Advertisement

ಮೊದಲ ತೊದಲ “ಋತು’ಗಾನ

10:20 AM Dec 19, 2019 | mahesh |

ಮಗಳು ದೊಡ್ಡವಳಾಗಿದ್ದಾಳೆ! ಹೆದರಿ ಕಂಗಾಲಾದ ಮಗುವಿಗೆ ಇರುವ ವಿಚಾರವನ್ನು ಬಿಡಿಸಿ ಹೇಳಿ, ಅರ್ಥ ಮಾಡಿಸುವುದು ತಾಯಿಯ ಜವಾಬ್ದಾರಿ. ಆದರೆ, ಅವಳಿನ್ನೂ ಚಿಕ್ಕವಳು. ಅದೆಷ್ಟು ಅರ್ಥವಾಗುತ್ತದೆ? ಏನೆಂದು ವಿವರಿಸಬಹುದು? ನೈಸರ್ಗಿಕ ಕ್ರಿಯೆ, ಎಚ್ಚರಿಕೆ, ನೈರ್ಮಲ್ಯ, ಜಾಗರೂಕತೆ, ಏನು ಗೊತ್ತಾಗುತ್ತದೆ! ಅದ್ಯಾವ ಪರಿಯಲ್ಲಿ ಒಂಬತ್ತು ವರ್ಷದ ಕೂಸಿಗೆ ವಿವರಿಸಬೇಕು?

Advertisement

ನಾಲ್ಕನೇ ತರಗತಿಯಲ್ಲಿ ಓದುತ್ತಿರುವ ಮಗಳು ಮೈ ನೆರೆದಿದ್ದಾಳೆಂದರೆ ಸುಮಾಳಿಗೆ ನಂಬುವುದಕ್ಕೇ ಆಗುತ್ತಿಲ್ಲ. ತಾನೇ ಕಣ್ಣಾರೆ ಕಾಣದೇ ಹೋಗಿದ್ದರೆ, ಅವಳು ಅದನ್ನು ನಂಬುತ್ತ¤ಲೂ ಇರಲಿಲ್ಲ. ಇನ್ನೂ ಚಿಕ್ಕ ಬಾಲೆ, ಇಷ್ಟು ಅವಸರವೇನಿತ್ತು ದೊಡ್ಡವಳಾಗಲು ಅಂತ ಸುಮಾಳಿಗೆ ಕಿರಿಕಿರಿ. ಹಾಗೆ ಕೇಳಿದರೆ ಮಗಳೇನು ಉತ್ತರ ಕೊಡಬಲ್ಲಳು? ಅಷ್ಟಕ್ಕೂ ತನಗೇನಾಗಿದೆ ಎನ್ನುವುದನ್ನು ಅಮ್ಮ ಹೇಳಬೇಕೇ ಹೊರತು, ಅವಳಿಗೆ ತಿಳಿಯದು. ಸಪ್ಪಗಿದ್ದ ಅಮ್ಮನ ಮುಖ ಕಂಡ ಮಗಳಿಗೆ ಅಳುಕು. ತನಗೇನೋ ಬಲು ದೊಡ್ಡ ಕಾಯಿಲೆಯೇ ಬಂದಿದೆ. ಬಹುಶಃ ನಾನು ಸತ್ತು ಹೋಗುತ್ತೇನೆ. ಅದಕ್ಕೇ ಅಮ್ಮ ಬೇಸರದಲ್ಲಿದ್ದಾಳೆ ಅಂತ ತಿಳಿದು, ಜೋರಾಗಿ ಅಳತೊಡಗಿದ್ದಳು.

ಬೆಳಗ್ಗೆ ಶಾಲೆಗೆ ಹೋಗುವ ಮುನ್ನವೇ ಹೊಟ್ಟೆಯಲ್ಲಿ ಸಂಕಟ, ಕೈಕಾಲು ಸೆಳೆತ ಶುರುವಾಗಿತ್ತು ಅವಳಿಗೆ. “ಅಮ್ಮಾ, ಸುಸ್ತಾಗ್ತಿದೆ’ ಅಂದಾಗ, ಕೆಲಸಕ್ಕೆ ಹೊರಡುವ ಗಡಿಬಿಡಿಯಲ್ಲಿದ್ದ ಸುಮಾ, “ತಗೋ, ಹಾಲು ಕುಡಿ. ಎಲ್ಲಾ ಸರಿಯಾಗುತ್ತದೆ’ ಎಂದು ಮಗಳ ಮಾತನ್ನು ಕಿವಿಗೇ ಹಾಕಿಕೊಂಡಿರಲಿಲ್ಲ. ಮತ್ತೆ ಸುಸ್ತು ಅಂದರೆ, ಶಾಲೆ ತಪ್ಪಿಸಲು ನೆಪ ಹೇಳಬೇಡ ಎಂದು ಅಮ್ಮ ಬೈಯುತ್ತಾಳೆಂದು ಮಗಳು, ಶಾಲೆಗೆ ಹೋದಳು. ಹನ್ನೊಂದು ಗಂಟೆ ಹೊತ್ತಿಗೆ ಶಾಲೆಯಿಂದ ಕರೆ ಬಂದಾಗ ಸುಮಾಳಿಗೆ ವಿಷಯ ಹೀಗಿರಬಹುದು ಎಂಬ ಕಲ್ಪನೆಯೂ ಇರಲಿಲ್ಲ. ಮಗಳಿಗೆ ಏನಾಯೊ¤à ಅಂತ ಶಾಲೆಗೆ ಧಾವಿಸಿದಾಗ ಆಕೆಗೆ ದೊಡ್ಡ ಶಾಕ್‌!

ಅಮ್ಮನಿಗಿಂತ, ಮಗಳಿಗಾದ ಆಘಾತ ದೊಡ್ಡದು. ಹೆದರಿ ಕಂಗಾಲಾದ ಮಗುವಿಗೆ ಇರುವ ವಿಚಾರವನ್ನು ಬಿಡಿಸಿ ಹೇಳಿ, ಅರ್ಥ ಮಾಡಿಸುವುದು ತಾಯಿಯ ಜವಾಬ್ದಾರಿ. ಆದರೆ, ಅವಳಿನ್ನೂ ಚಿಕ್ಕವಳು. ಅದೆಷ್ಟು ಅರ್ಥವಾಗುತ್ತದೆ? ಏನೆಂದು ವಿವರಿಸಬಹುದು? ನೈಸರ್ಗಿಕ ಕ್ರಿಯೆ, ಎಚ್ಚರಿಕೆ, ನೈರ್ಮಲ್ಯ, ಜಾಗರೂಕತೆ, ಏನು ಗೊತ್ತಾಗುತ್ತದೆ! ಅದ್ಯಾವ ಪರಿಯಲ್ಲಿ ಒಂಬತ್ತು ವರ್ಷದ ಕೂಸಿಗೆ ವಿವರಿಸಬೇಕು?

ಹತ್ತೇ ನಿಮಿಷದಲ್ಲಿ ಸುಮಾ, ಜವಾಬ್ದಾರಿಯುತ ತಾಯಿಯಾಗಿ ಬದಲಾದಳು. ಹೆಣ್ಣು ಮಕ್ಕಳು ತಿಂಗಳು ತಿಂಗಳೂ ಅನುಭವಿಸಲೇಬೇಕಾದ ಮಾಸಿಕ ಋತುಸ್ರಾವದ ಬಗ್ಗೆ ಮಗಳಿಗೆ ಅರ್ಥವಾಗುವ ರೀತಿಯಲ್ಲಿ ತಿಳಿಸಿ ಹೇಳಿದಳು. ಬೆಪ್ಪುಗಟ್ಟಿ ಅಮ್ಮನನ್ನೇ ಪಿಳಿಪಿಳಿ ನೋಡಿದ ಮಗಳು, ಕೊನೆಗೆ ಅಮ್ಮನನ್ನು ಅಪ್ಪಿ ಅಳತೊಡಗಿದಳು. ಅವಳನ್ನು ಮಡಿಲಿಗೆ ಎಳೆದುಕೊಂಡ ಸುಮಾ, ತಲೆ ಸವರುತ್ತಾ ನೆನಪಿಗೆ ಜಾರಿದಳು- ತಾನು ಮೊದಲ ಬಾರಿ ದೊಡ್ಡವಳಾದಾಗ ಹತ್ತನೆಯ ತರಗತಿಯಲ್ಲಿದ್ದೆ. ಗೆಳತಿಯರಲ್ಲಿ ಅದಾಗಲೇ ಆ ಅನುಭವವಾದವರು ಗುಸುಗುಸು ಎನ್ನುತ್ತ, ಗುಟ್ಟಾಗಿ ತಿಳಿಸಿ ಹೇಳಿದ್ದರಿಂದ ಮಗಳಷ್ಟು ಬೆಚ್ಚಿಬಿದ್ದಿರಲಿಲ್ಲ. ಮತ್ತೆ ತನಗೋ, ಎಲ್ಲವೂ ಅರ್ಥವಾಗುವಷ್ಟು ವಯಸ್ಸಾಗಿತ್ತು. ಈ ಚಿಕ್ಕ ಬಾಲೆಗೆ ಅದು ಹೇಗೆ ಅರಿವಾಗಬೇಕು?

Advertisement

ಸಣ್ಣದಾಗಿ ನೋಯುತ್ತಿದ್ದ ಹೊಟ್ಟೆ, ಸೆಳೆಯುವ ಕಾಲುಗಳು ಮಗಳನ್ನು ಹೆದರಿಸಿಬಿಟ್ಟಿದ್ದವು. ಅಳುವ ಮಗಳಿಗೆ ಸಮಾಧಾನಿಸುತ್ತ- “ಇದೇನೂ ಕಾಯಿಲೆ ಅಲ್ಲ. ಹೆಣ್ಣುಮಕ್ಕಳಿಗೆ ಹರೆಯಕ್ಕೆ ಕಾಲಿಡುವಾಗ ಹೀಗೆ ಆಗೋದು ಸಹಜ. ಪ್ರತಿ ಹುಡುಗಿಯೂ ತಿಂಗಳಿಗೊಮ್ಮೆ ಅನುಭವಿಸಬೇಕಾದ ಕ್ರಿಯೆ’ ಎಂದು ಅವಳ ಬೆನ್ನು ಸವರುತ್ತ, ಸಾಂತ್ವನಿಸುತ್ತ ತಿಳಿಸಿದ್ದಳು ಸುಮಾ. ಮಗಳನ್ನು ಮೀಯಿಸಿ, ಊಟ ಮಾಡಿಸಿ, ಮಲಗಿಸಿದಳು. ಹೆದರಿದ ಗುಬ್ಬಚ್ಚಿಯಂತಾದ ಪುಟ್ಟಿ, ಅಮ್ಮನ ಮಡಿಲಿನಲ್ಲಿ ನಿದ್ದೆಗೆ ಜಾರಿದಳು.

ಸಂಜೆ ಮನೆಗೆ ಬಂದ ಗಂಡನ ಬಳಿ ಸುಮಾ ಪಿಸುಗುಡುತ್ತ ವಿಷಯ ತಿಳಿಸಿದಾಗ, ಅವಳಿಗಾದಷ್ಟು ಆಘಾತ ಅವನಿಗಾಗಲಿಲ್ಲ. “ಜೋಪಾನವಾಗಿ ನೋಡಿಕೋ. ಹೀಗಾಗಿದೆ ಅಂತ ಯಾರಿಗೂ ಹೇಳಬೇಡ. ರಜಾ ಹಾಕಿ, ನಾಲ್ಕು ದಿನ ಆರೈಕೆ ಮಾಡು’ ಅಂದಿದ್ದ. ರಾತ್ರಿ ಪೂರಾ ಮಗಳನ್ನು ತನ್ನ ಬಳಿಯೇ ಮಲಗಿಸಿಕೊಂಡು, ಹಗುರವಾಗಿ ತಟ್ಟುತ್ತ ಮನಸ್ಸಿಗೆ ಧೈರ್ಯ ತುಂಬಿದ ಸುಮಾ ಮಾತ್ರ ಬೆಳಕು ಹರಿಯುವ ತನಕವೂ ರೆಪ್ಪೆ ಮುಚ್ಚಲಿಲ್ಲ.

ಅವಧಿಗೂ ಮುನ್ನವೇ ಮೈ ನೆರೆಯುವುದು, ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಕಂಡು ಬರುತ್ತಿದೆ. ಹೀಗೆ, ಹತ್ತು ವರ್ಷಕ್ಕೂ ಮುಂಚೆಯೇ ಪ್ರೌಢಾವಸ್ಥೆಯ ಲಕ್ಷಣಗಳು ಕಾಣಿಸಿಕೊಳ್ಳುವುದಕ್ಕೆ, ವೈದ್ಯಕೀಯ ಭಾಷೆಯಲ್ಲಿ ಅಕಾಲ ಪ್ರೌಢಾವಸ್ಥೆ (Precocious puberty) ಎನ್ನುತ್ತಾರೆ. ಈ ರೀತಿ ಆಗಲು ಮೆದುಳಿನಲ್ಲಿರುವ ಪಿಟ್ಯುಟರಿ ಗ್ರಂಥಿ ಕಾರಣ. ಈ ಗ್ರಂಥಿ, ಹೆಣ್ಣುಮಕ್ಕಳ ಅಂಡಾಶಯದ ಮೇಲೆ ಪ್ರಭಾವ ಬೀರಿ, ಈಸ್ಟ್ರೋಜೆನ್‌ ಹಾರ್ಮೋನನ್ನು (Estrogen) ಅತಿಯಾಗಿ ಸ್ರವಿಸುವಂತೆ ಮಾಡುತ್ತದೆ ಎನ್ನುತ್ತಾರೆ ವೈದ್ಯರು. ಅಷ್ಟೇ ಅಲ್ಲ, ಇಂದಿನ “ಫಾಸ್ಟ್‌ ಫ‌ುಡ್‌’ ಆಹಾರಕ್ರಮವೂ ಈ ರೀತಿ ಆಗುತ್ತಿರುವುದಕ್ಕೆ ಕಾರಣವಾಗಿರಬಹುದು ಎಂಬುದು ಅವರ ಅಭಿಪ್ರಾಯ.

ಆತಂಕಕಾರಿ ಆಹಾರಕ್ರಮ
ಇಂದಿನ ಅಮ್ಮಂದಿರು ಅಗತ್ಯಕ್ಕಿಂತ ಹೆಚ್ಚಾಗಿ ಫಾಸ್ಟ್‌ಫ‌ುಡ್‌ಗಳ ಮೇಲೆ ಅವಲಂಬಿತರಾಗಿದ್ದಾರೆ. ಇದಕ್ಕೆ ಸೋಮಾರಿತನ ಅನ್ನಬೇಕೋ, ಕೆಲಸದ ಒತ್ತಡ ಅನ್ನಬೇಕೋ ಗೊತ್ತಿಲ್ಲ. ಮಾಡಲು ಸುಲಭ ಅಂತ ಮ್ಯಾಗಿ ಮಾಡುವುದು, ಬೇಕರಿ ತಿಂಡಿಗಳನ್ನು/ ಚೈನೀಸ್‌ ಫ‌ುಡ್‌ಗಳನ್ನು ತಿನ್ನಿಸುವುದು, ಸಣ್ಣ ಮಕ್ಕಳ ಸ್ನ್ಯಾಕ್ಸ್‌ ಡಬ್ಬಿಯಲ್ಲಿ ಆರೋಗ್ಯಕರ ತಿನಿಸುಗಳನ್ನು (ಹಣ್ಣು, ಡ್ರೈಫ್ರುಟ್ಸ್‌, ತರಕಾರಿ, ಮನೆಯಲ್ಲಿ ಮಾಡಿದ ತಿಂಡಿಗಳು) ಹಾಕುವ ಬದಲು, ಕುರುಕುರೆ, ಚಿಪ್ಸ್‌, ಪಪ್ಸ್‌, ಕೇಕ್‌, ಚಕ್ಕುಲಿ ಮುರುಕು ತುರುಕುವುದು… ಇಂಥ ಆಹಾರಕ್ರಮದಿಂದ ಮಕ್ಕಳ ದೇಹದಲ್ಲಿ ಬದಲಾವಣೆಗಳು ಆಗುತ್ತಿವೆಯಂತೆ.

ಅಮ್ಮನ ಜವಾಬ್ದಾರಿ ಏನು?
ಇಂಥ ಸಂದರ್ಭದಲ್ಲಿ ಅಮ್ಮ ಒತ್ತಡಕ್ಕೆ, ಮುಜುಗರಕ್ಕೆ ಒಳಗಾಗುತ್ತಾಳೆ. ಯಾಕೆಂದರೆ, “ಮೈ ನೆರೆಯುವುದು’ ಎಂಬುದು, ಈಗಲೂ ಸಮಾಜದಲ್ಲಿ ಚರ್ಚೆಗೆ ಒಳಗಾಗುವ ವಿಷಯ. ಅಂಥ ಸಂದರ್ಭದಲ್ಲಿ “ಅಯ್ಯೋ, ಇದೇನಾಗಿ ಹೋಯ್ತು’ ಅಂತ ಗೋಳಾಡಿ, ಮಗಳಲ್ಲೂ ತಪ್ಪಿತಸ್ಥ ಭಾವನೆ ಮೂಡಿಸಬಾರದು. ಅವಳಿಗೆ ತಿಳಿ ಹೇಳುವ ರೀತಿಯಲ್ಲಿ ಪರಿಸ್ಥಿತಿಯನ್ನು ವಿವರಿಸಬೇಕು. (ಸ್ತ್ರೀ ವೈದ್ಯರ ಬಳಿ ಕರೆದೊಯ್ದು, ಹೆಚ್ಚಿನ ಅರಿವು ಮೂಡಿಸಬಹುದು. ಅವರು ಹೇಳುವ ಸಲಹೆ-ಸೂಚನೆಗಳನ್ನು ಪಾಲಿಸಬಹುದು) ಪ್ಯಾಡ್‌ ಧರಿಸುವುದು ಹೇಗೆ, ಶಾರೀರಿಕ ನೈರ್ಮಲ್ಯ ಕಾಪಾಡುವ ಬಗೆ, ಮುಟ್ಟಿನ ದಿನಗಳಲ್ಲಿ ಕೈಗೊಳ್ಳಬೇಕಾದ ಜಾಗರೂಕತೆಗಳೇನು ಎಂದು ಪ್ರಾಯೋಗಿಕವಾಗಿ ವಿವರಿಸಿ ಹೇಳಬೇಕು. ಆ ದಿನಗಳಲ್ಲಿ ಆಗುವ ಸಂಕಟವನ್ನು ಪುಟ್ಟ ಮಗು ತಡೆದುಕೊಳ್ಳುವುದು ಕಷ್ಟ. ಆಗ ಮಗಳ ಮೇಲೆ ಜಾಸ್ತಿ ಒತ್ತಡ ಹೇರದೆ, ವಿಶ್ರಾಂತಿ ತೆಗೆದುಕೊಳ್ಳಲು ಅವಕಾಶ ಮಾಡಿಕೊಡಬೇಕು.

ಪ್ಯಾಡ್‌ ಕೊಡಿಸಿ
ಈಗಲೂ ಕೆಲವು ಮಹಿಳೆಯರು ಮುಟ್ಟಿನ ದಿನಗಳಲ್ಲಿ ಬಟ್ಟೆಯನ್ನೇ ಬಳಸುತ್ತಿದ್ದಾರೆ. ಪ್ಯಾಡ್‌ಗಿಂತ, ಬಟ್ಟೆಯೇ ಹೆಚ್ಚು ಸುರಕ್ಷಿತ ಎಂಬ ಮನೋಭಾವ ಅವರದ್ದು. ಆದರೆ, ಮಗಳು ದೊಡ್ಡವಳಾದಾಗ ಅವಳಿಗೆ ಪ್ಯಾಡ್‌ / ಮೆನ್‌ಸ್ಟ್ರೆಯಲ್‌ ಕಪ್‌ ಅನ್ನೇ ಕೊಡಿಸಿ. ಸಣ್ಣ ವಯಸ್ಸಿನ ಅವಳು ತಾನಾಗಿಯೇ ಹೋಗಿ ಪ್ಯಾಡ್‌ ಕೇಳಲಾರಳು. ಹಾಗಾಗಿ, ಅವಳಿಗೆ ನೀವೇ ಪ್ಯಾಡ್‌ ಖರೀದಿಸಿ ಕೊಡಿ. ಅವಳ ಶಾಲಾ ಬ್ಯಾಗ್‌ನಲ್ಲಿ ಯಾವಾಗಲೂ ಒಂದು ಪ್ಯಾಡ್‌ ಇರುವಂತೆ ನೋಡಿಕೊಳ್ಳಿ.

ಅವಳಷ್ಟಕ್ಕೇ ಇರಲು ಬಿಡಿ
ಕೆಲವು ಕುಟುಂಬಗಳಲ್ಲಿ, ಮಹಿಳೆಯರು ಮುಟ್ಟಿನ ದಿನಗಳಲ್ಲಿ ಅನೇಕ ರೀತಿ-ರಿವಾಜುಗಳನ್ನು ಪಾಲಿಸಬೇಕು. ಅದು ಕೆಲವೊಮ್ಮೆ ದೊಡ್ಡವರಿಗೇ ಹಿಂಸೆ ಅನ್ನಿಸಿಬಿಡುತ್ತದೆ. ಮನೆಯ ಒಳಗೆ ಬರುವಂತಿಲ್ಲ, ಯಾರನ್ನೂ ಮುಟ್ಟುವಂತಿಲ್ಲ, ಮೂಲೆಯಲ್ಲಿ ಮಲಗಬೇಕು, ಇಂಥವೆಲ್ಲ ಅವರ ಮೇಲೆ ಅನಗತ್ಯ ಒತ್ತಡ ಹೇರುತ್ತವೆ. ಮುಟ್ಟಾಗುವುದು, ಊಟ- ನಿದ್ರೆಯಷ್ಟೇ ಸಹಜ ಎಂಬಂಥ ಪ್ರಕ್ರಿಯೆ. ಅದನ್ನು ಮೊದಲು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಮುಟ್ಟು ಎಂಬ ನೆಪದಲ್ಲಿ ಅರ್ಥವಿಲ್ಲದ ಆಚರಣೆಗಳನ್ನು ಕೈಬಿಡಬೇಕು. ಹೀಗೆ ಮಾಡದೇ ಹೋದರೆ, ಮುಟ್ಟಿನ ಕುರಿತು ಮಕ್ಕಳ ಮನಸ್ಸಿನಲ್ಲಿ ಅನಗತ್ಯ ಹೆದರಿಕೆ, ಹೇಸಿಗೆ ಮೂಡಬಹುದು.

ದೈಹಿಕವಾಗಿ ದೊಡ್ಡವಳಾದಳು ಎಂಬ ಮಾತ್ರಕ್ಕೆ, ಅವಳು ದೊಡ್ಡವರಂತೆ ವರ್ತಿಸಬೇಕಿಲ್ಲ. ಅವಳಲ್ಲಿ ಇನ್ನೂ ಮಗುವಿನ ಮುಗ್ಧತೆ ಹಾಗೇ ಇರುತ್ತದೆ. ಅವಳಿಗೆ ಹಾಗೇ ಇರಲು ಬಿಡಿ. ನೀನೀಗ ದೊಡ್ಡವಳಾಗಿದ್ದೀಯ, ಸಣ್ಣ ಮಕ್ಕಳ ಥರ ಆಡ್ಬೇಡ ಅಂತ ಅವಳ ಚಟುವಟಿಕೆಗಳ ಮೇಲೆ ನಿಯಂತ್ರಣ ಹೇರಬೇಡಿ. ಆದರೆ, ಹೆಣ್ಣಾಗಿ ತನ್ನನ್ನು ತಾನು ಹೇಗೆ ರಕ್ಷಿಸಿಕೊಳ್ಳಬೇಕು ಎಂಬುದನ್ನು ಕಲಿಸಿ. ಗಂಡಿಗಿಂತ ತಾನು ಹೇಗೆ ಭಿನ್ನ, ಗುಡ್‌ ಟಚ್‌- ಬ್ಯಾಡ್‌ ಟಚ್‌ ಅಂದರೇನು, ಎಂಬುದರ ಕುರಿತು ನಿಧಾನಕ್ಕೆ ಆಕೆಯಲ್ಲಿ ಅರಿವು ಮೂಡಿಸಿ.

ಮಗಳು ದೊಡ್ಡವಳಾದಾಗ
– ಇದು ಆರೋಗ್ಯ ಸಮಸ್ಯೆ ಅಲ್ಲ, ನೈಸರ್ಗಿಕ ಕ್ರಿಯೆ ಅಂತ ಅವಳಿಗೆ ಧೈರ್ಯ ಹೇಳಿ.
– ಪ್ರತಿ ತಿಂಗಳೂ ಈ ರೀತಿ ಆದಾಗ, ಏನೇನು ಮಾಡಬೇಕು ಅಂತ ತಿಳಿಸಿ.
– ಆ ಸಮಯದಲ್ಲಿ ಆಗುವ ದೈಹಿಕ, ಮಾನಸಿಕ ಯಾತನೆಯಲ್ಲಿ ಅವಳಿಗೆ ಜೊತೆಯಾಗಿ.
-ಆ ದಿನಗಳಲ್ಲಿ ಶಾಲೆಗೆ ಹೋಗಲಾಗದಿದ್ದರೆ, ಬೈದು-ಗದರಿಸಬೇಡಿ.
-ಆಗಾಗ ಸ್ತ್ರೀ ವೈದ್ಯರನ್ನು ಭೇಟಿಯಾಗಿ, ಸಲಹೆ ಪಡೆಯಿರಿ.
-ಮನೆಯಲ್ಲಿ, ಶಾಲಾ ಬ್ಯಾಗ್‌ನಲ್ಲಿ ಯಾವಾಗಲೂ ಪ್ಯಾಡ್‌ ಇರಲಿ.
-ಅವಳ ಆಟ-ಪಾಠ, ಚಟುವಟಿಕೆಗಳ ಮೇಲೆ ನಿಯಂತ್ರಣ ಹೇರಬೇಡಿ.

– ಕೃಷ್ಣವೇಣಿ ಕಿದೂರು

Advertisement

Udayavani is now on Telegram. Click here to join our channel and stay updated with the latest news.

Next