ಚಿಕ್ಕಮಗಳೂರು: ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ಹಮ್ಮಿಕೊಂಡಿರುವ ದತ್ತ ಜಯಂತಿ ಅಭಿಯಾನಕ್ಕೆ ಬುಧವಾರ ಅಧಿಕೃತ ಚಾಲನೆ ದೊರೆಯಿತು.
ಚಿಕ್ಕಮಗಳೂರು ಸೇರಿ ರಾಜ್ಯಾದ್ಯಂತ ಭಕ್ತರು ದತ್ತಮಾಲೆ ಧರಿಸಿದರು. ನಗರದ ಶ್ರೀ ಕಾಮಧೇನು ಗಣಪತಿ ದೇವಾಲಯದಲ್ಲಿ ಪುರೋಹಿತ ರಘುನಾಥ ಅವಧಾನಿ ಅವರು ದತ್ತಾತ್ರೇಯರಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಭಕ್ತಾದಿಗಳು
ದತ್ತಮಾಲೆ ಧರಿಸಿದರು.
ನಂತರ, 100ಕ್ಕೂ ಹೆಚ್ಚು ದತ್ತ ಭಕ್ತರು ಮಾಲೆ ಧರಿಸಿ, ವೃತಾಧಾರಿಗಳಾದರು. ಪೂಜೆ ನಡೆಯುತ್ತಿದ್ದ ಸಂದರ್ಭದಲ್ಲಿ ದತ್ತಮಾಲಾಧಾರಿಗಳು ಭಜನೆ ಮಾಡಿದರು. ಹೋಮ, ಹವನಗಳು ನಡೆದವು. ಇದೇ ವೇಳೆ, ನಗರ ಮಾತ್ರವಲ್ಲದೆ ಜಿಲ್ಲೆಯ ವಿವಿಧೆಡೆ ಹಾಗೂ ರಾಜ್ಯಾದ್ಯಂತ ದತ್ತ ಭಕ್ತರು ವಿವಿಧ ದೇವಾಲಯಗಳಲ್ಲಿ ದತ್ತಮಾಲೆ ಧರಿಸಿದರು. ಡಿ.20, 21 ಮತ್ತು 22ರಂದು ದತ್ತ ಜಯಂತಿ ಅಂಗವಾಗಿ ವಿಶೇಷ ಕಾರ್ಯಕ್ರಮಗಳು ನಡೆಯಲಿವೆ.
ವಿ.ಎಚ್.ಪಿ.ಜಿಲ್ಲಾ ಕಾರ್ಯಾಧ್ಯಕ್ಷ ಶಿವಶಂಕರ್ ಮಾತನಾಡಿ, ರಾಜ್ಯಾದ್ಯಂತ ದತ್ತ ಭಕ್ತರು ದತ್ತಮಾಲಾ ಧಾರಣೆ ಮಾಡುತ್ತಿದ್ದಾರೆ. ಡಿ.20 ರಿಂದ 23ರವರೆಗೆ ದತ್ತ ಜಯಂತಿ ಕಾರ್ಯಕ್ರಮಗಳು ನಡೆಯಲಿವೆ. ಡಿ.20 ರಂದು ಮಹಿಳೆಯರು ನಗರದಲ್ಲಿ ಸಂಕೀರ್ತನಾ ಯಾತ್ರೆ ನಡೆಸಿ ದತ್ತಪೀಠಕ್ಕೆ ತೆರಳಿ ಅನಸೂಯಾ ಜಯಂತಿ ಆಚರಿಸುವರು. 21ರಂದು ದತ್ತಮಾಲಾಧಾರಿಗಳಿಂದ ನಗರದಲ್ಲಿ ಬೃಹತ್ ಶೋಭಾ ಯಾತ್ರೆ ನಡೆಯಲಿದೆ. ಡಿ.23 ರಂದು ರಾಜ್ಯದ ವಿವಿಧೆಡೆಗಳಲ್ಲಿ ದತ್ತಮಾಲೆ ಧರಿಸಿರುವ ಸಹಸ್ರಾರು ದತ್ತಮಾಲಾಧಾರಿಗಳು ದತ್ತಪೀಠಕ್ಕೆ ತೆರಳಿ ದತ್ತ ಪಾದುಕೆಗಳ ದರ್ಶನ ಪಡೆಯುವರು. ದತ್ತಪೀಠದಲ್ಲಿ ತಾವು ಸಂಗ್ರಹಿಸಿರುವ ಪಡಿಯನ್ನು ದತ್ತಾತ್ರೇಯರಿಗೆ ಸಮರ್ಪಿಸುವರು.ನಂತರ, ತಮ್ಮ ಊರುಗಳಿಗೆ ತೆರಳಿ, ದತ್ತಮಾಲೆ ವಿಸರ್ಜಿಸಲಿದ್ದಾರೆ ಎಂದರು.