ಚನ್ನಗಿರಿ: ತಾಲೂಕಿನ ತಿಪ್ಪಗೊಂಡನಹಳ್ಳಿ ಮತ್ತು ರಾಜಗೊಂಡನಹಳ್ಳಿ ಗ್ರಾಪಂ ವ್ಯಾಪ್ತಿಯ ಮಾವಿನಹೊಳೆ ಗ್ರಾಮದಲ್ಲಿ ಮಾ.20 ರಂದು ಜಿಲ್ಲಾಡಳಿತದಿಂದ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಸರ್ಕಾರಿ ಸವಲತ್ತು ಹಾಗೂ ಕಂದಾಯ ಗ್ರಾಮ ಸೌಲಭ್ಯದಿಂದ ವಂಚಿತರಾದ ಮಾವಿನಹೊಳೆ ಮತ್ತು ಮರಳಹಟ್ಟಿ ಗ್ರಾಮಗಳ ಗ್ರಾಮಸ್ಥರು ತಮ್ಮ ಸಮಸ್ಯೆಗೆ ಜಿಲ್ಲಾಧಿಕಾರಿಗಳು ಪರಿಹಾರ ಸೂಚಿಸಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ. ರಾಜಗೊಂಡನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿರುವ ಮಾವಿನಹೊಳೆ ಗ್ರಾಮದಲ್ಲಿ ಸುಮಾರು 56ಕ್ಕೂ ಹೆಚ್ಚು ಕುಟುಂಬಗಳಿದ್ದು,350ಕ್ಕೂ ಅಧಿಕ ಜನರು ವಾಸಿಸುತ್ತಿದ್ದಾರೆ.
ಮರಳಹಟ್ಟಿ ಗ್ರಾಮದಲ್ಲಿ 50ಕ್ಕೂ ಹೆಚ್ಚು ಕುಟುಂಬಗಳಿದ್ದು, 400ಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದಾರೆ. ಇ-ಸ್ವತ್ತು ಸಿಗದ ಕಾರಣ ಗ್ರಾಮಸ್ಥರು ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಈ ಕುರಿತು ಸಾಕಷ್ಟು ಬಾರಿ ಅ ಧಿಕಾರಿಗಳು, ಜನಪ್ರತಿನಿಧಿ ಗಳ ಗಮನಕ್ಕೂ ತಂದರೂ ಪ್ರಯೋಜನವಾಗಿಲ್ಲ ಎಂಬುದು ಗ್ರಾಮಸ್ಥರ ಆರೋಪ.
ಐತಿಹಾಸಿಕ ಹಿನ್ನೆಲೆ ಹೊಂದಿರುವ ಮಾವಿನಹೊಳೆ ಗ್ರಾಮದಲ್ಲಿ ವೀರಭದ್ರೇಶ್ವರ ದೇವರು ನೆಲೆಸಿದ್ದಾನೆ. ರಾಜ್ಯದ ವಿವಿಧೆಡೆಗಳಿಂದ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಲಕ್ಷಾಂತರ ಜನರು ಬಂದು ಹೋಗುವ ಸ್ಥಳವಾಗಿದ್ದರೂ ಮೂಲ ಸೌಲಭ್ಯಗಳಿಲ್ಲ. ಸರ್ಕಾರಿ ಶಾಲೆ ಇದ್ದರೂ ಇಲ್ಲದಂತಾಗಿದೆ. ದುರಸ್ತಿಗೊಂಡಿರುವ ಸರ್ಕಾರಿ ಶಾಲೆಗೆ ಮಕ್ಕಳನ್ನು ಕಳುಹಿಸದ ಪೋಷಕರು ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಕಳುಹಿಸುತ್ತಿರುವುದು ವಿಪರ್ಯಾಸ.
ಮರಳಹಟ್ಟಿ ಮತ್ತು ಮಾವಿನಹೊಳೆ ಗ್ರಾಮಗಳಿಗೆ ಸ್ಮಶಾನಗಳಿದ್ದರೂ ಬಳಕೆಗೆ ಬಾರದಂತಾಗಿದೆ. ಅದ್ದರಿಂದ ಸ್ಮಶಾನಕ್ಕೆ ಯೋಗ್ಯವಾದ ಭೂಮಿಯನ್ನು ಮೀಸಲಿಡಬೇಕು ಎಂಬುದು ಗ್ರಾಮಸ್ಥರ ಬೇಡಿಕೆಯಾಗಿದೆ. ಮಾವಿನಹೊಳೆ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮೂರು ಸಾವಿರಕ್ಕೂ ಹೆಚ್ಚು ಜನಸಂಖ್ಯೆಯಿದೆ. ಅದರೆ ಆರೋಗ್ಯ ಕೇಂದ್ರವಿಲ್ಲದೆ ಆರೋಗ್ಯ ಸೇವೆಗಾಗಿ ಇಲ್ಲಿನ ಜನರು ಪರದಾಡುವಂತಾಗಿದೆ. ಆದ್ದರಿಂದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ತೆರೆಯಬೇಕು ಎಂಬುದು ಬಹು ಕಾಲದ ಬೇಡಿಕೆ. ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯದಲ್ಲಿ ಈ ಬೇಡಿಕೆಗಳೆಲ್ಲ ಈಡೇರಲಿವೆಯೇ ಎಂಬುದನ್ನು ಕಾದು ನೋಡಬೇಕಿದೆ.
ಶಶೀಂದ್ರ ಸಿ.ಎಸ್.