Advertisement

4 ದಿನ ಸಂಪೂರ್ಣ ಲಾಕ್‌ಡೌನ್‌ ಸದ್ಯಕ್ಕಿಲ್ಲ

09:54 PM May 16, 2021 | Team Udayavani |

ದಾವಣಗೆರೆ: ಕೊರೊನಾ ನಿಯಂತ್ರಣಕ್ಕಾಗಿ ಜಿಲ್ಲೆಯಲ್ಲಿ ವಾರದಲ್ಲಿ ನಾಲ್ಕು ದಿನ ಸಂಪೂರ್ಣ ಲಾಕ್‌ಡೌನ್‌ ಮಾಡುವ ವಿಚಾರ ಸದ್ಯಕ್ಕಿಲ್ಲ. ಈಗ ಇರುವ ನಿಯಮಗಳನ್ನೇ ಇನ್ನಷ್ಟು ಕಠಿಣವಾಗಿ ಅನುಷ್ಠಾನಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.

Advertisement

ಶನಿವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಇತೀ¤ಚೆಗೆ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್‌ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಚಿವರು ಶಿವಮೊಗ್ಗ ಮಾದರಿಯಲ್ಲಿ ಜಿಲ್ಲೆಯಲ್ಲಿಯೂ ವಾರದಲ್ಲಿ ನಾಲ್ಕು ದಿನ ಸಂಪೂರ್ಣ ಲಾಕ್‌ಡೌನ್‌ ಮಾಡಲು ಸೂಚಿಸಿದ್ದರು.

ಈ ಬಗ್ಗೆ ಎಲ್ಲರೊಂದಿಗೆ ಚರ್ಚಿಸಿ ಕ್ರಮ ವಹಿಸಲು ಆದೇಶಿಸಿದ್ದರು. ಈ ಬಗ್ಗೆ ಜಿಲ್ಲಾಡಳಿತದ ನಿರ್ಧಾರ ಪ್ರಕಟಿಸಿದ ಜಿಲ್ಲಾಧಿಕಾರಿ, ಸದ್ಯ ಜಿಲ್ಲೆಯಲ್ಲಿ ವಾರದಲ್ಲಿ ನಾಲ್ಕು ದಿನ ಸಂಪೂರ್ಣ ಲಾಕ್‌ ಡೌನ್‌ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

ಮೆಡಿಕಲ್‌ ಆಕ್ಸಿಜನ್‌ ಕೊರತೆ ಹಿನ್ನೆಲೆಯಲ್ಲಿ ಆಕ್ಸಿಜನ್‌ ಮಿತವ್ಯಯವಾಗಿ ಬಳಸಲು ಹಾಗೂ ಇದನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲು ವೈದ್ಯರಿಗೆ, ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಇದಕ್ಕಾಗಿ ಪ್ರತಿ ವಾರ್ಡಿಗೆ ಒಂದೊಂದು ತಂಡ ರಚಿಸಿ ಆಕ್ಸಿಜನ್‌ ನಿರ್ವಹಿಸಲು ಪ್ರಯತ್ನಿಸಲಾಗುತ್ತಿದೆ. ಮೊದಲು ಸಿಜಿ ಆಸ್ಪತ್ರೆಯಲ್ಲಿರುವ ಲಿಕ್ವಿಡ್‌ ಆಕ್ಸಿಜನ್‌ 24ರಿಂದ 28ತಾಸು ಬರುತ್ತಿತ್ತು. ರೋಗಿಗಳ ಸಂಖ್ಯೆ ಹೆಚ್ಚಾದಂತೆ ಈಗ ಲಿಕ್ವಿಡ್‌ ಆಕ್ಸಿಜನ್‌ 20 ತಾಸಿಗೆ ಖಾಲಿಯಾಗುತ್ತಿದೆ.

ಹೀಗಾಗಿ ತೀರಾ ಅಗತ್ಯವಿದ್ದವರಿಗೆ ಹಾಗೂ ಅಗತ್ಯವಿದ್ದಷ್ಟು ಮಾತ್ರ ಆಕ್ಸಿಜನ್‌ ಬಳಸಲು ಸೂಚಿಸಲಾಗಿದೆ ಹಾಗೂ ಕನಿಷ್ಠ 24 ತಾಸು ಆದರೂ ಬರುವಂತೆ ನಿರ್ವಹಣೆ ಮಾಡಲು ಕ್ರಮ ವಹಿಸಲಾಗುತ್ತಿದೆ ಎಂದರು. ಹರಿಹರದ ಸದರ್ನ್ ಗ್ಯಾಸ್‌ನಲ್ಲಿ ಎರಡು ಟ್ಯಾಂಕರ್‌ ಗಳಿವೆ. ಅದರಲ್ಲಿ ಒಂದು ಟ್ಯಾಂಕರ್‌ ನಿತ್ಯ 10 ಟನ್‌ ಮೆಡಿಕಲ್‌ ಆಕ್ಸಿಜನ್‌ ತರುತ್ತಿದೆ. ಇದರಲ್ಲಿ ಸಿಜಿ ಆಸ್ಪತ್ರೆಗೆ ಆರು ಟನ್‌, ಚಿತ್ರದುರ್ಗಕ್ಕೆ ನಾಲ್ಕು ಟನ್‌ ಆಕ್ಸಿಜನ್‌ ನೀಡಲಾಗುತ್ತಿದೆ. ಇನ್ನೊಂದು ಟ್ಯಾಂಕರ್‌ 8.5 ಟನ್‌ ಆಕ್ಸಿಜನ್‌ ತರುತ್ತಿದ್ದು, ಅದರಿಂದ ಸಿಜಿ ಆಸ್ಪತ್ರೆಯ ಜಂಬೋ ಸಿಲಿಂಡರ್‌ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ಆಕ್ಸಿಜನ್‌ ಸಿಲಿಂಡರ್‌ ತುಂಬಿಸಲಾಗುತ್ತಿದೆ.

Advertisement

ಸಿ.ಜಿ. ಆಸ್ಪತ್ರೆಯಿಂದ ಪ್ರತಿ ದಿನ ಸರಾಸರಿ 25ರಿಂದ 30 ಜನ ಬಿಡುಗಡೆಯಾದರೆ ಅಷ್ಟೇ ಜನ ದಾಖಲಾಗಲು ಕಾಯುತ್ತಿದ್ದಾರೆ. ಬಿಡುಗಡೆ ಬಗ್ಗೆ ನಿರ್ವಹಿಸಲು ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಅವಶ್ಯಕತೆ ಇರುವವರಿಗೆ ಅವಕಾಶ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.

ದಾನಿಗಳು ಮುಂದೆ ಬನ್ನಿ: ಮೆಡಿಕಲ್‌ ಆಕ್ಸಿಜನ್‌ ನಿಭಾಯಿಸಲು ಆಕ್ಸಿಜನ್‌ ಜನರೇಟರ್‌ ಪ್ಲಾಂಟ್‌ಗಳು ಸಹಕಾರಿಯಾಗಿದೆ. ಸಂಸದರು ಸ್ವತಃ ಹರಿಹರ ಹಾಗೂ ಜಗಳೂರಿನಲ್ಲಿ ಮಾಡಿಸುವ ಭರವಸೆ ನೀಡಿದ್ದಾರೆ. ಚನ್ನಗಿರಿ ಶಾಸಕರು ಸಹ ಆಸಕ್ತಿ ತೋರಿದ್ದಾರೆ. ಮಹಾನಗರಪಾಲಿಕೆ ವತಿಯಿಂದ 60 ಆಕ್ಸಿಜನ್‌ ಕಾನ್ಸಂಟ್ರೇಟರ್‌ ಖರೀದಿಗೆ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗಿದೆ. ಜಿಲ್ಲಾ ಸಹಕಾರ ಬ್ಯಾಂಕ್‌ನ ಅಧ್ಯಕ್ಷರು ಸಹ ಸುಮಾರು 10 ಸಾವಿರ ಲೀಟರ್‌ ಸಾಮರ್ಥ್ಯದ ಆಕ್ಸಿಜನ್‌ ಜನರೇಟರ್‌ ಪ್ಲಾಂಟ್‌ ಕೊಡುಗೆಯಾಗಿ ಜಿಲ್ಲಾಡಳಿತಕ್ಕೆ ನೀಡಲು ಮುಂದಾಗಿದ್ದಾರೆ.

ಅದೇ ರೀತಿ ಶಾಸಕರ ಅನುದಾನದಲ್ಲಿ ಶೇ. 25 ರಷ್ಟು ಅನುದಾನವನ್ನು ವೈದ್ಯಕೀಯ ಸೌಲಭ್ಯಗಳಿಗೆ ನೀಡಲು ಶಾಸಕರಿಗೆ ಪತ್ರ ಬರೆಯಲಾಗಿದೆ . ಇನ್ನು ದಾನಿಗಳು ಐದು ಲೀಟರ್‌, 10 ಲೀಟರ್‌ ಸಾಮರ್ಥ್ಯದ ಆಕ್ಸಿಜನ್‌ ಕಾನ್ಸಂಟ್ರೇಟರ್‌ನಂಥ ಯಂತ್ರ (ಇವುಗಳ ದರ 50 ಸಾವಿರದಿಂದ 1 ಲಕ್ಷ ರೂ. ವರೆಗೂ ಇದೆ) ಇಲ್ಲವೇ ಆಕ್ಸಿಜನ್‌ ಜನರೇಟರ್‌ ಪ್ಲಾಂಟ್‌ ಗೆ ಧನಸಹಾಯ ಮಾಡಲು ಮುಂದೆ ಬರಬೇಕು ಎಂದು ಜಿಲ್ಲಾಧಿಕಾರಿಯವರು ಕೋರಿದರು.

ಔಷಧಿ ಕಿಟ್‌: ಜಿಪಂ ಸಿಇಒ ಡಾ| ವಿಜಯಮಹಾಂತೇಶ್‌ ದಾನಮ್ಮನವರ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಕೊರೊನಾ ಆರಂಭಿಕ ಲಕ್ಷಣ ಕಂಡು ಬಂದವರಿಗಾಗಿ ಪ್ರಾಥಮಿಕ ಚಿಕಿತ್ಸೆಗಾಗಿ ವೈದ್ಯರಿಂದ ಶಿಫಾರಸು ಮಾಡಲ್ಪಟ್ಟ ಆರು ತರಹದ ಗುಳಿಗೆಗಳಿರುವ ಕಿಟ್‌ಗಳನ್ನು ಸಿದ್ಧಪಡಿಸಲಾಗಿದೆ.

ಇಂತಹ 5000 ಕಿಟ್‌ಗಳನ್ನು ಸದ್ಯ ವಿತರಿಸಲು ಕ್ರಮ ವಹಿಸಲಾಗಿದೆ ಎಂದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ, ಕೋವಿಡ್‌ ನೋಡಲ್‌ ಅಧಿಕಾರಿ ಪ್ರಮೋದ್‌ ನಾಯಕ್‌, ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ| ನಾಗರಾಜ್‌ ಸುದ್ದಿಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next