ಕಲಬುರಗಿ: ನಗರದಲ್ಲಿ ನಾಡಹಬ್ಬ ದಸರಾ ಆಚರಣೆ ಸಡಗರ, ಸಂಭ್ರಮ ಮನೆ ಮಾಡಿದೆ. ನವರಾತ್ರಿ ಒಂಭತ್ತು ದಿನಗಳಲ್ಲಿ ಪ್ರಮುಖವಾಗಿರುವ ಆಯುಧಪೂಜೆ ಮತ್ತು ವಿಜಯದಶಮಿ ಆಚರಿಸಲು ಜನತೆ ಭರದ ಸಿದ್ಧತೆ ಮಾಡಿಕೊಂಡಿದ್ದಾರೆ.
ಅ.18ರಂದು ಆಯುಧ ಪೂಜೆ ಹಾಗೂ ಅ.19ರಂದು ವಿಜಯದಶಮಿ ಹಿನ್ನೆಲೆಯಲ್ಲಿ ಗುರುವಾರ ನಗರದ ಸೂಪರ್ ಮಾರ್ಕೆಟ್ ಮಾರುಕಟ್ಟೆ ಗಿಜಿಗುಡುತ್ತಿತ್ತು. ಹೂವು, ಹಣ್ಣು, ಕಬ್ಬು, ಪೂಜಾ ಸಾಮಗ್ರಿಗಳ ಮಾರಾಟ ಮತ್ತು ಖರೀದಿ ಜೋರಾಗಿತ್ತು.
ಹೂವು ಹಾಗೂ ಹಣ್ಣುಗಳ ಬೆಲೆ ಏರಿಕೆ ನಡುವೆಯೂ ಜನತೆ ಖರೀದಿಯಲ್ಲಿ ತೊಡಗಿದ್ದರು. ಸೇಬು, ದಾಳಿಂಬೆ, ಮೋಸಂಬಿ, ಚಿಕ್ಕು, ಪಪ್ಪಾಯಿ, ಬಾಳೆಹಣ್ಣು ಬೆಲೆ ದಿನನಿತ್ಯಕ್ಕಿಂತ ಸ್ಪಲ್ವ ಹೆಚ್ಚಾಗಿದೆ. ಮಲ್ಲಿಗೆ, ಕನಕಾಂಬರ, ಗುಲಾಬಿ, ಚೆಂಡು ಹೂವುಗಳ ದರವೂ ಅಧಿಕವಾಗಿತ್ತು. ಆದರೂ, ಹಬ್ಬಕ್ಕೆಂದು ಖರೀದಿ ಮಾಡಬೇಕಿರುವುದು ಅನಿರ್ವಾಯ ಎಂದರು.
ಜಯಶ್ರೀ ಹಿರೇಮಠ, ಸುಬ್ಬರಾಜು ಕುಲಕರ್ಣಿ, ಪ್ರಹ್ಲಾದರಾವ್ ದೇಶಪಾಂಡೆ ಹಾಗೂ ಮತ್ತಿತರ ಗ್ರಾಹಕರು. ಆಯುಧಪೂಜೆ ದಿನ ವಾಹನಗಳ ಪೂಜೆಗಳೆಂದು ಚೆಂಡು ಹೂವು, ಬಾಳೆದಿಂಡು, ಕುಂಬಳಕಾಯಿ, ನಿಂಬೆ ಹಣ್ಣು ಖರೀದಿ ಭರಾಟೆ ಜೋರಾಗಿತ್ತು. ಜತೆಗೆ ತರಕಾರಿ, ಸಿಹಿ ದಿನಸಿ, ಹೊಸ ಬಟ್ಟೆಗಳ ಖರೀದಿಯಲ್ಲಿ ಜನರು ತೊಡಗಿಸಿಕೊಂಡಿದ್ದರು.
ಘಟ ಸರಿಸುವುದು: ನವರಾತ್ರಿ ಪ್ರಯುಕ್ತ ಮನೆಯಲ್ಲಿ ಘಟ ಸ್ಥಾಪಿಸಿ ಒಂಭತ್ತು ದಿನವೂ ಪೂಜಿಸಲಾಗುತ್ತದೆ. ಹುತ್ತದ ಮಣ್ಣಿನಲ್ಲಿ ಹೆಸರು, ಕಡಲೆ, ಭತ್ತ, ಗೋಧಿ, ಉದ್ದು, ಎಳ್ಳು, ತೊಗರಿ, ಅವರೆ, ಹುರುಳಿ ನವ ಧಾನ್ಯ ಕಲಸಿ, ಅದರ ಮೇಲೆ ಎರಡು ಮಣ್ಣಿನ ಮಡಿಕೆಗಳನ್ನು ನೀರು ತುಂಬಿ ಇಡಲಾಗುತ್ತದೆ.
ಒಂಭತ್ತು ದಿನಗಳ ಕಾಲ ಹಗಲು-ರಾತ್ರಿ ನಿರಂತರವಾಗಿ ದೀಪ ಉರಿಸಲಾಗುತ್ತದೆ. ಒಂಭತ್ತನೇ ದಿನದಂದು ರಾತ್ರಿ ಪೂಜೆ ಮಾಡಿ ಘಟ ಸರಿಸುತ್ತಾರೆ. ಒಂಭತ್ತು ದಿನದಲ್ಲಿ ಬೆಳೆದ ನವ ಧಾನ್ಯಗಳ ಸಸಿಗಳನ್ನು ಮರುದಿನ ಬಾವಿಯಲ್ಲಿ ಬಿಡುವುದು ವಾಡಿಕೆ.