Advertisement

ಆಕ್ಸಿಜನ್‌ ಸಾಗಾಟಕ್ಕೆ ಹೆಚ್ಚುವರಿ ವಾಹನ ವ್ಯವಸ್ಥೆ

08:22 PM May 04, 2021 | Team Udayavani |

ದಾವಣಗೆರೆ: ಜಿಲ್ಲಾಸ್ಪತ್ರೆಯ ಮೆಡಿಕಲ್‌ ಆಕ್ಸಿಜನ್‌ ಪ್ಲಾಂಟ್‌ಗೆ ಆಕ್ಸಿಜನ್‌ ಪಡೆಯಲು ಹೆಚ್ಚುವರಿ ವಾಹನ ವ್ಯವಸ್ಥೆ ಮಾಡಬೇಕು ಎಂದು ಸಂಸದ ಡಾ| ಜಿ.ಎಂ. ಸಿದ್ದೇಶ್ವರ, ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು. ಕೋವಿಡ್‌ ಸೋಂಕಿತರಿಗೆ ಸುಗಮ ಆಕ್ಸಿಜನ್‌ ಪೂರೈಕೆ, ಬೆಡ್‌ ವ್ಯವಸ್ಥೆ ಮತ್ತು ಔಷಧೋಪಚಾರದ ಕುರಿತು ಚರ್ಚಿಸಲು ಸೋಮವಾರ ಜಿಲ್ಲಾಸ್ಪತ್ರೆಯಲ್ಲಿ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹಾಗೂ ವೈದ್ಯರೊಂದಿಗೆ ನಡೆಸಿದ ಸಭೆಯಲ್ಲಿ ಅವರು ಮಾತನಾಡಿದರು.

Advertisement

ಜಿಲ್ಲಾಸ್ಪತ್ರೆಯಲ್ಲಿರುವ 15 ಹೆಚ್ಚುವರಿ ವೆಂಟಿಲೇಟರ್‌ಗಳ ನಿರ್ವಹಣೆಗೆ ನುರಿತ ಸಿಬ್ಬಂದಿಯನ್ನು ನಿಯೋಜಿಸಬೇಕು. ಕೋವಿಡ್‌ ಎರಡನೇ ಅಲೆಯಲ್ಲಿ ಸಾವಿನ ಸಂಖ್ಯೆ ಹೆಚ್ಚುತ್ತಿದೆ. ಇದನ್ನು ಎದುರಿಸಲು ಎಲ್ಲ ರೀತಿಯಲ್ಲಿ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಅಧಿಕಾರಿಗಳು ಮತ್ತು ವೈದ್ಯರಿಗೆ ಸೂಚನೆ ನೀಡಿದರು. ಕೋವಿಡ್‌ ಪತ್ತೆ ಹಚ್ಚಲು ಸಿಟಿ ಸ್ಕಾನ್‌ ಮಾಡಿಸುವವರ ಸಂಖ್ಯೆ ಹೆಚ್ಚುತ್ತಿದ್ದು, ಕೇಂದ್ರದವರು ಹೆಚ್ಚಿನ ದರ ಪಡೆಯುತ್ತಿದ್ದಾರೆಂದು ತಿಳಿದು ಬಂದಿದೆ. ಇಂಥ ತುರ್ತು ಪರಿಸ್ಥಿತಿಯಲ್ಲಿ ವೈದ್ಯರು ಹೆಚ್ಚು ದರ ಪಡೆಯಬಾರದು. ನಿಗದಿತ ದರವನ್ನು ಬೋರ್ಡಿನಲ್ಲಿ ಹಾಕಬೇಕು. ಒಂದು ಪಕ್ಷ ಆ ದರಕ್ಕಿಂತ ಹೆಚ್ಚಿಗೆ ಪಡೆದರೆ ರೋಗಿಗಳ ಸಹಾಯವಾಣಿಗೆ ಕರೆ ಮಾಡಿ ತಿಳಿಸಬೇಕು. ರೆಮಿಡಿಸಿವರ್‌ ಅಗತ್ಯವಿಲ್ಲದಿದ್ದರೂ ಈ ಲಸಿಕೆ ನೀಡುವುದನ್ನು ಪರಿಶೀಲಿಸಿ ಕ್ರಮ ಜರುಗಿಸುವಂತೆ ತಿಳಿಸಿದರು.

ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ಆಕ್ಸಿಜನ್‌ ಬೆಡ್‌ಗಳ ಸಂಖ್ಯೆ ಹೆಚ್ಚಿಸುತ್ತಾ ಹೋದರೆ ಆಕ್ಸಿಜನ್‌ ಪ್ರಷರ್‌ ಕಡಿಮೆ ಆಗಲಿದೆ. ಘಟಕದ ಸಾಮರ್ಥ್ಯಕ್ಕನುಗುಣವಾಗಿ ಬೆಡ್‌ ವ್ಯವಸ್ಥೆ ಮಾಡಲಾಗಿದೆ ಹಾಗೂ ಜಿಲ್ಲಾಸ್ಪತ್ರೆಯಲ್ಲಿ ರೆಮ್‌ ಡಿಸಿವರ್‌ ದಾಸ್ತಾನು ಇದೆ ಎಂದರು. ಇದೇ ವೇಳೆ ಜಿಲ್ಲಾಸ್ಪತ್ರೆಯ ಡಾ| ಗಿರೀಶ್‌, ಕೋವಿಡ್‌ ವಾರ್ಡ್‌ ನಿರ್ವಹಿಸುವ ವೈದ್ಯರ ತಂಡಗಳ ಸಂಖ್ಯೆಯನ್ನು 5ರಿಂದ 6ಕ್ಕೆ ಹೆಚ್ಚಿಸಬೇಕಿದೆ. ಇದಕ್ಕೆ ಅವಶ್ಯಕ ವೈದ್ಯರನ್ನು ಮೆಡಿಕಲ್‌ ಕಾಲೇಜು ಮತ್ತು ಇನ್‌ಟರ್ನ್ಸ್ಗಳನ್ನು ಪಡೆಯಬಹುದು ಎಂದು ಸಲಹೆ ನೀಡಿದರು. ಶುಶ್ರೂಷಕರು ಮತ್ತು ಡಿ ಗ್ರೂಪ್‌ಗ್ಳ ಅಗತ್ಯ ಇದ್ದು ಇವರನ್ನು ನೇಮಿಸುವಂತೆ ಶುಶ್ರೂಷಾಧಿಕಾರಿ ಮನವಿ ಮಾಡಿದರು.

ಸಭೆಯಲ್ಲಿ ಪಾಲಿಕೆ ಮಹಾಪೌರ ಎಸ್‌.ಟಿ. ವೀರೇಶ್‌ , ಕೋವಿಡ್‌ ನೋಡಲ್‌ ಅಧಿಕಾರಿ ಪ್ರಮೋದ್‌ ನಾಯಕ್‌, ಡಿಎಚ್‌ಒ ಡಾ| ನಾಗರಾಜ್‌, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ| ಜಯಪ್ರಕಾಶ್‌, ಡಿಎಸ್‌ಒ ಡಾ| ರಾಘವನ್‌, ಡಾ| ಶಶಿಧರ, ಡಾ| ರವಿ ಮತ್ತಿತರ ತಜ್ಞ ವೈದ್ಯರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next