Advertisement

ಜನತಾ ಕರ್ಫ್ಯೂಗೆ ಉತ್ತಮ ಸ್ಪಂದನೆ

10:11 PM May 03, 2021 | Team Udayavani |

ದಾವಣಗೆರೆ: ಎಲ್ಲೆಡೆ ವ್ಯಾಪಕವಾಗಿ ಹರಡುತ್ತಿರುವ ಮಹಾಮಾರಿ ಕೊರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಜನತಾ ಕರ್ಫ್ಯೂಗೆ ಭಾನುವಾರ ನಡು ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆ ನಗರ ಮತ್ತು ಜಿಲ್ಲೆಯಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

Advertisement

ಜನತಾ ಕರ್ಫ್ಯೂ ನಡುವೆಯೂ ಅಗತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ 6 ರಿಂದ 10ರ ವರೆಗೆ ಕಾಲಾವಕಾಶ ನೀಡಿದ್ದು, ಜನರು ತಮಗೆ ಬೇಕಾದ ಅಗತ್ಯ ವಸ್ತುಗಳ ಖರೀದಿಯಲ್ಲಿ ತೊಡಗಿದ್ದರು. 10 ಗಂಟೆಯ ನಂತರವೂ ಕೆಲವು ಭಾಗದಲ್ಲಿ ಖರೀದಿ ಮುಂದುವರೆದಿತ್ತು. ಪೊಲೀಸರು, ಅಧಿಕಾರಿಗಳು ಅಂತಹ ಅಂಗಡಿಗಳ ಬಾಗಿಲು ಮುಚ್ಚಿಸಿದರು. ವಿನೋಬನಗರದ 2ನೇ ಮುಖ್ಯ ರಸ್ತೆಯಲ್ಲಿ ಮಾಂಸ ಖರೀದಿಗಾಗಿ ಜನರು ಬೆಳಗ್ಗೆಯಿಂದಲೇ ಮುಗಿ ಬಿದ್ದಿದ್ದರು. ಅಂಗಡಿ ಮುಚ್ಚುವ ಸಮಯ ಹತ್ತಿರವಾಗುತ್ತಿದ್ದಂತೆಯೇ ಜನಸಂದಣಿ ಹೆಚ್ಚಾಯಿತು. ರಸ್ತೆ ಬದಿಯಲ್ಲೇ ವಾಹನಗಳನ್ನು ನಿಲ್ಲಿಸಿದ್ದರ ಪರಿಣಾಮ ಸುಮಾರು ಹೊತ್ತು ಟ್ರಾಕ್‌ ಜಾಮ್‌ ಉಂಟಾಗಿತ್ತು. ಇತರೆ ಕೆಲಸಗಳಿಗೆ ತೆರಳಬೇಕಾದವರು ಟ್ರಾಕ್‌ ಜಾಮ್‌ನಿಂದ ತೊಂದರೆ ಅನುಭವಿಸುವಂತಾಯಿತು. ಪೊಲೀಸರು ಸ್ಥಳಕ್ಕೆ ಆಗಮಿಸಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.

ಕರ್ಫ್ಯೂ ನಡುವೆ ಇದೇ ಮೊದಲ ಬಾರಿ ಕಿರಾಣಿ ಅಂಗಡಿಗಳಿಗೆ ಮಧ್ಯಾಹ್ನ 12ರ ವರೆಗೆ ತೆರೆಯಲು ಅವಕಾಶ ನೀಡಲಾಗಿತ್ತು. ದಿನಸಿ ಖರೀದಿಗೆ 2 ಗಂಟೆ ಹೆಚ್ಚಿನ ಸಮಯ ನೀಡಿದ್ದರಿಂದ ಜನರು ಸಂತಸ ಪಟ್ಟರು. 10 ಗಂಟೆಯೊಳಗೆ ಬೇಕಾದ ಸಾಮಾನು ಖರೀದಿಸುವುದಕ್ಕೆ ಆಗುತ್ತಿರಲಿಲ್ಲ. ಎಲ್ಲ ಅಂಗಡಿಗಳಲ್ಲಿ ಬಹಳ ರಷ್‌ ಆಗಿರುತ್ತಿತ್ತು. ಬೇಕಾದ ವಸ್ತುಗಳು ಸಿಗುತ್ತಿರಲಿಲ್ಲ. 12 ಗಂಟೆ ತನಕ ಸಮಯ ನೀಡಿರುವುದರಿಂದ ಅನುಕೂಲವಾಗಿದೆ ಎಂದು ಅನೇಕರು ತಿಳಿಸಿದರು.

ತರಕಾರಿ ಅಂಗಡಿಗಳಿಗೂ ಸಹ ಮಧ್ಯಾಹ್ನ 12 ರವರೆಗೆ ಸಮಯ ಇದೆ ಎಂದು ಕೆಲವರು 10 ಗಂಟೆ ನಂತರವೂ ಬಾಗಿಲು ತೆರೆದಿದ್ದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು, ತರಕಾರಿ ಅಂಗಡಿಯವರಿಗೆ 12 ಗಂಟೆ ತನಕ ಸಮಯ ನೀಡಿಲ್ಲ. 10 ಗಂಟೆಗೆ ಬಾಗಿಲು ಹಾಕಬೇಕು. ಇಲ್ಲದಿದ್ದಲ್ಲಿ ದಂಡ ವಿಧಿಸಲಾಗುವುದು. ಮಾರುಕಟ್ಟೆಯಲ್ಲಿ ಜನಸಂದಣಿ ತಪ್ಪಿಸಲು ತಳ್ಳುವ ಗಾಡಿಗಳಲ್ಲಿ ಸಂಜೆ 6 ರವರೆಗೆ ತರಕಾರಿ ಮಾರಾಟಕ್ಕೆ ಅವಕಾಶ ನೀಡಲಾಗಿದೆಯೇ ಹೊರತು ತರಕಾರಿ ಅಂಗಡಿಗಳಿಗೆ ಅಲ್ಲ ಎಂದು ತಿಳಿಸಿದರು. ಆ ನಂತರ ತರಕಾರಿ ಅಂಗಡಿಕಾರರು ಬಾಗಿಲು ಮುಚ್ಚಿದರು. ಭಾನುವಾರ ಸಂತೆ ನಿರ್ಬಂಧಿಸಿದ್ದರ ಬಗ್ಗೆ ಮಾಹಿತಿ ಇಲ್ಲದವರು ಪ್ರತಿ ವಾರದಂತೆ ಸಂತೆಗೆ ಬಂದಿದ್ದರು. ಸಂತೆ ನಡೆಯುವುದಿಲ್ಲ ಎಂದು ವಿಷಯ ತಿಳಿದ ನಂತರ ಗ್ರಾಹಕರು, ವ್ಯಾಪಾರಸ್ಥರು ನಿರಾಸೆಯಿಂದ ತೆರಳಿದರು.

Advertisement

Udayavani is now on Telegram. Click here to join our channel and stay updated with the latest news.

Next