Advertisement

Dasara Special: ಐಟಿ ಸಿಟಿಯಲ್ಲಿ ಗೊಂಬೆಗಳ ದರ್ಬಾರ್‌ ಆರಂಭ

08:25 AM Oct 15, 2023 | Team Udayavani |

ಬೆಂಗಳೂರು: ಮೈಸೂರಿನಲ್ಲಿ ವಿಶ್ವವಿಖ್ಯಾತ ದಸರಾ ಸಂಭ್ರಮ ಆರಂಭ ಆಗುತ್ತಿದ್ದಂತೆ ಇತ್ತ ಐಟಿ ಸಿಟಿ ಬೆಂಗಳೂರಿನ ಮನ- ಮನೆಗಳಲ್ಲಿ ಗೊಂಬೆ ಪ್ರದರ್ಶನ ಕಳೆಕಟ್ಟಿದೆ. ನಗರದ ಮಾರುಕಟ್ಟೆಗಳಲ್ಲಿ ಅಷ್ಟಲಕ್ಷ್ಮೀ, ದಶಾವತಾರ, ಪಟ್ಟದ ಗೊಂಬೆ ಹೀಗೆ ವಿವಿಧ ರೀತಿಯ ಬೊಂಬೆಗಳ ಮಾರಾಟ ಆಗುತ್ತಿದೆ. ಕೆಲವರು ಮನೆಗಳಲ್ಲಿ ಪ್ರತಿವರ್ಷ ಒಂದೊಂದು ವಿಷಯ ಆಧಾರಿತ ಗೊಂಬೆಗಳನ್ನು ಕೂರಿಸುತ್ತಾರೆ.

Advertisement

ಹಂಪಿಯ ಒಂದು ನೋಟ: 17 ವರ್ಷಗಳಿಂದ ಒಂದೊಂದು ಮಾಹಿತಿಯೊಂದಿಗೆ ಗೊಂಬೆ ಪ್ರದರ್ಶನಕ್ಕೆ ಇಡುತ್ತಿರುವ ನಗರದ ಬಸವನಗುಡಿ ನಿವಾಸಿ ಸವಿತಾ ಶ್ರೀರಾಮ್‌ ಅವರ ಮನೆಯಲ್ಲಿ ಈ ಬಾರಿ ವಿಶ್ವಪ್ರಸಿದ್ಧ ಐತಿಹಾಸಿಕ ಸ್ಥಳ “ಹಂಪಿ’ ವಿಶೇಷತೆಯನ್ನು ಬಿಂಬಿಸಿದ್ದಾರೆ. ಇದರಲ್ಲಿ ಮುಖ್ಯವಾಗಿ ಪೇಪರ್‌, ಕಾರ್ಡ್‌ಬೋರ್ಡ್‌, ಥರ್ಮಕೋಲು ಮುಂತಾದ ವಸ್ತುಗಳನ್ನು ಉಪ ಯೋಗಿಸಿ ತಯಾರಿಸಿದ ಹನುಮಂತನ ಜನ್ಮಸ್ಥಳ ಅಂಜನಾದ್ರಿ ಬೆಟ್ಟ, ಶಬರಿ ಶ್ರೀರಾಮನಿಗಾಗಿ ಕಾಯುತ್ತಿದ್ದ ಜಾಗ ಪಂಪ ಸರೋವರ, ವಿರೂಪಾಕ್ಷ ದೇವಸ್ಥಾನ ಹಾಗೂ ಕಲ್ಲಿನ ರಥವನ್ನು ಪ್ರದ ರ್ಶನಕ್ಕೆ ಇಡಲಾಗಿದೆ. ಜತೆಗೆ ಏಳು ಮೆಟ್ಟಿಲು ಗಳನ್ನು ಸಿದ್ಧಪಡಿಸಿ, ಕೃಷ್ಣನ ಜೀವನ ಚರಿತ್ರೆ ವಿವರಿಸುವಂತಹ ಗೊಂಬೆಗಳನ್ನು ಕೂರಿಸ ಲಾಗಿದೆ. ಅಷ್ಟೇ ಅಲ್ಲದೆ, ಮೈಸೂರು ಅರಮನೆ, ಚಾಮುಂಡೇಶ್ವರಿ, ವಿದೇಶ ಗಳಿಂದ ತಂದಿರುವ ಗೊಂಬೆಗಳನ್ನೂ ಒಂದೆಡೆ ಇರಿಸ ಲಾಗಿದೆ.

ಅಯೋಧ್ಯೆ ರಾಮ ಮಂದಿರ ಆಕರ್ಷಣೆ: ಗಿರಿನಗರದಲ್ಲಿರುವ ಗಿರಿಜಾ ಮತ್ತು ವೈದ್ಯನಾಥನ್‌ ಅವರ ಕುಟುಂಬಸ್ಥರು 44 ವರ್ಷಗಳಿಂದ ಆಕ ರ್ಷಕ ಬೊಂಬೆ ಪ್ರದರ್ಶಿಸುತ್ತಿದ್ದಾರೆ. ಈ ಸಲ ಅಯೋಧ್ಯೆ ಶ್ರೀರಾಮ ಮಂದಿರದ ಮರದ ಮಾದರಿ ವಿಶೇಷ ಆಕರ್ಷಣೆ ಆಗಿದ್ದು, ರಾಮನ ಪಟ್ಟಾಭಿಷೇಕದ ಗೊಂಬೆ ಕೂರಿಸಲಾಗಿದೆ. ಅಷ್ಟೇ ಅಲ್ಲದೆ, ಕೃಷ್ಣ ತರಂಗಿಣಿ, ದ್ವಾದಶ ಜ್ಯೋತಿರ್ಲಿಂಗ, ತಿರುಚಿಯ ಗಣೇಶ, ಮಾತೃಭೂದೇಶ್ವರ, ಶ್ರೀರಂಗಂ ರಂಗನಾಥ, ಸುಬ್ರಹ್ಮಣ ದೇವಸ್ಥಾನದ ಮಾದರಿ, ಪಟ್ಟದ ಬೊಂಬೆ ಪ್ರದರ್ಶಿಸಲಾಗಿದೆ.

ಕೈಲಾಸ ಪರ್ವತ,ಕೃಷ್ಣ ಲೀಲೆ, ಜಂಬೂ ಸವಾರಿ ಆಕರ್ಷಣೆ: ಜೆ.ಪಿ.ನಗರದ 1ನೇ ಹಂತದ ನಿವಾಸಿ ಪೂರ್ಣಿಮಾ ಗಿರೀಶ್‌ ಅವರ ಮನೆಯಲ್ಲಿ 22 ವರ್ಷಗಳಿಂದ ವಿವಿಧ ರೀತಿಯ ಆಕರ್ಷಕ ಗೊಂಬೆಗಳನ್ನು ಪ್ರದರ್ಶಿಸುತ್ತಾರೆ. ಈ ಬಾರಿ ವಿಶೇಷ ವಾಗಿ ಕೃಷ್ಣ ಲೀಲೆ, ಕೈಲಾಸ ಪರ್ವತ, ಮೈಸೂರು ಜಂಬೂ ಸವಾರಿ, ಮದುವೆ ಸಂಭ್ರಮ, ದಶಾವತಾರ, ನೃತ್ಯ ರೂಪಕಗಳು, ಶಂಕರಾ ಚಾರ್ಯರು, ಅಷ್ಟಲಕ್ಷ್ಮೀಯರು ಹೀಗೆ 300-350ಕ್ಕೂ ಹೆಚ್ಚು ಗೊಂಬೆಗಳನ್ನು ಪ್ರದರ್ಶಿಸಿದ್ದಾರೆ.

ಬೊಂಬೆ ಹೇಳುತೈತೆ ರಾಮಾಯಣದ ಕತೆ: ಭಾರತೀಯ ವಿದ್ಯಾಭವನವು ಕಳೆದ ಹತ್ತು ವರ್ಷಗಳಿಂದ ನಾಡಹಬ್ಬ ದಸರಾವನ್ನು ವಿಭಿನ್ನವಾಗಿ ಆಚರಿಸಿಕೊಂಡು ಬರುತ್ತಿದೆ. ಈ ವರ್ಷ ಬೊಂಬೆಗಳ ಮೂಲಕ ರಾಮಾಯಣದ ಕಥೆ ಹೇಳುವ ಪ್ರಯತ್ನ ಮಾಡಲಾಗುತ್ತಿದೆ. ಶ್ರೀರಾಮ ತನ್ನ ಪತ್ನಿ ಸೀತೆಯನ್ನು ರಾವಣ ಅಪಹರಿಸಿದ್ದರಿಂದ ಅವನನ್ನು ಕೊಂದು ಸೀತೆ ಮರಳಿ ಅಯೋಧ್ಯೆಗೆ ಕರೆತರುವ ಕಥೆಯನ್ನು ಬೊಂಬೆಗಳ ಮೂಲಕ ಕುಶಲಕರ್ಮಿಗಳಾದ ಅಪರ್ಣ ಶ್ರೀಕಾಂತ ಮತ್ತು ಅವರ ಮಗಳು ಮಧುಲಿಕಾ ಶ್ರೀವತ್ಸ ಅವರು ಪರಿಚಯಿಸಿದ್ದಾರೆ. ಈ ಪ್ರದರ್ಶನವು ಭಾರತೀಯ ವಿದ್ಯಾ ಭವನದ ಕೆಆರ್‌ಜೆ ಹಾಲ್‌ನಲ್ಲಿ ಅ.15ರಿಂದ 24ರವರೆಗೆ ಏರ್ಪಡಿಸಲಾಗಿದೆ. 500 ವಿವಿಧ ಬಗೆಯ ಆಕೃತಿಗಳ ಬೊಂಬೆಗಳು ಪ್ರದರ್ಶನದಲ್ಲಿದ್ದು. ರಾಮಾಯಣದ ಸೂಕ್ಷ್ಮ ಸಂಗತಿಗಳನ್ನು ನಮ್ಮ ಕಣ್ಣ ಮುಂದೆ ತೆರೆದಿಡಲಿವೆ. ಜೇಡಿಮಣ್ಣು, ಮರ, ಅರಳೆ, ಬಟ್ಟೆ, ಕಾಗದ ಮುಂತಾದ ಪಾರಂಪರಿಕ ವಸ್ತುಗಳಿಂದ ರೂಪುಗೊಂಡಿರುವ ಈ ಬೊಂಬೆಗಳು ಗತಕಾಲದ ವಿವರಗಳನ್ನು ಮಾತ್ರವಲ್ಲ, ಸಮಕಾಲೀನ ಬದುಕಿಗೆ ಬೇಕಾದ ಮೌಲ್ಯಗಳನ್ನು ಬಿಂಬಿಸಲಿವೆ.

Advertisement

15,000 ರೂ. ವರೆಗೂ ಗೊಂಬೆಗಳ ಮಾರಾಟ: ದಸರಾ ಎಂದರೆ ಗೊಂಬೆಗಳ ಹಬ್ಬ. ಚಿಕ್ಕ ಚಿಕ್ಕ ಗೊಂಬೆಗಳಿಂದ ದೊಡ್ಡ ಮೂರ್ತಿಗಳ ವರೆಗೂ ಕೂರಿಸಿ, ಅಲಂಕರಿಸಲಾಗು ತ್ತದೆ. ಮುಖ್ಯವಾಗಿ ಕುಂಬಾ ಭಿಷೇಕ, ಮದುವೆ ಸಡಗರದ ವಾತಾ ವರಣ, ರಾಮಾಯಣ, ಅಷ್ಟಲಕ್ಷ್ಮೀಯರು, ದಶಾವತಾರ, ಪಟ್ಟದ ಗೊಂಬೆ, ನವದುರ್ಗಿ ಯರು, ರಾಜನ ಆಸ್ಥಾನ ಹೀಗೆ ನಾನಾ ವಿಧದ ಸೆಟ್‌ಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿದ್ದು, 50 ರೂ.ಗಳಿಂದ 15,000 ರೂ.ವರೆಗೂ ಗೊಂಬೆಗಳು ಸಿಗಲಿವೆ. ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಆಗಮಿಸಿ, ಖರೀದಿಸುತ್ತಿದ್ದಾರೆ ಎಂದು ಗೊಂಬೆ ವ್ಯಾಪಾರಿ ಸೀನಾ ತಿಳಿಸುತ್ತಾರೆ.

ಪ್ರತಿ ವರ್ಷ ಗೊಂಬೆ ಪ್ರದರ್ಶನದ ವೇಳೆ ಪ್ರಹ್ಲಾದ ಚರಿತೆ, ದಶಾವತಾರ, ತಿರುಪತಿ ಬೆಟ್ಟ ಹೀಗೆ ನಮ್ಮ ಸಂಸ್ಕೃತಿ, ಐತಿಹಾಸಿಕ ಸ್ಥಳಗಳಿಗೆ ಹೆಚ್ಚು ಒತ್ತು ನೀಡಲಾಗುತ್ತದೆ. ನೆರೆಹೊರೆಯವರಿಗೆ, ಮಕ್ಕಳಿಗೆ ಆ ಸ್ಥಳ ಮಾಹಿತಿ ತಿಳಿಸಿಕೊಡುವುದು ನಮ್ಮ ಮುಖ್ಯ ಉದ್ದೇಶ. ಸವಿತಾ ಶ್ರೀರಾಮ್‌, ಬಸವನಗುಡಿ ನಿವಾಸಿ

ಭಾರತಿ ಸಜ್ಜನ್‌

Advertisement

Udayavani is now on Telegram. Click here to join our channel and stay updated with the latest news.

Next