕೈಗಾರಿಕೆಗಳ ಹಳೆಯ ಸಾಲದ ಎಲ್ಲ ಬಡ್ಡಿಯನ್ನು ಸಂಪೂ ರ್ಣವಾಗಿ ಮನ್ನಾ ಮಾಡಿ, ನೂತನವಾಗಿ ಬಡ್ಡಿ ರಹಿತ ಸಾಲವನ್ನು ನೀಡುವ ಮೂಲಕ ಸಣ್ಣ ಕೈಗಾರಿಕೆಗಳ ಪುನ:ಶ್ಚೇತನಕ್ಕೆ ಸಹಕರಿಸಬೇಕು ಎಂದು ಒತ್ತಾಯಿಸಿದರು.

ಮುಖಂಡರಾದ ಗಣೇಶ್‌ ಹುಲ್ಮನಿ, ಎಚ್‌. ಸುಬಾನ್‌ ಸಾಬ್‌, ಕೆ.ಎಂ. ಮಂಜುನಾಥ್‌, ಟಿ. ಶಿವಕುಮಾರ್‌, ಡಿ. ಶಿವಕುಮಾರ್‌, ದಾದಾಪೀರ್‌, ಜುಬೇರ್‌, ಜಬೀವುಲ್ಲಾ ಸುದ್ದಿಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next