Advertisement

ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ವಿರುದ್ಧ ದಸಂಸ ಧರಣಿ

01:08 PM Feb 21, 2018 | Team Udayavani |

ಮೈಸೂರು: ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಪ್ರಭಾ ಅವರನ್ನು ವಜಾಗೊಳಿಸುವಂತೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಸದಸ್ಯರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಇಲಾಖೆ ಅಧಿಕಾರಿಯಾಗಿರುವ ಪ್ರಭಾ ಅವರು ಹಿಂದುಳಿದವರ ಅನುಕೂಲಕ್ಕಾಗಿ ಯಾವುದೇ ಕೆಲಸಗಳನ್ನು ಮಾಡದೇ, ಕೇವಲ ಕಾಲಹರಣ ಮಾಡುತ್ತಿದ್ದಾರೆ.

Advertisement

ಇಲಾಖೆ ಅಧಿಕಾರವನ್ನು ತಮ್ಮ ವೈಯಕ್ತಿಕ ಲಾಭಕ್ಕಾಗಿ ಹಾಗೂ ದುಡ್ಡು ಮಾಡುವ ಉದ್ದೇಶಕ್ಕಾಗಿ ಮಾತ್ರ ಬಳಸಿಕೊಳ್ಳುತ್ತಿರುವ ಈ ಅಧಿಕಾರಿ, ಪರಿಶಿಷ್ಟ ಜಾತಿಗೆ ಸೇರಿದ 42 ಅಲೆಮಾರಿ ಸಮುದಾಯಗಳಿಗೆ ಸರ್ಕಾರ ಘೋಷಿಸಿದ ಪ್ಯಾಕೇಜ್‌ ಹಣವನ್ನು ಬಿಡುಗಡೆ ಮಾಡದೇ ಸರ್ಕಾರಕ್ಕೆ ವಾಪಸ್‌ ಕಳುಹಿಸುವ ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿ ವಿವಿಧ ಘೋಷಣೆಗಳನ್ನು ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರಕ್ಕೆ ವಂಚನೆ: ಹೊರಗುತ್ತಿಗೆ ಆಧಾರದಲ್ಲಿ ಅಡುಗೆ ಸಹಾಯಕರು ಮತ್ತು ಇತರೆ ನೌಕರರನ್ನು ನೇಮಿಸಿಕೊಳ್ಳದಿದ್ದರೂ ಬೇನಾಮಿ ಹೆಸರಿನಲ್ಲಿ ಸರ್ಕಾರವನ್ನು ವಂಚಿಸಿದ್ದಾರೆ. ಕ್ರಿಮಿನಲ್‌ ಹಿನ್ನೆಲೆ ಹೊಂದಿರುವವರನ್ನು ತಾಲೂಕುಗಳಿಗೆ ಸಹಾಯಕ ನಿರ್ದೇಶಕರುಗಳನ್ನಾಗಿ ತಲಾ 1.5 ಲಕ್ಷ ರೂ.ಗಳ ಲಂಚಪಡೆದು ನೇಮಿಸಿದ್ದು, ದಲಿತರ ಅಭಿವೃದ್ಧಿಯ ಕೋಟ್ಯಂತರ ರೂ.ಗಳನ್ನು ಲೂಟಿ ಮಾಡಿರುವ ಇವರನ್ನು ಈ ಕೂಡಲೇ ಸೇವೆಯಿಂದ ವಜಾಗೊಳಿಸುವ ಮೂಲಕ ದಲಿತರ ದೌರ್ಜನ್ಯ ಪ್ರಕರಣದಡಿಯಲ್ಲಿ ಬಂಧಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ದಸಂಸ ಮುಖಂಡರಾದ ಶಂಭುಲಿಂಗಸ್ವಾಮಿ, ರತ್ನಪುರಿ ಪುಟ್ಟಸ್ವಾಮಿ, ಬೆಟ್ಟಯ್ಯಕೋಟೆ, ಉಮಾ ಮಹದೇವ, ಹೆಗ್ಗನೂರು ನಿಂಗರಾಜು, ಬಸವರಾಜು, ಶಿವಸ್ವಾಮಿ, ಕಿರಣ್‌ ಕುಮಾರ್‌, ಯಡಕೊಳ ಮಹದೇವಸ್ವಾಮಿ, ಸೋಮಣ್ಣ ಕುಪ್ಪೇಗಾಲ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next