Advertisement

“ದಶರಥ’ವೈಭವ

05:42 AM Mar 20, 2019 | |

“ಪ್ರೇಮಲೋಕ’ದ ಸರದಾರನನ್ನು ತೆರೆಮೇಲೆ ನೋಡಿ ಬಹಳ ಸಮಯವಾಯಿತು ಎನ್ನುತ್ತಿದ್ದ ಅಭಿಮಾನಿಗಳ ಮುಂದೆ ರವಿಚಂದ್ರನ್‌ ಹೊಸರೂಪದಲ್ಲಿ ತೆರೆಮೇಲೆ ದರ್ಶನ ಕೊಡೋದಕ್ಕೆ ರೆಡಿಯಾಗಿದ್ದಾರೆ. ಹೌದು, “ದೃಶ್ಯ’ ಚಿತ್ರದ ನಂತರ ಪಕ್ಕಾ ಫ್ಯಾಮಿಲಿ ಮ್ಯಾನ್‌ ಗೆಟಪ್‌ನಲ್ಲಿ ಫ್ಯಾಮಿಲಿ ಆಡಿಯನ್ಸ್‌ಗೆ ಹತ್ತಿರವಾಗಿದ್ದ ರವಿಮಾಮ, ಈ ಬಾರಿ “ದಶರಥ’ನ ಅವತಾರದಲ್ಲಿ ಕರಿಕೋಟು ತೊಟ್ಟು, ಏಪ್ರಿಲ್‌ ಮೊದಲ ವಾರ (ಏ.5) ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಎಂ.ಎಸ್‌.ರಮೇಶ್‌ ಈ ಚಿತ್ರದ ನಿರ್ದೇಶಕರು. ಎಂ.ಎಸ್‌.ಆರ್‌ ಪ್ರೊಡಕ್ಷನ್ಸ್‌ನಡಿ ಚಿತ್ರ ನಿರ್ಮಾಣವಾಗಿದೆ. ರವಿಚಂದ್ರನ್‌ ಅವರ “ದಶರಥ’ ಅವತಾರದ ವಿಶೇಷತೆಗಳೇನು ಎಂಬುದರ ಬಗ್ಗೆ ಸಣ್ಣದೊಂದು ಝಲಕ್‌ ನಿಮ್ಮ ಮುಂದೆ… 

Advertisement

ರವಿಚಂದ್ರನ್‌ ಇಲ್ಲಿಯವರೆಗೆ ಕರಿಕೋಟು ತೊಟ್ಟು ಅಡ್ವೋಕೆಟ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಬೆರಳೆಣಿಕೆಯಷ್ಟು ಚಿತ್ರಗಳಲ್ಲಿ ಮಾತ್ರ. ಆದರೆ ರವಿಚಂದ್ರನ್‌ ಅಡ್ವೋಕೆಟ್‌ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದ ಬಹುತೇಕ ಆ ಎಲ್ಲಾ ಚಿತ್ರಗಳು ಹಿಟ್‌ ಚಿತ್ರಗಳ ಲಿಸ್ಟ್‌ನಲ್ಲಿ ಸ್ಥಾನ ಪಡೆದುಕೊಂಡಿದ್ದವು ಎನ್ನುವುದು ಗಮನಿಸಬೇಕಾದ ಸಂಗತಿ. ರವಿಚಂದ್ರನ್‌ ಅವರ ಅಡ್ವೋಕೆಟ್‌ ಗೆಟಪ್‌ ಅನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದರೂ, ಸುಮಾರು ಒಂದು ದಶಕದಿಂದ ರವಿಚಂದ್ರನ್‌ ಮಾತ್ರ ಯಾವ ಚಿತ್ರಗಳಲ್ಲೂ ಕರಿಕೋಟು ತೊಟ್ಟಿರಲಿಲ್ಲ. ಈ ಬಾರಿ “ದಶರಥ’ನ ಪಾತ್ರದಲ್ಲಿ ಕರಿಕೋಟು ತೊಟ್ಟಿರುವ ರವಿಮಾಮ, ಅಡ್ವೋಕೆಟ್ ಗೆಟಪ್‌ನಲ್ಲಿ ಮತ್ತೆ ಆಡಿಯನ್ಸ್‌ ಮುಂದೆ ಬರುತ್ತಿದ್ದಾರೆ. ಹಾಗಾಗಿ “ದಶರಥ’ ಚಿತ್ರದ ಬಗ್ಗೆ ಮತ್ತು ಚಿತ್ರದಲ್ಲಿ ಕರಿಕೋಟು ತೊಟ್ಟ “ದಶರಥ’ ಪಾತ್ರದ ಬಗ್ಗೆ ಒಂದಷ್ಟು ನಿರೀಕ್ಷೆಗಳು ಮೂಡಿರುವುದಂತೂ ಸುಳ್ಳಲ್ಲ.  

ಕ್ರೇಜಿಸ್ಟಾರ್‌ಗೆ ಹೇಳಿ ಮಾಡಿಸಿದಂಥ ಪಾತ್ರ: ಇನ್ನು “ದಶರಥ’ ಚಿತ್ರದ ಕಥೆ ಮತ್ತು ಪಾತ್ರ ಎರಡೂ ಅವರಿಗೆ ಹೇಳಿ ಮಾಡಿಸಿದಂತಿದೆ ಅನ್ನೋದು ಚಿತ್ರತಂಡದ ಮಾತು. ಚಿತ್ರದಲ್ಲಿ ರವಿಚಂದ್ರನ್‌ ಮನೆಯಲ್ಲಿ ತಂದೆಯಾಗಿ, ಹೊರಗೆ ಅಡ್ವೋಕೆಟ್‌ ಆಗಿ ಎರಡು ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು, “ಮನೆಯಲ್ಲಿ ಮಕ್ಕಳು ತಪ್ಪು ಮಾಡದಿದ್ದಾಗ ಅವರ ಪರ ನಿಲ್ಲಬೇಕು. ತಪ್ಪು ಮಾಡಿದವರಿಗೆ ಕಾನೂನು ಪ್ರಕಾರ ಶಿಕ್ಷೆ ಆಗಬೇಕು’ ಎಂಬ ನಿಲುವನ್ನು ಪ್ರತಿಪಾದಿಸುತ್ತಾರಂತೆ. “ಈ ಚಿತ್ರ ನೋಡಿದ ಮೇಲೆ ಈ ಥರದ ಅಪ್ಪ ನಮಗೂ ಇರಬೇಕು ಅಂಥ ಪ್ರತಿಯೊಬ್ಬರಿಗೂ ಅನಿಸುತ್ತದೆ. ಮನೆಯ ಒಬ್ಬ ಆದರ್ಶ ಯಜಮಾನ, ಆದರ್ಶ ತಂದೆ ಹೇಗೆ ವರ್ತಿಸಬಹುದು ಅನ್ನೋದನ್ನ ರವಿಚಂದ್ರನ್‌ ಪಾತ್ರ ತೋರಿಸುತ್ತದೆ. ಅವರ ಪಾತ್ರ ಪ್ರತಿಯೊಬ್ಬರ ಮನಸ್ಸಿನಲ್ಲಿ ಉಳಿಯುತ್ತದೆ’ ಅನ್ನೋದು ನಿರ್ದೇಶಕ ಎಂ.ಎಸ್‌.ರಮೇಶ್‌ ಮಾತು.  

ನಮ್ಮ-ನಿಮ್ಮ ನಡುವಿನ ಕಥೆ: ಇನ್ನು ಚಿತ್ರದ ನಿರ್ದೇಶಕ ಎಂ.ಎಸ್‌ ರಮೇಶ್‌ ಅವರ ಪ್ರಕಾರ, “ದಶರಥ’ ಇಂದು ಎಲ್ಲರ ಮನೆಯಲ್ಲೂ ನಡೆಯುವ ಕಥೆಯಂತೆ. ನಮ್ಮ ಸುತ್ತಮುತ್ತ ಬಹುತೇಕ ಎಲ್ಲರೂ ಕಂಡಿರುವ, ಅನುಭವಿಸಿರುವ ಕಥೆಯೇ “ದಶರಥ’ ಚಿತ್ರದಲ್ಲೂ ಇದೆಯಂತೆ. “ವಯಸ್ಸಿಗೆ ಬಂದ ಹುಡುಗಿಯರು ಎಷ್ಟು ಸೇಫ್ ಆಗಿ ಮನೆಗೆ ಬರುತ್ತಾರೆ, ಅವರ ಸಮಸ್ಯೆಗಳೇನು, ಮನೆಯವರ ಪ್ರತಿಕ್ರಿಯೆ ಏನು, ನಮ್ಮ ಸುತ್ತಮುತ್ತಲಿನ ವಾತಾವರಣ ಹೇಗಿದೆ ಅನ್ನೋದನ್ನ ಈ ಚಿತ್ರ ಪ್ರತಿಬಿಂಬಿಸುವಂತಿದೆ. ನಮ್ಮ ಅಕ್ಕಪಕ್ಕ ನಡೆಯುವ ವಿಷಯವನ್ನೇ ಪರಿಣಾಮಕಾರಿಯಾಗಿ ಚಿತ್ರದಲ್ಲಿ ಹೇಳಲು ಹೊರಟಿದ್ದೇವೆ. ನಾವು ಅಂದುಕೊಳ್ಳುವ ಚಿಕ್ಕ ವಿಷಯಗಳು ಕೆಲವೊಮ್ಮೆ ಎಷ್ಟೊಂದು ಗಂಭೀರ ಪರಿಣಾಮ ಬೀರುತ್ತವೆ ಅನ್ನೋದನ್ನ ಚಿತ್ರದಲ್ಲಿ ತೋರಿಸಿದ್ದೇವೆ’ ಎನ್ನುತ್ತಾರೆ ಎಂ.ಎಸ್‌ ರಮೇಶ್‌.  

“ದಶರಥ’ ಚಿತ್ರದಲ್ಲಿ ನಟ ರವಿಚಂದ್ರನ್‌ ಅಡ್ವೋಕೆಟ್‌ ಆಗಿ “ಲಾ’ ಗೆ ಹೊಸ ಡೆಫಿನೇಷನ್‌ ಕೊಡುತ್ತಾರೆ ಅನ್ನೋದು ನಿರ್ದೇಶಕರ ಮಾತು. ಅಂದಹಾಗೆ, ಚಿತ್ರದಲ್ಲಿ ಅಡ್ವೋಕೆಟ್‌ “ದಶರಥ’ ಎರಡು ಪಾಲಿಸಿಯನ್ನು ಪಾಲಿಸಿಕೊಂಡು ಬರುತ್ತಾರಂತೆ. ಒಂದು “ಲಾ’ ಅಂದ್ರೆ “ಲವ್‌ ಆ್ಯಂಡ್‌ ವಿನ್‌’ (ಪ್ರೀತಿಯಿಂದ ತಿದ್ದಿ ಗೆಲ್ಲುವುದು) ಮತ್ತೂಂದು “ಲಾ’ ಅಂದ್ರೆ, “ಲೀಗಲಿ ಅನೌನ್ಸ್‌ ವಾರ್‌’ (ಕಾನೂನು ಹೋರಾಟ) ಅಂತೆ. ಚಿತ್ರದ ಮೊದಲರ್ಧ ಫ್ಯಾಮಿಲಿ ಡ್ರಾಮಾವಾದ್ರೆ, ದ್ವಿತೀಯಾರ್ಧ ಸೆಕೆಂಡ್‌ ಕೋರ್ಟ್‌ ರೂಮ್‌ ಡ್ರಾಮಾ ಚಿತ್ರದಲ್ಲಿದೆಯಂತೆ.  

Advertisement

ರಿಲೀಸ್‌ಗೆ ಕೌಂಟ್‌ ಡೌನ್‌: ಸದ್ಯ ಭರದಿಂದ ಪ್ರಮೋಷನ್‌ ಕೆಲಸಗಳಲ್ಲಿ ನಿರತವಾಗಿರುವ “ದಶರಥ’ ಚಿತ್ರವನ್ನು ತೆರೆಗೆ ತರಲು ಚಿತ್ರತಂಡ ತೆರೆಮರೆಯಲ್ಲಿ ಸಾಕಷ್ಟು ತಯಾರಿ ಮಾಡಿಕೊಳ್ಳುತ್ತಿದೆ. ಚಿತ್ರತಂಡದ ಮೂಲಗಳ ಪ್ರಕಾರ “ದಶರಥ’ ಇದೇ ಏಪ್ರಿಲ್‌ 5ರಂದು ತೆರೆಗೆ ಬರೋದು ಪಕ್ಕಾ ಆಗಿದೆ. ಒಟ್ಟಾರೆ “ದಶರಥ’ನ ರಿಲೀಸ್‌ಗೆ ಕೌಂಟ್‌ ಡೌನ್‌ ಶುರುವಾಗಿದ್ದು “ದಶರಥ’ನ ಲಾ ಫಾರ್ಮುಲಾ ಎಷ್ಟರ ಮಟ್ಟಿಗೆ ವರ್ಕೌಟ್‌ ಆಗಲಿದೆ ಅನ್ನೋದು ಏಪ್ರಿಲ್‌ ಮೊದಲ ವಾರ ಗೊತ್ತಾಗಲಿದೆ.   

ಬಹಳ ವರ್ಷಗಳ ನಂತರ ರವಿಚಂದ್ರನ್‌ ಅವರನ್ನು ಮತ್ತೂಮ್ಮೆ ಈ ಚಿತ್ರದಲ್ಲಿ ಅಡ್ವೋಕೆಟ್‌ ಗೆಟಪ್‌ನಲ್ಲಿ ನೋಡಬಹುದು. “ದೃಶ್ಯ’ ಚಿತ್ರದ ನಂತರ ರವಿಚಂದ್ರನ್‌ ಅವರನ್ನು ಇಷ್ಟಪಡುವ ದೊಡ್ಡ ಸಂಖ್ಯೆಯ ಫ್ಯಾಮಿಲಿ ಆಡಿಯನ್ಸ್‌ ಇದ್ದಾರೆ. ಅಂತಹ ಆಡಿಯನ್ಸ್‌ಗೆ ರವಿಚಂದ್ರನ್‌ ಅವರ “ದಶರಥ’ ಪಾತ್ರ ಖಂಡಿತಾ ಇಷ್ಟವಾಗಲಿದೆ ಎಂಬ ಭರವಸೆ ಇದೆ. 
-ಎಂ.ಎಸ್‌ ರಮೇಶ್‌, ನಿರ್ದೇಶಕ

Advertisement

Udayavani is now on Telegram. Click here to join our channel and stay updated with the latest news.

Next