ಹರಿಹರ: ಹಗಲು-ರಾತ್ರಿ ಎನ್ನದೆ ಗ್ರಾಮದೊಳಗೆ ವಾಯು ಮಾಲಿನ್ಯ, ಶಬ್ದ ಮಾಲಿನ್ಯ ಉಂಟು ಮಾಡುತ್ತಾ ಅಕ್ರಮವಾಗಿ ಮಣ್ಣು ಸಾಗಿಸುವ ವಾಹನಗಳಿಂದ ರೋಸಿ ಹೋಗಿರುವ ಕೊಂಡಜ್ಜಿ ಗ್ರಾಮದ ಗ್ರಾಮಸ್ಥರು, ಶನಿವಾರ ಸಂಜೆ ಗ್ರಾಮದಲ್ಲಿ ಧೂಳೆಬ್ಬಿಸುತ್ತಾ ಬಂದ ಲಾರಿಗಳನ್ನು ತಡೆದು ಪ್ರತಿಭಟಿಸಿದರು.
ಕಳೆದ ಹದಿನೈದು ದಿನಗಳಿಂದ ಪಕ್ಕದ ಹರಪನಹಳ್ಳಿ ತಾಲೂಕಿನ ರಾಗಿಮಸಲವಾಡ ಗ್ರಾಮದ ಕೆರೆಯಿಂದ ಕೊಂಡಜ್ಜಿ, ಗಂಗನರಸಿ ಮಾರ್ಗವಾಗಿ ಗುತ್ತೂರಿನ ಇಟ್ಟಿಗೆ ಭಟ್ಟಿ ಸ್ಥಳಕ್ಕೆ ಭಾರೀ ವಾಹನಗಳು ಹಾಗೂ ಟೆನ್ ವ್ಹೀಲರ್ ಟಿಪ್ಪರ್ ಲಾರಿಗಳ ಮೂಲಕ ಅಕ್ರಮವಾಗಿ ಮಣ್ಣು ಸರಬರಾಜು ಮಾಡಲಾಗುತ್ತಿದೆ. ಅದರಲ್ಲೂ ಇತ್ತೀಚಿಗೆ ವಾಹನಗಳ ಸಂಖ್ಯೆ ಅಧಿ ಕವಾಗಿದ್ದು, ಇಡೀ ಗ್ರಾಮ ಧೂಳುಮಯವಾಗಿದೆ. ನಮ್ಮ ಮನೆಯಲ್ಲೆಲ್ಲಾ ಧೂಳು ಶೇಖರಣೆಯಾಗಿದೆ. ಆಹಾರ ಪದಾರ್ಥಗಳು, ಅಡುಗೆ ಸಾಮಾನುಗಳ ಮೇಲೆಲ್ಲಾ ಮಣ್ಣು ಬಿದ್ದು ತಿನ್ನುವ ಆಹಾರ ಕಲುಷಿತವಾಗುತ್ತಿದೆ.
ಜನರಿಗೆ ಅಸ್ತಮಾ ಸೇರಿದಂತೆ ವಿವಿಧ ರೋಗಗಳು ಬರುತ್ತಿವೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ವಾಯು ಮಾಲಿನ್ಯ, ಶಬ್ದ ಮಾಲಿನ್ಯ ಮಾತ್ರವಲ್ಲದೆ ಅತಿ ವೇಗದಲ್ಲಿ ಸಂಚರಿಸುವ ವಾಹನಗಳಿಂದ ಹಲವು ಸಲ ಅಪಘಾತಗಳೂ ಸಂಭವಿಸಿವೆ. ಚಿಕ್ಕ ಮಕ್ಕಳು, ವಯೋವೃದ್ಧರು, ಕಾಯಿಲೆ ಪೀಡಿತರು ಗ್ರಾಮದಲ್ಲಿ ಬದುಕುವುದು ಕಷ್ಟಕರವಾಗಿದೆ ಎಂದು ಲಾರಿ ಚಾಲಕರನ್ನು ತರಾಟೆಗೆ ತೆಗೆದುಕೊಂಡರು. ಸ್ಥಳಕ್ಕೆ ಧಾವಿಸಿದ ಇಟ್ಟಿಗೆ ಭಟ್ಟಿ ಮಾಲೀಕರ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು, ನಿಮ್ಮ ಅಕ್ರಮ ಮಣ್ಣು ಸಾಗಣೆಗೆ ಗ್ರಾಮದ ಹೊರಗೆ ಪ್ರತ್ಯೇಕ ರಸ್ತೆ ಮಾಡಿಕೊಳ್ಳಿ. ಇನ್ನೊಮ್ಮೆ ಗ್ರಾಮದೊಳಗೆ ಮಣ್ಣು ತುಂಬಿಕೊಂಡ ಲಾರಿಗಳು ಬಂದರೆ ಸುಮ್ಮನಿರುವುದಿಲ್ಲ ಎಂದು ತಾಕೀತು ಮಾಡಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಗ್ರಾಮದ ಕುಮಾರಸ್ವಾಮಿ, ಮಣ್ಣು ಸಾಗಾಣಿಕೆ ಲಾರಿಗಳಿಂದ ಆಗುವ ತೊಂದರೆ ತಪ್ಪಿಸುವಂತೆ ಗ್ರಾಪಂ, ಪೊಲೀಸ್ ಅಧಿಕಾರಿಗಳು ಸೇರಿದಂತೆ ತಹಶೀಲ್ದಾರರಿಗೂ ಹಲವು ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಮಣ್ಣು ದಂಧೆಕೋರರಿಂದ ಅ ಧಿಕಾರಿಗಳು ಭಕ್ಷೀಸು ಪಡೆಯುವ ಅನುಮಾನವಿದೆ ಎಂದರು.
ಮಣ್ಣು ಸಾಗಿಸುವವರು ಎಷ್ಟೇ ಪ್ರಭಾವಿಗಳಾಗಿದ್ದರೂ ಅಧಿ ಕಾರಿಗಳು ಮುಲಾಜಿಲ್ಲದೆ ಅವರ ಮೇಲೆ ಕ್ರಮ ಕೈಗೊಂಡು ಅಕ್ರಮ ಮಣ್ಣು ಸಾಗಣೆ ತಡೆಯಬೇಕು. ಇಲ್ಲದಿದ್ದರೆ ಹರಪನಹಳ್ಳಿ-ಹರಿಹರ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು. ಜಿಪಂ ಮಾಜಿ ಸದಸ್ಯ ಎ. ಮಹಾಂತೇಶ್, ಮುದೇಗೌಡ್ರು ಪರಮೇಶ್ವರಪ್ಪ, ಎ. ಭೀಮಪ್ಪ, ಕುಮಾರ್.ಕೆ.ಎನ್., ಜುಂಜಪ್ಪರ ನಿಂಗಪ್ಪ ಇದ್ದರು.