ಅಹ್ಮದಾಬಾದ್: “ಹಲವು ಸವಾಲುಗಳ ನಡುವೆಯೂ ಭಾರತವು ವಿವಿಧ ಕ್ಷೇತ್ರಗಳಲ್ಲಿ ಶ್ಲಾಘನೀಯ ಸಾಧನೆ ಮಾಡಿದೆ. ಈಗ ದೇಶವು ಸ್ವಾವಲಂಬಿಯಾಗುವತ್ತ ಹೆಜ್ಜೆಯಿಟ್ಟಿದೆ. ಭಾರತ ಕೇಂದ್ರಿತ ಶಿಕ್ಷಣ ನೀತಿಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವ ಮೂಲಕ ದೇಶವನ್ನು ಜ್ಞಾನ ಸಮೃದ್ಧ ಸಮಾಜವನ್ನಾಗಿ ರೂಪಿಸಬೇಕು ಮತ್ತು ಭಾರತವು ವಿಶ್ವಗುರುವಾಗಬೇಕು’ ಎಂದು ಆರೆಸ್ಸೆಸ್ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಕರೆ ನೀಡಿದ್ದಾರೆ.
ಗುಜರಾತ್‌ನ ಕರ್ಣವತಿಯಲ್ಲಿ ನಡೆಯುತ್ತಿರುವ ಅಖಿಲ ಭಾರತೀಯ ಪ್ರತಿನಿಧಿ ಸಭಾ ಬೈಠಕ್‌ನಲ್ಲಿ ಅವರು ಮಾತನಾಡಿದ್ದಾರೆ. ಶುಕ್ರವಾರ ಆರಂಭವಾಗಿರುವ ಸಭೆಯು ರವಿವಾರದವರೆಗೂ ನಡೆಯಲಿದೆ.
ಶನಿವಾರ ಮಾತನಾಡಿರುವ ಹೊಸಬಾಳೆ ಅವರು, “ಭಾರತದ ಮೇಲೆ ಆಕ್ರಮಣ ಮಾಡಿದ್ದ ಬ್ರಿಟಿಷರಿಗೆ ವಾಣಿಜ್ಯಿಕ ಉದ್ದೇಶದ ಜತೆಗೆ ದೇಶವನ್ನು ರಾಜಕೀಯ, ಸಾಮ್ರಾಜ್ಯಶಾಹಿ ಮತ್ತು ಧಾರ್ಮಿಕ ಗುಲಾಮಗಿರಿಗೆ ತಳ್ಳಬೇಕೆಂಬ ನಿರ್ದಿಷ್ಟ ಗುರಿಯೂ ಇತ್ತು. ಭಾರತದ ಜನರಲ್ಲಿದ್ದ ಒಗ್ಗಟ್ಟನ್ನು ಒಡೆದುಹಾಕಿ, ಭಾರತೀಯರಿಗೆ ತಾಯ್ನಾಡಿನ ಮೇಲಿದ್ದ ಭಾವನಾತ್ಮಕ ಮತ್ತು ಆಧ್ಯಾತ್ಮಿಕ ನಂಟನ್ನು ದುರ್ಬಲಗೊಳಿಸುವ ಸಂಚನ್ನೂ ಬ್ರಿಟಿಷರು ಹೂಡಿದ್ದರು. ನಮ್ಮ ದೇಶೀಯ ಆರ್ಥಿಕ ಮತ್ತು ರಾಜಕೀಯ ವ್ಯವಸ್ಥೆಯನ್ನು, ವಿಶ್ವಾಸ ಹಾಗೂ ಶೈಕ್ಷಣಿಕ ವ್ಯವಸ್ಥೆಯನ್ನೂ ಧ್ವಂಸಗೊಳಿಸಿದರು. ಈಗ ಭಾರತೀಯ ಸಮಾಜವನ್ನು “ಒಂದು ದೇಶ’ವಾಗಿ ಒಗ್ಗೂಡಿಸಲು ಮತ್ತು ಭವಿಷ್ಯದ ಬಿಕ್ಕಟ್ಟಿನಿಂದ ದೇಶವನ್ನು ರಕ್ಷಿಸಲು ನಾವು ಅತ್ಯಂತ ಬದ್ಧತೆಯಿಂದ ಬದುಕಿನ ಕುರಿತ ಸ್ವಯಂ ಆಧರಿತ ದೂರದೃಷ್ಟಿತ್ವವನ್ನು ಮರುಸ್ಥಾಪಿಸಬೇಕಿದೆ. ಈ ನಿಟ್ಟಿನಲ್ಲಿ ಹೆಜ್ಜೆಯಿಡಲು ಸ್ವಾತಂತ್ರ್ಯದ ಅಮೃತಮಹೋತ್ಸವವು ಸೂಕ್ತ ಸಮಯವಾಗಿದೆ’ ಎಂದಿದ್ದಾರೆ.