ವಿಟ್ಲ: ಕಾಮ, ಕ್ರೋಧ, ಮತ್ಸರ ತ್ಯಜಿಸಿದವರಿಗೆ ದತ್ತಾನುಗ್ರಹ ಪ್ರಾಪ್ತಿಯಾಗುತ್ತದೆ. ದತ್ತಾವತಾರವೆಂದರೆ ಜ್ಞಾನಾವತಾರ. ಜ್ಞಾನದ ಕೊರತೆಯಿಂದ ಸಮಾಜದಲ್ಲಿ ಸಂಕಷ್ಟಗಳು, ತೊಂದರೆಗಳು ಸಂಭವಿಸುತ್ತವೆ. ಪರೋಪಕಾರದ ಬದುಕು ಸಮಾಜಕ್ಕೆ ಒಳಿತನ್ನು ಮಾಡುತ್ತದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ನುಡಿದರು.
ಅವರು ಮಂಗಳವಾರ ಒಡಿಯೂರು ಸಂಸ್ಥಾನದಲ್ಲಿ ಶ್ರೀ ದತ್ತ ಜಯಂತಿ ಮಹೋತ್ಸವ, ಶ್ರೀ ದತ್ತ ಮಹಾಯಾಗ ಸಪ್ತಾಹ ಸಮಾಪ್ತಿ, ಶ್ರೀಮದ್ಭಾಗವತ ಪ್ರವಚನ, ಯಕ್ಷಗಾನ ತಾಳಮದ್ದಳೆ ಸಪ್ತಾಹ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
ಧರ್ಮ ಸಂಸ್ಕೃತಿಯನ್ನು ಮತ್ತು ಸಂಸ್ಕೃತಿ ಧರ್ಮವನ್ನು ಬಿಟ್ಟಿಲ್ಲ. ಧರ್ಮ ಸಂರಕ್ಷಣೆಯಲ್ಲಿ ಸದಾ ಮುಂಚೂಣಿಯಲ್ಲಿರಬೇಕು. ಜನವರಿ 22ರಂದು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರವನ್ನು ಲೋಕಾರ್ಪಣೆ ಮಾಡಲಾಗುತ್ತದೆ. ಇಂದಿನ ಕಾಲಘಟ್ಟದಲ್ಲಿ ಶ್ರೀರಾಮನ ಪ್ರತಿಷ್ಠೆ ಆಗುತ್ತಿರುವುದು ನಮ್ಮೆಲ್ಲರ ಪುಣ್ಯ. ಇದು ಅತ್ಯಂತ ಶ್ರೇಷ್ಠ ಸಂದರ್ಭ ಎಂದು ಅವರು ಬಣ್ಣಿಸಿದರು.
ಸಾಧ್ವಿà ಶ್ರೀ ಮಾತಾನಂದಮಯೀಯವರು ಸಾನ್ನಿಧ್ಯ ವಹಿಸಿದ್ದರು. ವಿದ್ವಾನ್ ಹಿರಣ್ಯ ವೆಂಕಟೇಶ್ವರ ಭಟ್, ಉದ್ಯಮಿ ವಾಮಯ್ಯ ಶೆಟ್ಟಿ ಮುಂಬಯಿ, ಮುಂಬಯಿ ಶ್ರೀ ಗುರುದೇವ ಸೇವಾ ಬಳಗದ ಅಧ್ಯಕ್ಷ ದಾಮೋದರ ಶೆಟ್ಟಿ ಮುಂಬಯಿ, ಪುಣೆ ಅಧ್ಯಕ್ಷ ಪ್ರಭಾಕರ ಶೆಟ್ಟಿ, ವಜ್ರಮಾತಾ ಮಹಿಳಾ ವಿಕಾಸ ಕೇಂದ್ರ ಮುಂಬಯಿ ಘಟಕದ ಅಧ್ಯಕ್ಷೆ ಶ್ವೇತಾ ಚಂದ್ರಹಾಸ ರೈ ಉಪಸ್ಥಿತರಿದ್ದರು.
ಪುರಸ್ಕಾರ: ಕಲಾವಿದ, ನಿರೂಪಕ ನವನೀತ ಶೆಟ್ಟಿ ಕದ್ರಿ, ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಅಧ್ಯಕ್ಷ ಎ. ಸುರೇಶ್ ರೈ, ಉಪಾಧ್ಯಕ್ಷ ಪಿ. ಲಿಂಗಪ್ಪ ಗೌಡ ಪನೆಯಡ್ಕ, ನಿರ್ದೇಶಕ ಲೋಕನಾಥ ಶೆಟ್ಟಿ ತಾಳಿಪ್ಪಾಡಿಗುತ್ತು, ಒಡಿಯೂರು ಶ್ರೀ ಗುರುದೇವ ವಿದ್ಯಾ ಪೀಠದ ಸಂಚಾಲಕ ಗಣಪತಿ ಭಟ್ ಸೇರಾಜೆ ಅವರಿಗೆ ಸ್ವಾಮೀಜಿಯವರು “ಶ್ರೀ ಗುರುದೇವಾನುಗ್ರಹ ಪುರಸ್ಕಾರ’ ನೀಡಿ ಗೌರವಿಸಿದರು.
ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ದಿನದರ್ಶಿಕೆ, ದತ್ತಪ್ರಕಾಶ ಆಧ್ಯಾತ್ಮಿಕ ದ್ವೈಮಾಸಿಕ ಪತ್ರಿಕೆಯ ಸಂಚಿಕೆ, ಕೊಂಬಿಲ ಉಗ್ಗಪ್ಪ ಶೆಟ್ಟಿ ಪ್ರಕಟಿಸಿದ ಮುಳಿಯ ಶಂಕರ ಭಟ್ ಭಾವಾನುವಾದಗೊಳಿಸಿದ ಕಾಳಿದಾಸರ “ಶ್ಯಾಮಲ ದಂಡಕಮ್’ ಕೃತಿಯನ್ನು ಬಿಡುಗಡೆಗೊಳಿಸಲಾಯಿತು. ಸ್ವಸಹಾಯ ಗುಂಪುಗಳಿಗೆ ಲಾಭಾಂಶ ವಿತರಿಸಲಾಯಿತು.
ಶಿಕ್ಷಕ ಶೇಖರ ಶೆಟ್ಟಿ ಬಾಯಾರು ಸ್ವಾಗತಿಸಿದರು. ಯಶವಂತ ವಿಟ್ಲ ನಿರೂಪಿಸಿದರು. ಸುಬ್ರಹ್ಮಣ್ಯ ಟಿ., ಮಾತೇಶ್ ಭಂಡಾರಿ, ಜಯಲಕ್ಷ್ಮೀ ಪ್ರಭು, ಜಯಂತ ಆಜೇರು, ಅನಿತಾ ಸಮ್ಮಾನಿತರನ್ನು ಪರಿಚಯಿಸಿದರು.
ಬೆಳಗ್ಗೆ ಶ್ರೀ ದತ್ತಮಾಲಾಧಾರಿಗಳಿಂದ ನಾಮಸಂಕೀರ್ತನ ಶೋಭಾಯಾತ್ರೆ, ಸ್ವಯಂಭೂ ನಾಗರಾಜ ಸನ್ನಿಧಿಯಲ್ಲಿ ಸಾರ್ವಜನಿಕ ನಾಗತಂಬಿಲ, ವಿದ್ವಾನ್ ಹಿರಣ್ಯ ವೆಂಕಟೇಶ್ವರ ಭಟ್ ಅವರಿಂದ ಶ್ರೀಮದ್ಭಾಗವತ ಪ್ರವಚನ ನಡೆಯಿತು. ವೇದ ಪಾರಾಯಣ, ಶ್ರೀಗುರುಚರಿತ್ರೆ ಪಾರಾಯಣ ಸಮಾಪ್ತಿ, ಶ್ರೀ ದತ್ತ ಮಹಾಯಾಗದ ಪೂರ್ಣಾಹುತಿ, ಕಲೊ³àಕ್ತ ಪೂಜೆ, ಮಹಾಪೂಜೆ, ಶ್ರೀ ಗುರುದೇವಾನಂದ ಸ್ವಾಮೀಜಿ ಅವರಿಂದ ಮಧುಕರೀ ಸೇವೆ, ಮಂತ್ರಾಕ್ಷತೆ, ಪ್ರಸಾದ ವಿತರಣೆ, ಮಹಾಸಂತರ್ಪಣೆ ನಡೆಯಿತು.