Advertisement

ಕಾರ್ಮಿಕ ವರ್ಗ ರಾಜಕೀಯವಾಗಿ ಬಲಗೊಳ್ಳಲಿ

05:49 PM May 02, 2021 | Team Udayavani |

ದಾವಣಗೆರೆ: ಕಾರ್ಮಿಕರಿದ್ದರೆ ಉತ್ಪಾದನೆ. ಉತ್ಪಾದನೆಯಿದ್ದರೆ ಮಾತ್ರ ದೇಶ ಸುಭಿಕ್ಷವಾಗಿ ಇರಲು ಸಾಧ್ಯ ಎಂದು ಎಐಟಿಯುಸಿ ರಾಜ್ಯ ಉಪಾಧ್ಯಕ್ಷ ಹಾಗೂ ಕಾರ್ಮಿಕ ಮುಖಂಡ ಎಚ್‌.ಜಿ. ಉಮೇಶ್‌ ಹೇಳಿದರು. ಆಂಜನೇಯ ಕಾಟನ್‌ ಮಿಲ್‌ನಲ್ಲಿ ಶನಿವಾರ ಆಂಜನೇಯ ಕಾಟನ್‌ ಮಿಲ್‌ ಎಂಪ್ಲಾಯಿಸ್‌ ಯೂನಿಯನ್‌ ವತಿಯಿಂದ ಸಂಘಟಿಸಿದ್ದ ಕಾರ್ಮಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

Advertisement

ಆಳುವ ಸರಕಾರಗಳು ಯಾವತ್ತಿಗೂ ಕಾರ್ಮಿಕ ವಿರೋಧಿ ಧೋರಣೆ ಅನುಸರಿಸಿಕೊಂಡು ಬರುತ್ತಿವೆ. ಕಾರ್ಮಿಕರಿಗೆ ನ್ಯಾಯವಾಗಿ ಸಿಗಬೇಕಾದ ಸೌಲಭ್ಯಗಳನ್ನೇ ಕೊಡುತ್ತಿಲ್ಲ. ಉದ್ಯೋಗ ಭದ್ರತೆ ನೀಡದೆ ಕೇವಲ ತಾತ್ಕಾಲಿಕವಾಗಿ ನೌಕರಿಗೆ ನೇಮಕ ಮಾಡಿಕೊಂಡು ಕಡಿಮೆ ವೇತನ ಸೌಲಭ್ಯಗಳನ್ನು ನೀಡಿ ಶೋಷಣೆ ಮಾಡುತ್ತಿವೆ. ಮಾಲೀಕ ವರ್ಗದ ಒತ್ತಡದಿಂದಾಗಿ ಕೇಂದ್ರ ಸರಕಾರ ಸತತವಾಗಿ ಕಾರ್ಮಿಕರ ಹಿತ ರಕ್ಷಿಸುವಂತಹ ಕಾನೂನುಗಳ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ದುಡಿಯುವ ವರ್ಗವನ್ನು ಕಷ್ಟಕ್ಕೆ ತಳ್ಳುತ್ತಿದೆ. ದುಡಿಯುವ ವರ್ಗದ ಮೇಲಿನ ಶೋಷಣೆ, ದಬ್ಟಾಳಿಕೆಯನ್ನು ನಿಲ್ಲಿಸಬೇಕಾದರೆ ಮುಂದಿನ ದಿನಗಳಲ್ಲಿ ಕಾರ್ಮಿಕ ವರ್ಗ ರಾಜಕೀಯವಾಗಿ ದೊಡ್ಡ ಶಕ್ತಿಯಾಗಿ ಹೊರಹೊಮ್ಮಲೇಬೇಕು ಎಂದರು.

ಕೊರೊನಾದಂತಹ ಸಂಕಷ್ಟದ ಸಂದರ್ಭದಲ್ಲಿಯೂ ಕಾರ್ಮಿಕ ಕಾಯ್ದೆಗಳಿಗೆ ಕೇಂದ್ರ ಸರಕಾರ ತಿದ್ದುಪಡಿ ತಂದಿದೆ ಎಂದರೆ ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ಧೋರಣೆ ಅತ್ಯಂತ ಸ್ಪಷ್ಟವಾಗಿದೆ. ಚುನಾವಣಾ ಸಂದರ್ಭದಲ್ಲಿ ಕಾರ್ಮಿಕ ವಿರೋಧಿ ಧೋರಣೆ ಹೊಂದಿರುವ ರಾಜಕೀಯ ಪಕ್ಷಗಳ ಪರವಾಗಿರದೇ ದುಡಿಯುವ ವರ್ಗದ ಪರವಾದ ರಾಜಕೀಯ ಶಕ್ತಿಯಾಗಿ ಹೊರಹೊಮ್ಮಿದಲ್ಲಿ ಮಾತ್ರ ಕಾರ್ಮಿಕರಿಗೆ ಉಳಿಗಾಲವಿದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಬ್ಯಾಂಕ್‌ ಕಾರ್ಮಿಕ ಮುಖಂಡ ಕೆ. ರಾಘವೇಂದ್ರ ನಾಯರಿ, ಆಂಜನೇಯ ಕಾಟನ್‌ ಮಿಲ್‌ ಎಂಪ್ಲಾಯಿಸ್‌ ಯೂನಿಯನ್‌ ಪದಾಧಿಕಾರಿಗಳಾದ ಮಹೇಶ್‌, ಎಸ್‌. ಜಯಪ್ಪ, ಹಾಲೇಶ್‌ ನಾಯ್ಕ, ಶಿವಕುಮಾರ್‌, ಅಜೀಜ್‌ ಅಹಮದ್‌, ಚಿತ್ರಪ್ಪ, ಲಕ್ಷ್ಮಮ್ಮ, ನಾಗಮ್ಮ, ಕುಸುಮಮ್ಮ, ಪಾರ್ವತಮ್ಮ, ಸುಜಾತ, ಮಂಜಮ್ಮ, ರಮೇಶ, ಸಂಜುಕುಮಾರ್‌ ಮತ್ತಿತರ ಕಾರ್ಮಿಕರು ಭಾಗವಹಿಸಿದ್ದರು. ಕೋವಿಡ್‌ ಕರ್ಫ್ಯೂ ಹಿನ್ನೆಲೆಯಲ್ಲಿ ಕಾರ್ಮಿಕ ದಿನಾಚರಣೆಯನ್ನು ಯಾವುದೇ ಮೆರವಣಿಗೆಗಳಿಲ್ಲದೆ ಸರಳವಾಗಿ ಆಚರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next