Advertisement
ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆಯಲ್ಲಿ ಅನುಕಂಪದ ಆಧಾರದ ಮೇಲೆ ಹುದ್ದೆ ಕೋರಿ ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡದ ಪ್ರಿಯಾಂಕಾ ಹಲಮನಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾ| ಕೃಷ್ಣ ಎಸ್. ದೀಕ್ಷಿತ್ ಹಾಗೂ ನ್ಯಾ| ವಿಜಯಕುಮಾರ್ ಎ. ಪಾಟೀಲ ಅವರಿದ್ದ ವಿಭಾಗೀಯ ಪೀಠ ವಜಾಗೊಳಿಸಿದೆ. ಶಾಸನವನ್ನು ರಚಿಸುವಾಗ ಕುಟುಂಬದ ವ್ಯಾಖ್ಯಾನದಲ್ಲಿ ಉದ್ಯೋಗಿಯ ನಿರ್ದಿಷ್ಟ ಸಂಬಂಧಿಗಳನ್ನು ಅದರ ವ್ಯಾಪ್ತಿಗೆ ಸೇರ್ಪಡೆ ಮಾಡಿದ್ದಾರೆ. ಆದರಲ್ಲಿ ಸೊಸೆಯ ಉಲ್ಲೇಖವಿಲ್ಲ. ಆ ಶಾಸನದ ಅರ್ಥವನ್ನು ವಿಸ್ತರಣೆ ಮಾಡುವುದು ನ್ಯಾಯಾಂಗದ ಕಾರ್ಯವಲ್ಲ ಎಂದಿತು.
ರಾಜ್ಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ಗೌರಮ್ಮ ಆರ್. ಹಲಮಣಿ ಅವರು ರಿಜಿಸ್ಟ್ರಾರ್ ಆಗಿದ್ದರು. ಅವರು ಮತ್ತು ಅವರ ಪುತ್ರ ಪ್ರವೀಣ್ ಕೊರೊನಾ ಸೋಂಕಿಗೆ ತುತ್ತಾಗಿ ಮೃತಪಟ್ಟಿದ್ದರು. ಪ್ರವೀಣ್ ಅವರನ್ನು ಪ್ರಿಯಾಂಕಾ ಮದುವೆಯಾಗಿದ್ದರು. ಇವರು ಸಿವಿಲ್ ಕೋರ್ಟಿಗೆ 2022ರಲ್ಲಿ ಅರ್ಜಿ ಸಲ್ಲಿಸಿದ್ದರು. ಗೌರಮ್ಮ ಅವರ ಸಾವಿನ ಹಿನ್ನೆಲೆಯಲ್ಲಿ ಅನುಕಂಪದ ಉದ್ಯೋಗ ಹಕ್ಕನ್ನು ಪ್ರಿಯಾಂಕಾ ಕ್ಲೇಮು ಮಾಡಬೇಕು ಎಂದು ಒಪ್ಪಂದವಾಗಿತ್ತು. ಪ್ರಿಯಾಂಕಾ ಅವರು ಉದ್ಯೋಗ ಕೋರಿ ಸರಕಾರಕ್ಕೆ 2021ರ ಜೂ. 22ರಂದು ಅರ್ಜಿ ಸಲ್ಲಿಸಿದ್ದರು. ಆ ಮನವಿಯನ್ನು 2023ರ ಆ. 10ರಂದು ಅನುಕಂಪದ ಆಧಾರದ ಮೇಲೆ ಸೊಸೆಗೆ ಉದ್ಯೋಗ ಕಲ್ಪಿಸಲು ಅವಕಾಶವಿಲ್ಲ ಎಂದು ಹೇಳಿ ಸರಕಾರ ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಪ್ರಿಯಾಂಕಾ ಸಲ್ಲಿಸಿದ್ದ ಅರ್ಜಿಯನ್ನು ಕೆಎಟಿ ವಜಾಗೊಳಿಸಿತ್ತು. ಕೆಇಟಿ ತೀರ್ಪನ್ನು ಪ್ರಶ್ನಿಸಿ ಪ್ರಿಯಾಂಕಾ ಹೈಕೋರ್ಟ್ ಮೊರೆ ಹೋಗಿದ್ದರು.