ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ, ದತ್ತಪೀಠ ವಿಚಾರದಲ್ಲಿ ಸುಪ್ರೀಂಕೋರ್ಟ್ ತೀರ್ಪು ಕಡೆಗಣಿಸಿರುವ ರಾಜ್ಯ ಸರ್ಕಾರವನ್ನು ವಜಾ ಮಾಡುವಂತೆ ರಾಜ್ಯಪಾಲರಿಗೆ ಮನವಿ ಮಾಡುವುದಾಗಿ ಹೇಳಿದ್ದಾರೆ. ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದತ್ತಪೀಠ ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಎಲ್ಲ ಹಂತದಲ್ಲೂ ಹಿಂದೂಗಳ ಪರ ತೀರ್ಪು ಬಂದಿದೆ. ಆದರೆ, ರಾಜ್ಯ ಸರ್ಕಾರಕ್ಕೆ ವಿವಾದ ಬಗೆಹರಿಸುವ ಇಚ್ಛಾಶಕ್ತಿಯಿಲ್ಲ.
Advertisement
ಮುಜರಾಯಿ ಇಲಾಖೆ ವರದಿ ಆಧರಿಸಿ ದತ್ತಪೀಠದಲ್ಲಿ ಹಿಂದೂ ಅರ್ಚಕರ ನೇಮಕವಾಗಬೇಕಾಗಿತ್ತು. ಅಲ್ಲದೆ, ಸುಪ್ರೀಂಕೋರ್ಟ್ ಎಂಟು ವಾರಗಳಲ್ಲಿ ವಿವಾದ ಬಗೆಹರಿಸುವಂತೆ ಸೂಚಿಸಿದ್ದರೂ ಅದನ್ನು ಅನುಷ್ಠಾನಕ್ಕೆ ತಂದಿಲ್ಲ ಎಂದು ದೂರಿದರು. ಈ ಮಧ್ಯೆ ಸುಪ್ರೀಂಕೋರ್ಟ್ ತೀರ್ಪಿಗೆ ವ್ಯತಿರಿಕ್ತವಾಗಿ ವಿವಾದ ಬಗೆಹರಿಸಲು ನಾಸ್ತಿಕರು ಮತ್ತು ವೈಚಾರಿಕವಾಗಿ ಹಿಂದುತ್ವ ವಿರೋಧಿಸುವ ಮೂವರು ಸದಸ್ಯರ ಸಮಿತಿ ನೇಮಕ ಮಾಡಿದೆ. ಹೀಗಾಗಿ ಈ ಸಮಿತಿಯನ್ನು ಒಪ್ಪಲು ಸಾಧ್ಯವಿಲ್ಲ. ದತ್ತ ಪೀಠ ವಿವಾದದಲ್ಲಿ 1978ರಿಂದಲೂ ಹಿಂದುಗಳ ಪರವಾಗಿಯೇ ತೀರ್ಪುಗಳು ಬಂದಿರುವಾಗ ಮತ್ತೆ ಸಮಿತಿ ರಚಿಸುವ ಉದ್ದೇಶವೇನು ಎಂದು ಪ್ರಶ್ನಿಸಿದರು.