Advertisement

ಸೋಂಕು ನಿಯಂತ್ರಣಕ್ಕೆ ಎಲ್ಲರೂ ಕೈಜೋಡಿಸಲಿ

09:36 PM May 06, 2021 | Team Udayavani |

ದಾವಣಗೆರೆ: ಕೊರೊನಾ ಸೋಂಕು ದಿನದಿಂದ ದಿನಕ್ಕೆ ವ್ಯಾಪಕವಾಗಿ ಹರಡುತ್ತಿದ್ದು ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಹಾಗೂ ಸೋಂಕಿತರ ಶುಶ್ರೂಷೆ ಮಾಡುವ ಕಾರ್ಯದಲ್ಲಿ ಜಿಲ್ಲಾಡಳಿತದೊಂದಿಗೆ ಜಿಲ್ಲೆಯ ಸರ್ಕಾರೇತರ ಸಂಘ ಸಂಸ್ಥೆಗಳು ಸಹ ಕೈಜೋಡಿಸಬೇಕು ಎಂದು ಸಂಸದ ಡಾ| ಜಿ.ಎಂ.ಸಿದ್ದೇಶ್ವರ ಮನವಿ ಮಾಡಿದರು.

Advertisement

ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರವೊಂದರಿಂದಲೇ ಕೊರೊನಾ ನಿಯಂತ್ರಿಸಲು ಸಾಧ್ಯವಿಲ್ಲ. ಸಾರ್ವಜನಿಕರು ಹಾಗೂ ಸರ್ಕಾರೇತರ ಸಂಘ ಸಂಸ್ಥೆಗಳು ಕೊರೋನಾ ನಿಯಂತ್ರಣ ಕಾರ್ಯದಲ್ಲಿ ಸಹಭಾಗಿತ್ವ ತೋರಬೇಕು. ಆಗ ಮಾತ್ರ ಕೊರೊನಾ ನಿಯಂತ್ರಣ ಸಾಧ್ಯ ಎಂದರು.

ಈಗಾಗಲೇ ನಗರದ ಸಿಜಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಕೊರೊನಾ ಸೋಂಕಿತರಿಗೆ ಊಟ ಉಪಚಾರದ ಹೊಣೆಯನ್ನು ಒಂದು ಸಂಸ್ಥೆಯವರು ವಹಿಸಿಕೊಂಡಿದ್ದಾರೆ. ಅದೇ ರೀತಿ ತಾಲೂಕು ಮಟ್ಟದ ಆಸ್ಪತ್ರೆಗಳಲ್ಲಿ ದಾಖಲಾಗಿರುವ ಸೋಂಕಿತರಿಗೆ ಊಟ ಉಪಚಾರ ಹಾಗೂ ಇನ್ನಿತರೆ ಸೌಲಭ್ಯಗಳನ್ನು ಒದಗಿಸಲು ಸಂಘ-ಸಂಸ್ಥೆಗಳು ಮುಂದೆ ಬಂದರೆ ಅನುಕೂಲವಾಗಲಿದೆ ಎಂದು ತಿಳಿಸಿದರು.

ಜಿಲ್ಲೆಯ ಎಲ್ಲ ಸೋಂಕಿತರು ಜಿಲ್ಲಾಸ್ಪತ್ರೆಯನ್ನೇ ಅವಲಂಬಿಸಿ ದಾವಣಗೆರೆಗೆ ಬಂದರೆ ಇಲ್ಲಿ ಒತ್ತಡ ಉಂಟಾಗಲಿದೆ. ಈ ಒತ್ತಡ ಕಡಿಮೆ ಮಾಡುವ ದೃಷಿಯಿಂದ ತಾಲೂಕು ಮಟ್ಟದ ಆಸ್ಪತ್ರೆಗಳಲ್ಲಿಯೇ ಸೋಂಕಿತರನ್ನು ದಾಖಲಿಸಿಕೊಂಡು ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆ ಅವಶ್ಯವಿರುವ ರೋಗಿಗಳನ್ನು ಮಾತ್ರ ದಾವಣಗೆರೆ ಜಿಲ್ಲಾಸ್ಪತ್ರೆಗೆ ಕಳುಹಿಸಿ ಎಂದು ಸಲಹೆ ನೀಡಿದರು.

ತಾಲೂಕು ಮಟ್ಟದ ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ ಸಂಸದರು, ತಜ್ಞ ವೈದ್ಯರು ನೇಮಕಗೊಂಡರೆ ತಾಲೂಕು ಮಟ್ಟದ ಆಸ್ಪತ್ರೆಗಳಲ್ಲಿಯೇ ಉತ್ತಮ ಚಿಕಿತ್ಸೆ ಲಭ್ಯವಾಗಲಿದೆ. ಕೋವಿಡ್‌ ಚಿಕಿತ್ಸೆಗೆ ಮೀಸಲಾಗಿರುವ ಆಸ್ಪತ್ರೆಗಳಲ್ಲಿ ಆರೋಗ್ಯ ಮಿತ್ರರಾಗಿರುವ ಸಿಬ್ಬಂದಿಗಳು ಸೋಂಕಿತರಿಗೆ ಸರಿಯಾದ ಮಾಹಿತಿ ನೀಡಿ ಸಹಕರಿಸಲು ಸೂಚನೆ ನೀಡಬೇಕು. ಎಲ್ಲ ಆಸ್ಪತ್ರೆಗಳಲ್ಲಿ ಕೋವಿಡ್‌ ಚಿಕಿತ್ಸೆಗೆ ಲಭ್ಯವಿರುವ ಬೆಡ್‌ ಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸಬೇಕು ಎಂದರು.

Advertisement

ತಾಲೂಕುಗಳಲ್ಲಿ ತೆರೆಯಲಾಗಿರುವ ಕೋವಿಡ್‌ ಕೇರ್‌ ಸೆಂಟರ್‌ಗಳಲ್ಲಿ ಕಾರ್ಯನಿರ್ವಹಿಸಲು ಸಾಕಷ್ಟು ಜನ ಸ್ವಯಂಸೇವಕರು ಬೇಕು ಎನ್ನುವ ವಿಷಯವನ್ನು ಜಿಲ್ಲಾಧಿಕಾರಿಗಳು ಸಭೆಯ ಗಮನಕ್ಕೆ ತಂದರು. ಸಭೆಯಲ್ಲಿ ಹಾಜರಿದ್ದ ಸಂಘ ಪರಿವಾರದ ಪ್ರಮುಖರು ಸ್ವಯಂಸೇವಕರನ್ನು ಒದಗಿಸುವ ಭರವಸೆ ನೀಡಿದರು.

ಅದೇ ರೀತಿ ಜಿಲ್ಲಾಡಳಿತದೊಂದಿಗೆ ಎಲ್ಲ ರೀತಿಯಿಂದಲೂ ನೆರವಾಗುವುದಾಗಿ ತಿಳಿಸಿದರು. ಸಭೆಯಲ್ಲಿ ಶಾಸಕ ಎಸ್‌.ಎ. ರವೀಂದ್ರನಾಥ್‌, ಮಹಾನಗರ ಪಾಲಿಕೆ ಮಹಾಪೌರ ಎಸ್‌.ಟಿ. ವೀರೇಶ್‌, ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್‌, ಸಂಘ ಪರಿವಾರದ ಪ್ರಮುಖರಾದ ರುದ್ರಯ್ಯ, ಅಜಿತ್‌ ಓಸ್ವಾಲ್‌, ಅರುಣ್‌ ಗುಡ್ಡದಕೇರಿ, ಮಂಜಾ ನಾಯ್ಕ, ಸೊಕ್ಕೆ ನಾಗರಾಜ್‌, ಸೇರಿದಂತೆ ಇತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next