ಮೈಸೂರು: ನಾಡಹಬ್ಬ ದಸರಾ ಮಹೋತ್ಸವಕ್ಕೆ ಕೆಲವು ದಿನಗಳಷ್ಟೇ ಬಾಕಿ ಉಳಿದಿದ್ದು, ನಗರಕ್ಕಾಗಮಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ. ನಗರದ ಪ್ರಮುಖ ಪ್ರವಾಸಿತಾಣವಾದ ಚಾಮುಂಡಿಬೆಟ್ಟದಲ್ಲಿ ಮಂಗಳವಾರ ಪ್ರವಾಸಿಗರ ದಂಡೇ ಹರಿದು ಬಂದಿತು.
ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಮೈಸೂರಿಗೆ ಆಗಮಿಸಿರುವ ಭಕ್ತರು ಮಂಗಳವಾರ ಬೆಳಗ್ಗಿನಿಂದಲೇ ಚಾಮುಂಡಿಬೆಟ್ಟಕ್ಕೆ ಬೇಟಿ ನೀಡಿ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದರು. ಮುಂಜಾನೆಯಿಂದಲೇ ಅಪಾರ ಸಂಖ್ಯೆ ಭಕ್ತರು ಆಗಮಿಸಿದ ಪರಿಣಾಮ ಚಾಮುಂಡೇಶ್ವರಿ ದರ್ಶನಕ್ಕೆ ಭಕ್ತರು ಮುಗಿಬಿದ್ದರು. 100 ರೂ., 30 ರೂ. ಪಾವತಿಸಿ ಟಿಕೆಟ್ ಖರೀದಿಸಿದ ಭಕ್ತರ ಜತೆಗೆ ಧರ್ಮದರ್ಶನಕ್ಕಾಗಿ ನಿಂತಿದ್ದ ಭಕ್ತರ ಸಂಖ್ಯೆಯೂ ಹೆಚ್ಚಾಗಿತ್ತು.
ನವರಾತ್ರಿ ಹಿನ್ನೆಲೆಯಲ್ಲಿ ಚಾಮುಂಡೇಶ್ವರಿ ಅಮ್ಮನವರಿಗೆ ಪ್ರತಿನಿತ್ಯ ವಿವಿಧ ಅಲಂಕಾರ, ಪೂಜೆ ಮಾಡಲಾಗುತ್ತಿದೆ. ಹೀಗಾಗಿ ಅಧಿದೇವತೆಯ ದರ್ಶನಕ್ಕೆ ಹೊರ ರಾಜ್ಯ, ದೇಶಗಳಿಂದ ಪ್ರವಾಸಿಗರು ಬೆಟ್ಟಕ್ಕೆ ಆಗಮಿಸಿದ್ದರಿಂದ ಭಕ್ತರ ಸಂಖ್ಯೆಯಲ್ಲಿ ಭಾರೀ ಏರಿಕೆ ಕಂಡು ಬಂದಿತು.
ಬೆಟ್ಟಹತ್ತಿದ ಹರಿಪ್ರಿಯ: ಯುವದಸರಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರೇಕ್ಷಕರ ಮನರಂಜಿಸಿದ್ದ ನಟಿ ಹರಿಪ್ರಿಯ ಬರಿಗಾಲಿನಲ್ಲಿ ಮೆಟ್ಟಿಲು ಹತ್ತಿ ಚಾಮುಂಡಿಬೆಟ್ಟಕ್ಕೆ ತೆರಳಿ, ಬೆಳ್ಳಂಬೆಳಗ್ಗೆ ಮೆಟ್ಟಿಲುಗಳನ್ನು ಹತ್ತಿ ಬೆಟ್ಟವನ್ನೇರಿದ ಹರಿಪ್ರಿಯ ಚಾಮುಂಡಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರೆಂದರೆ ನನಗೆ ಇಷ್ಟದ ಊರು, ಬೆಟ್ಟ ಹತ್ತುವುದು ನನಗೆ ಇಷ್ಟ. ಎರಡನೇ ಬಾರಿಗೆ ಚಾಮುಂಡಿಬೆಟ್ಟ ಹತ್ತುತ್ತಿದ್ದೇನೆ ಎಂದರು.
ಸಚಿವರಿಂದ ದರ್ಶನ: ನವರಾತ್ರಿ ಉತ್ಸವ ಹಿನ್ನೆಲೆಯಲ್ಲಿ ಸಚಿವರಾದ ಎಚ್.ಡಿ.ರೇವಣ್ಣ ಹಾಗೂ ಬಂಡೆಪ್ಪ ಕಾಶಂಪೂರ ಕುಟುಂಬ ಸಮೇತರಾಗಿ ಬೆಟ್ಟಕ್ಕೆ ಆಗಮಿಸಿ ಚಾಮುಂಡೇಶ್ವರಿ ಅಮ್ಮನವರ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು.