ನಾನು ಎಳೆಯ ಮಗುವಿನ ಹಾಗೆ ಮೇಲೇಳಲಾಗದೆ ಹಾಸಿಗೆಯ ಮೇಲೆಯೇ ವಾಂತಿ ಮಾಡಿಕೊಂಡು ನರಳುತ್ತಿದ್ದೆ. ಆ ಸ್ಥಿತಿಯಲ್ಲಿ ನನ್ನನ್ನು ನೋಡಿದವಳಿಗೆ ಅದೇನನ್ನಿಸಿತೋ ಗೊತ್ತಿಲ್ಲ… ಬಡಬಡನೆ ಎದ್ದವಳೇ ಕೂದಲನ್ನೆಲ್ಲಾ ಸೇರಿಸಿ ಹಿಂದಕ್ಕೆ ಗಂಟುಕಟ್ಟಿ, ನನ್ನ ಕುತ್ತಿಗೆಯ ಕೆಳಗೊಂದು ನನ್ನ ಸೊಂಟಕ್ಕೊಂದು ಕೈ ಹಾಕಿ ಕೂರಿಸಲೆತ್ನಿಸಿದಳು. ಪಾಪ, ಹನ್ನೆರಡು ವರ್ಷದ ಮಗುವಿಗೆ ಅದು ಸಾಧ್ಯಾನ?!
“ಸರ್ಜರಿ ಮಾಡಲೇಬೇಕು, ಯಾವ ಔಷಧದಿಂದಲೂ ಇದು ಗುಣ ಆಗೋಲ್ಲ’ ಅಂದುಬಿಟ್ಟರು ಡಾಕ್ಟ್ರು. ಆರೋಗ್ಯವನ್ನೇ ಐಶ್ವರ್ಯ ಅಂತ ನಂಬಿದ್ದವಳು ನಾನು. ಆ ಮಾತು ನನ್ನ ಕಿವಿಯನ್ನು ಬಿಸಿಮಾಡಿತ್ತು. ಮೊದಲಿನ ಗೆಲುವಿರಲಿಲ್ಲ. ಊಟ ಸೇರುತ್ತಿರಲಿಲ್ಲ. ದಿನಾಪೂರಾ ನಿದ್ರೆ, ಮಂಪರು. ಹತ್ತು ದಿನಗಳ ಆಸ್ಪತ್ರೆಯ ಅಜ್ಞಾತವಾಸದಿಂದ ಮನೆಗೆ ಬಂದ ನಾನು ಇನ್ನಷ್ಟು ನಿಶ್ಶಕ್ತಳಾಗಿಬಿಟ್ಟೆ. ಮನೆಯ ಒಂದೊಂದು ಹೆಜ್ಜೆಗೂ ಹತ್ತತ್ತು ಕೆಲಸಗಳು ಕಾಣಿಸತೊಡಗಿದವು. ಕಸ, ಮುಸುರೆ, ಬಟ್ಟೆ, ಯಪ್ಪಾ… ಆಗಲೇ ನನ್ನರಿವಿಗೆ ಬಂದಿದ್ದು ಒಂದು ಸಂಸಾರಕ್ಕೆ ಹೆಣ್ಣೊಬ್ಬಳ ಅವಶ್ಯಕತೆ ಎಷ್ಟಿದೆ ಅಂತ.
ಹೇಗೋ ಎರಡು ದಿನಗಳು ಕಳೆದವು. ಮೂರನೇ ದಿನ ರಾತ್ರಿ ಗಂಜಿ ಕುಡಿದು ಮಲಗಿದ್ದೆ. ಬೆಳಗ್ಗೆ ಏಳುವಾಗ ಬಲಗಾಲಲ್ಲೇನೋ ವಿಚಿತ್ರ ನೋವೆನ್ನಿಸಿ ಮಗ್ಗುಲು ತಿರುಗಿಸಲೆತ್ನಿಸುತ್ತಿದ್ದೆ. ಕಾಲನ್ನು ಅಲುಗಾಡಿಸಲೂ ಆಗದೆ ಚೀರಿಬಿಟ್ಟಿದ್ದೆ. ಜೊತೆಗೆ ವಾಂತಿ ಬೇರೆ. ದೇವರಾಣೆ, ಆ ಸ್ಥಿತಿ ನರಕವೇ. ಪಕ್ಕದಲ್ಲೇ ಮಲಗಿದ್ದ ಮಗಳು, “ಯಾಕಮ್ಮಾ ಹೀಗೆ ಕಿರುಚಿಕೊಂಡೆ?’ ಎನ್ನುತ್ತಾ ಗಾಬರಿಯಿಂದ ಥಟ್ಟನೆ ಎದ್ದು ಕುಳಿತಳು. ನಾನು ಎಳೆಯ ಮಗುವಿನ ಹಾಗೆ ಮೇಲೇಳಲಾಗದೆ ಹಾಸಿಗೆಯ ಮೇಲೆಯೇ ವಾಂತಿ ಮಾಡಿಕೊಂಡು ನರಳುತ್ತಿದ್ದೆ. ಆ ಸ್ಥಿತಿಯಲ್ಲಿ ನನ್ನನ್ನು ನೋಡಿದವಳಿಗೆ ಅದೇನನ್ನಿಸಿತೋ ಗೊತ್ತಿಲ್ಲ… ಬಡಬಡನೆ ಎದ್ದವಳೇ ಕೂದಲನ್ನೆಲ್ಲಾ ಸೇರಿಸಿ ಹಿಂದಕ್ಕೆ ಗಂಟುಕಟ್ಟಿ, ನನ್ನ ಕುತ್ತಿಗೆಯ ಕೆಳಗೊಂದು ನನ್ನ ಸೊಂಟಕ್ಕೊಂದು ಕೈ ಹಾಕಿ ಕೂರಿಸಲೆತ್ನಿಸಿದಳು. ಪಾಪ, ಹನ್ನೆರಡು ವರ್ಷದ ಮಗುವಿಗೆ ಅದು ಸಾಧ್ಯಾನ?! ಅವಳು ನನ್ನನ್ನು ಕೂರಿಸಲು ಇನ್ನಿಲ್ಲದಂತೆ ಒದ್ದಾಡಿದಳು. ಅವಳ ಆ ಹಠ ನನ್ನಲ್ಲಿ ಹೊಸ ಹುರುಪು ಮೂಡಿಸಿತ್ತು. ಇಬ್ಬರ ಶ್ರಮವೂ ಸೇರಿ ನಾನು ಕೊನೆಗೂ ಎದ್ದು ಕೂತೆ, ಚೂರೂ ಅಸಹಿಸಿಕೊಳ್ಳದೆ ಒಂದರ್ಧ ಗಂಟೆಯಲ್ಲಿ ದನ್ನೆಲ್ಲಾ ಕ್ಲೀನ್ ಮಾಡಿ, ದೊಡ್ಡ ಚೊಂಬಿನ ತುಂಬಾ ಬಿಸಿನೀರು ಕಾಯಿಸಿಕೊಂಡು ಬಂದು ಬಾಯಿ ಮುಕ್ಕಳಿಸುವಂತೆ ಹೇಳಿ ಪ್ಲಾಸ್ಟಿಕ್ ಬೌಲ್ ಒಂದನ್ನು ಮುಂದೆ ಹಿಡಿದಳು. ಆ ಕ್ಷಣ ನನ್ನ ಕಣ್ಣಂಚು ಒದ್ದೆಯಾಗಿ, ಗಂಟಲು ಒಣಗಿದಂತಾಗಿತ್ತು. ಬಾಯಿ ಮುಕ್ಕಳಿಸಿದ ಹತ್ತೇ ನಿಮಿಷಕ್ಕೆ ಬಿಸಿ ಕಾಫಿ ತಂದು ಕೈಗಿಟ್ಟಳು, ನನಗೋ ಅಚ್ಚರಿ… ಯಾವತ್ತೂ ಅಡುಗೆ ಮನೆಯನ್ನು ಇಣುಕಿ ನೋಡದ ಮಗು ಇವತ್ತು ಕಾಫಿ ಮಾಡಿ ಕೈಗಿಟ್ಟಿದೆ! ಬೆರಗುಗಣ್ಣಿಂದ ಬೆಪ್ಪಾಗಿ ಕುಳಿತೆ.
ಆಮೇಲೆ ಮುಂದಿನ ಮೂರು ತಿಂಗಳು ಮನೆಯ ಎಲ್ಲಾ ಜವಾಬ್ದಾರಿಗಳು ಅವಳ ಹೆಗಲೇರಿದವು. ಮನೆ ಕ್ಲೀನಿಂಗು, ಬಟ್ಟೆ ಐರನ್‌ಗೆ ಕೊಡೋದು, ಅದನ್ನು ತಂದು ಜೋಡಿಸಿಡೋದು, ತಂಗಿಗೆ ತಲೆ ಬಾಚೋದು, ಸ್ಕೂಲು, ಓದು, ಡ್ಯಾನ್ಸ್ ಕ್ಲಾಸ್, ಜೊತೆಗೆ ನನ್ನಂಥ ನತದೃಷ್ಟ ಅಮ್ಮನ ಆರೈಕೆ… ಒಟ್ಟಾರೆ ಅಮ್ಮನಾಗಿಬಿಟ್ಟಿದ್ದಳು ನನಗೂ, ಅವಳಪ್ಪನಿಗೂ, ತನ್ನ ಬೆನ್ನ ಹಿಂದೆ ಬಂದವಳಿಗೂ. ಈ ಕ್ಷಣಕ್ಕೂ ಮನೆಯ ಯಾವುದೇ ಕೆಲಸವೂ ಅವಳಿಲ್ಲದೆ ಸಂಪೂರ್ಣವಾಗುವುದೇ ಇಲ್ಲ. ಅವಳ ಪ್ರೀತಿಯ ಬದಲಾಗಿ ನಾನೇನನ್ನೇ ಕೊಟ್ಟರೂ ಅದು ನನ್ನ ಕರ್ತವ್ಯವೆನಿಕೊಂಡುಬಿಡುತ್ತದೆ. ಹಾಗಾಗಿ ಇದೇ ತಾಳ್ಮೆ, ದೊಡ್ಡ ಮನಸ್ಸನ್ನು ದೇವರು ಅವಳ ಬದುಕಿನುದ್ದಕ್ಕೂ ಕೊಟ್ಟು ಕಾಪಾಡಲಿ ಎಂದು ಹಾರೈಸಬಲ್ಲೆನಷ್ಟೇ.
– ಸತ್ಯ ಗಿರೀಶ್