ಹಾಗಂತಲೇ ಮಾತು ಶುರು ಮಾಡಿದರು ದತ್ತಣ್ಣ. “ಶಾರದಾ ಪ್ರಸಾದ್ ಅವರ ಹೆಸರು ಕೇಳಿರಬಹುದು. ಮೂರು ಪ್ರಧಾನ ಮಂತ್ರಿಗಳಿಗೆ ಅವರು ಮೀಡಿಯಾ ಅಡ್ವೆ„ಸರ್ ಆಗಿದ್ದವರು ಅವರು. ಅವರೆಷ್ಟು ಬಿಝಿ ಇದ್ದಿರಬಹುದು ಯೋಚನೆ ಮಾಡು? ಒಂದೇ ಒಂದು ದಿನಕ್ಕೂ ಅವರು ತಾನು ಬಿಝಿ ಅಂತ ಹೇಳಿಕೊಳ್ಳಲಿಲ್ಲ. ಆಗಿನ್ನೂ ನಾನು ಹುಡುಗ. ಡೆಲ್ಲಿಯಲ್ಲಿದ್ದೆ. ಅವರ ಮನೆಗೆ ಆಗಾಗ ಹೋಗ್ತಿದ್ದೆ. ಆ ಸಂದರ್ಭಗಳಲ್ಲಿ ಏನಾದರೂ ಕೆಲಸ ಬಂದರೆ, “ನೀನು ಊಟ ಮಾಡ್ತಿರು’ ಅಂತ ಹೇಳಿ, ಕೆಲಸ ಮಾಡಿ ಬಂದು ಊಟಕ್ಕೆ ಕೂರೋರು. ಎಷ್ಟು ಕೆಲಸ ಇರಬಹುದು ಅವರಿಗೆ. ಯಾವತ್ತೂ ಹೇಳಿಕೊಳ್ತಿರಲಿಲ್ಲ. ಅವರ ಮುಂದೆ ನಾವೆಲ್ಲಾ ಏನು?’ ಎಂದು ಮುಖ ತಿರುವಿದರು ದತ್ತಣ್ಣ.
Advertisement
ದತ್ತಣ್ಣ ಕಳೆದ ತಿಂಗ “ರೂಪತಾರಾ’ದಲ್ಲೇ ಕಾಣಿಸಿಕೊಳ್ಳಬೇಕಿತ್ತು. ಕಾರಣಾಂತರಗಳಿಂದ ಸಂದರ್ಶನ ತಡವಾಯ್ತು. ಕೊನೆಗೂ ಅದೊಂದು ಶನಿವಾರ ಮಧ್ಯಾಹ್ನ ದತ್ತಣ್ಣ ತಮ್ಮ ಶ್ರೀನಗರ ಮನೆಯಲ್ಲಿ ಸಿಕ್ಕೇಬಿಟ್ಟರು. “ರವೀಂದ್ರ ಕಲಾಕ್ಷೇತ್ರದಲ್ಲಿ ಸಂಜೆ ಆರಕ್ಕೆ ಒಂದು ಸಮಾರಂಭವಿದೆ. ಐದೂ ಕಾಲಕ್ಕೆ ಹೊರಡಬೇಕು’ ಎಂದು ಮೊದಲೇ ತಾಕೀತು ಮಾಡಿದ್ದರು. ಐದೂಕಾಲಿಗೆ ಇನ್ನೂ 90 ನಿಮಿಷ ಬಾಕಿ ಇತ್ತು. ಈ 90 ನಿಮಿಷಗಳಲ್ಲಿ ತಮ್ಮ 75 ವರ್ಷಗಳ ಜೀವನವನ್ನು ಮೆಲುಕು ಹಾಕಿದರು ದತ್ತಣ್ಣ.
ಇಷ್ಟು ಹೇಳಿ ದೀರ್ಘ ಉಸಿರೆಳೆದುಕೊಂಡರು ದತ್ತಣ್ಣ. ಅವರು ಈ ಹಿಂದೆ ಏರ್‌ಫೋರ್ಸ್‌ನಲ್ಲಿ ಕೆಲಸ ಮಾಡಿದ್ದು, ಜೊತೆಜೊತೆಗೆ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದು, ಆ ಅನುಭವದಿಂದ ಚಿತ್ರರಂಗಕ್ಕೆ ಕಾಲಿಟ್ಟಿದ್ದು … ಈ ವಿಷಯಗಳು ಹಲವರಿಗೆ ಗೊತ್ತಿರಬಹುದು. ಆದರೆ, ಹಾಗೆ ಬಂದ ದತ್ತಣ್ಣ, ಇಲ್ಲಿ ಹೇಗೆ ತಮ್ಮ ಛಾಪು ಮೂಡಿಸಿದರು ಎನ್ನುವುದು ಬಹಳ ಮುಖ್ಯ.
Related Articles
Advertisement
1996ರ ಹೊತ್ತಿಗೆ ದೂರದರ್ಶನದಲ್ಲಿ ಡೈಲಿ ಧಾರಾವಾಹಿಗಳಿಗೆ ಬೂಮ್ ಬರುತ್ತಿದ್ದಂತೆ, ದತ್ತಣ್ಣಗೆ ಒಂದು ಆಫರ್ ಬಂತಂತೆ. “ನಾನು ಆಗಷ್ಟೇ “ಅಮೇರಿಕಾ ಅಮೇರಿಕಾ’ ಮುಗಿಸಿ ಬಂದಿದ್ದೆ. ಅದೊಂದು ದಿನ ಪಿ. ಶೇಷಾದ್ರಿ ಮನೆಗೆ ಬಂದಿದ್ದ. ಅದೋ ನೋಡು, ಅಲ್ಲೇ ಕೂತಿದ್ದ. ಟಿ.ಎನ್. ಸೀತಾರಾಂ, ಅವನು ಮತ್ತು ನಾಗೇಂದ್ರ ಶಾ ಸೇರಿ “ಮಾಯಾಮೃಗ’ ಅಂತ ಸೀರಿಯಲ್ ಮಾಡಬೇಕು ಅಂತಿದ್ದರು. ಅದು ದೂರದರ್ಶನದಲ್ಲಿ ಬಂದ ಮೂರನೇ ಮೆಗಾ ಸೀರಿಯಲ್ ಅನಿಸುತ್ತೆ. ಅಷ್ಟರಲ್ಲಿ “ಮನೆತನ’ ಮತ್ತು “ಜನನಿ’ ಬಂದಿತ್ತು. “ಮಾಯಾಮೃಗ’ದಲ್ಲಿ ಒಂದು ಪ್ರಮುಖ ಪಾತ್ರ ಮಾಡಿ ಅಂತ ಶೇಷಾದ್ರಿ ಬಂದಿದ್ದ. ಕೇಳಿದ ತಕ್ಷಣ ಆಗಲ್ಲ ಅಂದೆ. ಯಾಕೆಂದರೆ, ಫ್ಯಾಕ್ಟರಿ ಬೇಡ ಅಂತ ರಿಟೈರ್‌ವೆುಂಟ್ ತಗೊಂಡೋನು ನಾನು. ಮತ್ತೆ ಫ್ಯಾಕ್ಟರಿ ತರಹ ಕೆಲಸ ಮಾಡೋಕೆ ಇಷ್ಟ ಇರಲಿಲ್ಲ. ಹಾಗಾಗಿ ಬೇಡ ಅಂದೆ. ಅದಕ್ಕೆ ಶೇಷಾದ್ರಿ, ಒಮ್ಮೆ ಕಥೆ ಮತ್ತು ಪಾತ್ರ ಕೇಳಿ ಅಂದ. ಪಾತ್ರ ಕೇಳಿದ ಮೇಲೆ, ಅದು ನನಗೆ ಹೇಳಿ ಮಾಡಿಸಿದ ಹಾಗಿದೆ ಅಂತ ಅನಿಸ್ತು. ಆ ಪಾತ್ರವಾದರೆ ಮಾಡುತ್ತೀನಿ ಎಂದೆ. ಅಲ್ಲಿಂದ “ಮಾಯಾಮೃಗ’ ಶುರುವಾಯ್ತು’ ಎಂದು ದತ್ತಣ್ಣ ಹೇಳಿದರು. ಹಿಂದೆಯೇ, ಅವರ ಮತ್ತು ಶೇಷಾದ್ರಿ ಅವರ ಒಡನಾಟವನ್ನು ವಿವರಿಸಿದರು.
“ಶೇಷಾದ್ರಿ ಅಷ್ಟರಲ್ಲಿ ಇಂಡಿಪೆಂಡೆಂಟ್ ನಿರ್ದೇಶಕ ಆಗಬೇಕು ಅಂತ, ಬೋಳವಾರ ಮೊಹಮ್ಮದ್ ಕುಂಯಿ ಅವರ ಕಥೆ ಇಟ್ಟುಕೊಂಡು ಹಲವು ನಿರ್ಮಾಪಕರನ್ನು ಭೇಟಿ ಮಾಡಿದ್ದ. ಯಾಕೋ ಯಾರೂ ಮಾಡಲಿಲ್ಲ. ಯಾಕೆ ನಾವೇ ಸಹಕಾರಿ ತತ್ವದಲ್ಲಿ ಚಿತ್ರ ಮಾಡಬಾರದು ಎಂಬ ಯೋಚನೆ ಬಂತು. ದುಡ್ಡು ಹೋದರೆ ಹೋಯಿತು, ಬಂದರೆ ಎಲ್ಲರೂ ಹಂಚಿಕೊಳ್ಳೋಣ ಎಂದು ಒಂದಿಷ್ಟು ಜನರನ್ನ ಒಟ್ಟುಗೂಡಿಸಿ ಚಿತ್ರ ಮಾಡೋಣ ಎಂದು ನಿರ್ಧಾರವಾಯಿತು. ಎಲ್ಲರಿಗೂ ಒಂದು ಜವಾಬ್ದಾರಿ ಇರಲಿ ಎಂದು ಹೇಳಿದ್ದು ನಾನೇ. ಕೊನೆಗೆ ಚಿತ್ರ ಬಿಡುಗಡೆಯಾಗಿ ಒಳ್ಳೆಯ ಹೆಸರು ಮಾಡಿತು. ಅಲ್ಲಿಂದ ಅವನ ಗರಡಿಯಲ್ಲಿ ಮುಖ್ಯ ಪೈಲ್ವಾನ್ ಆಗಿ “ಅತಿಥಿ’, “ಬೇರು’, “ತುತ್ತೂರಿ’, “ಡಿಸೆಂಬರ್ ಒಂದು’, “ಭಾರತ್ ಸ್ಟೋರ್’ ಹೀಗೆ ಹಲವು ಚಿತ್ರಗಳಲ್ಲಿ ಅಭಿನಯ ಮಾಡಿದೆ. ಅವನ ಜೊತೆಗೆ ಅಷ್ಟೊಂದು ಚಿತ್ರ ಮಾಡಿದ್ದು ಒಂದು ದಾಖಲೆಯಾದರೆ, ಅವನ ಎಂಟು ಚಿತ್ರಗಳು ಸತತವಾಗಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದು ಇನ್ನೊಂದು ದಾಖಲೆಯಾಯಿತು. ಅದ್ಯಾಕೋ ಪಾಪ, ಅವನು ಅಷ್ಟು ಸಾಧನೆ ಮಾಡಿದರೂ, ಅವನಿಗೆ ಸರಿಯಾದ ಪ್ರಚಾರ ಸಿಗಲಿಲ್ಲ’ ಎಂದು ಬೇಸರಿಸಿಕೊಳ್ಳುತ್ತಾರೆ ದತ್ತಣ್ಣ. ಶಾಸ್ತ್ರೀ ಪಾತ್ರ ಮಾಡುತ್ತಲೇ, ತಲೆ ಹಿಡುಕನ ಪಾತ್ರ
ಒಂದು ಕಾಲಕ್ಕೆ ದತ್ತಣ್ಣ ಎಂದರೆ ರಾಜಕಾರಣಿ ಪಾತ್ರ ಖಾಯಂ ಎನ್ನುವಂತಿತ್ತು. ಕ್ರಮೇಣ ಎಮೋಷನಲ್ ಪಾತ್ರಗಳತ್ತ ಅವರು ಹೊರಳಿದರು. “ನಾನ್ಯಾವತ್ತೂ ಇದೇ ತರಹ ಪಾತ್ರ ಮಾಡಬೇಕು ಎಂದು ಯೋಚಿಸಿಲ್ಲ. “ಮಾಯಾಮೃಗ’ದಲ್ಲಿ ಶಾಸಿŒ ಪಾತ್ರ ಮಾಡುತ್ತಲೇ, “ಮುನ್ನುಡಿ’ಯಲ್ಲಿ ತಲೆ ಹಿಡುಕನ ಪಾತ್ರ ಮಾಡಿದ್ದೀನಿ. ಹಾಗಾಗಿ ಇಂತಹ ಪಾತ್ರಗಳು ಅಂತಿಲ್ಲ. ಖುಷಿ ಸಿಗಬೇಕು ಅಷ್ಟೇ. ಕನ್ನಡದ ಜೊತೆಗೆ ತೆಲುಗಿನ “ತಿಲಾದಾನಂ’, ಮಲಯಾಳಂನ “ಅತೀತಂ’, ಹಿಂದಿಯ “ದೂಸ್ರಾ’ ಚಿತ್ರಗಳಲ್ಲೂ ನಟಿಸಿದ್ದೀನಿ. ಒಂದಿಷ್ಟು ದೊಡ್ಡ ನಿರ್ದೇಶಕರಡಿ, ಒಳ್ಳೆಯ ಕಲಾವಿದರ ಜೊತೆಗೆ ನಟಿಸಿದ ಖುಷಿ ಇದೆ. ಖಡಾಖಂಡಿತವಾಗಿ ಲೆಕ್ಕ ಇಟ್ಟಿಲ್ಲ. ಸುಮಾರು 180 ಸಿನಿಮಾಗಳಲ್ಲಿ ನಟಿಸುತ್ತಿದ್ದೀನಿ. ಸದ್ಯಕ್ಕೆ “ಕಿನಾರೆ’, “ಕೆಂಪಿರವೆ’, “ಅಜ್ಜ’, “ಜೇಮ್ಸ್ ಪಾರ್ಕರ್’, “ಎಡಕಲ್ಲು ಗುಡ್ಡದ ಮೇಲೆ’ ಮುಂತಾದ ಚಿತ್ರಗಳಲ್ಲಿ ನಟಿಸುತ್ತಿದ್ದೀನಿ. ಒಂದು ಖುಷಿ ಎಂದರೆ, ಇಷ್ಟು ಚಿತ್ರಗಳಲ್ಲಿ 30 ಪರ್ಸೆಂಟ್‌ನಷ್ಟು ಹೊಸಬರ ಜೊತೆಗೆ ಕೆಲಸ ಮಾಡಿದ್ದೀನಿ ಎಂಬ ಖುಷಿಯಿದೆ’ ಎನ್ನುತ್ತಾರೆ ದತ್ತಣ್ಣ. ಎನರ್ಜಿ ಲೆವೆಲ್ ಇನ್ನೂ ಕಡಿಮೆ ಆಗಿಲ್ಲ
ಈ ಖುಷಿಯ ಜೊತೆಗೆ, ದತ್ತಣ್ಣ ಅವರಿಗೆ ಇನ್ನೂ ಒಂದು ಖುಷಿ ಇದೆ. ಅದು ತಮ್ಮ ಆರೋಗ್ಯದ ಬಗ್ಗೆ. “ನನ್ನ ಸ್ನೇಹಿತರು ಅನೇಕರು ಸುಸ್ತಾಗಿದ್ದಾರೆ. ನಾನು ಆ ಲೆವೆಲ್‌ಗೆ ಇನ್ನೂ ಹೋಗಿಲ್ಲ. ವರ್ಷ 75 ಆಯ್ತು. ಎನರ್ಜಿ ಲೆವೆಲ್ ಇನ್ನೂ ಕಡಿಮೆ ಆಗಿಲ್ಲ. ಅದೇ ಸೌಭಾಗ್ಯ. ನಾನು ಇಷ್ಟರಲ್ಲಿ ಹೋಗಿಬಿಡಬಹುದಿತ್ತು. ಮೂರು ಸಾರಿ ಬಚಾವ್ ಆಗಿದ್ದೀನಿ. ಈಗಲೂ ಒಂದಿಷ್ಟು ಚಿತ್ರಗಳಲ್ಲಿ ನಟಿಸುತ್ತಿದ್ದೀನಿ. ನಾಟಕಗಳಲ್ಲಿ ನಟಿಸಬೇಕು ಎಂಬ ಆಸೆ ಈಗಲೂ ಇದೆ. ಆದರೆ, ವೈಯಕ್ತಿಕ ಕಾರಣಗಳಿಗೆ ನಟಿಸೋಕೆ ಆಗುತ್ತಿಲ್ಲ. ಚಿತ್ರೀಕರಣ ಬಿಟ್ಟರೆ, ಶೇರ್ ಮಾರ್ಕೆಟ್ ನೋಡ್ತಿರಿ¤àನಿ. ದಿನ ಅದಕ್ಕೆ ಒಂದಾರು ತಾಸು ಬೇಕು. ಸ್ನೇಹಿತರು, ಪಾರ್ಟಿ ಅಂತ ಇರುತ್ತೆ. ಇದೆಲ್ಲದರ ಮಧ್ಯೆ ನನ್ನ ಕೆಲಸಗಳೇ ಆಗಿರುವುದಿಲ್ಲ. ಬೈಸಿಕೊಳ್ತೀನಿ, ಹೇಗೋ ಸಂಭಾಳಿಸುತ್ತೀನಿ. ಹೀಗೆ ಏನೇನೋ ನಡೀತಲೇ ಇರತ್ತೋ’ ಎಂದರು ದತ್ತಣ್ಣ. ಇಷ್ಟು ಹೇಳಿ, ಸಮಯ ಎಷ್ಟಾಯ್ತೋ ಎಂದರು ದತ್ತಣ್ಣ. ಐದೂಕಾಲಾಗಿ ಏಳೆಂಟು ನಿಮಿಷ ಜಾಸ್ತಿಯೇ ಇತ್ತು. ಸಮಯ ಹೇಳುತ್ತಿದ್ದಂತೆ, ದತ್ತಣ್ಣ ದಿಡಗ್ಗನೆ ಎದ್ದರು. “ಲೇಟಾಯ್ತು, ಅಷ್ಟು ದೂರ ಆಟೋದಲ್ಲಿ ಹೋಗಬೇಕು ಅಂತ ಹೆಗಲಿಗೆ ಬ್ಯಾಗು, ಶಾಲು ಹಾಕಿಕೊಂಡರು. ಸರಸರನೆ ಬಾಗಿಲಿಗೆ ಬೀಗ ಹಾಕಿ, “ಇನ್ನೊಮ್ಮೆ ಆರಾಮವಾಗಿ ಕೂತು ಮಾತಾಡುವ’ ಎಂದು ಹೇಳಿ, ಮಾಯವೇ ಆದರು.