Advertisement

ಕಣ್ಮನ ತಣಿಸುವ ದಸರಾ ವೈಭೋಗ

12:38 PM Sep 22, 2017 | |

ವಿಶ್ವವಿಖ್ಯಾತ 407ನೇ ಮೈಸೂರು ದಸರಾ ಮಹೋತ್ಸವಕ್ಕೆ ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ, ನಿತ್ಯೋತ್ಸವ ಕವಿ ಪ್ರೊ.ಕೆ.ಎಸ್‌.ನಿಸಾರ್‌ ಅಹಮದ್‌ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಇದೇ ವೇಳೆ ಆಹಾರ ಮೇಳ, ಚಲನ ಚಿತ್ರೋತ್ಸವ, ಕ್ರೀಡಾಕೂಟ ಮತ್ತಿತರ ದಸರಾ ಕಾರ್ಯಕ್ರಮಗಳು ಉದ್ಘಾಟನೆಗೊಂಡವು. ಹಾಗೆಯೇ ಅರಮನೆಯಲ್ಲಿ ಯದುವೀರ್‌ ಖಾಸಗಿ ದರ್ಬಾರ್‌ ಶುರುಮಾಡಿದರು. ಮೈಸೂರಿನಲ್ಲಿ ದಸರಾ ಹಬ್ಬದ ಕಳೆಕಟ್ಟಿದ್ದು ನೋಡುಗರನ್ನು ಕೈ ಬೀಸಿ ಕರೆಯುತ್ತಿದೆ… 

Advertisement

ಮೈಸೂರು: ಜಾತಿ, ಧರ್ಮ, ಧಾರ್ಮಿಕತೆಯನ್ನು ಮೀರಿದ ಸಾಂಸ್ಕೃತಿಕ ಆಚರಣೆ ಮೈಸೂರು ದಸರಾ ಎಂದು ನಿತ್ಯೋತ್ಸವ ಕವಿ ಪ್ರೊ.ಕೆ.ಎಸ್‌.ನಿಸಾರ್‌ ಅಹಮದ್‌ ಬಣ್ಣಿಸಿದರು. ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಗುರುವಾರ ಬೆಳಗ್ಗೆ 8.45ರ ತುಲಾಲಗ್ನದಲ್ಲಿ ದೇವಿಯ ದರ್ಶನಪಡೆದು, ವಿಶೇಷ ಪೂಜೆ ಸಲ್ಲಿಸಿ ಜ್ಯೋತಿ ಬೆಳೆಗಿಸುವ ಮೂಲಕ ದಸರಾ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.

ಮೈಸೂರು ದಸರಾ ಆಚರಣೆಯಲ್ಲಿ ಧಾರ್ಮಿಕತೆ ಮೀರಿದ ಸಾಂಸ್ಕೃತಿಕತೆ ಇದೆ. ಹಜ್‌ ಯಾತ್ರೆಯನ್ನು ಕೇವಲ ಮುಸ್ಲಿಮರು ಮಾಡುತ್ತಾರೆ. ಕುಂಭಮೇಳವನ್ನು ಇನ್ನೊಂದು ಧರ್ಮದವರು ಮಾಡುತ್ತಾರೆ. ಆದರೆ, ಇಲ್ಲಿ ಜಾತೀ, ಧರ್ಮವನ್ನು ಮೀರಿ ಎಲ್ಲರೂ ದಸರೆ ಆಚರಿಸುವ ಮೂಲಕ ಬರುವ ಪ್ರವಾಸಿಗರು ಪರಂಪರೆಯನ್ನು ಜಗತ್ತಿನಾದ್ಯಂತ ಸಾರುತ್ತಾರೆಂದರು.

ಬೆಂಗಳೂರು ಬೆರಿಕೆ ನಗರ. ಕಾಸ್ಮೋಪಾಲಿಟನ್‌ ಸಿಟಿಯಲ್ಲಿ ಭಾಷೆಯನ್ನು ಕುರಿತು ಮೈಸೂರಿನಲ್ಲಿ ಇನ್ನೂ ಅಗ್ರಹಾರಗಳೆಲ್ಲಾ ಹಾಗೆಯೇ ಇವೆ. ಹೀಗಾಗಿ ಮೈಸೂರು ಸಾಂಸ್ಕೃತಿಕ ನಗರಿ ಎಂದು ಬಣ್ಣಿಸಿದರು. ಕನ್ನಡದ ಅಸ್ಮಿತೆ ಸಾರುವಂತಹ ದೊಡ್ಡ ಕಾರ್ಯಕ್ರಮ ಇದು ಎಂದ ಅವರು, ತನಗೆ ಪದ್ಮಶ್ರೀ ಪ್ರಶಸ್ತಿ, ನಾಡೋಜ ಗೌರವ ಸಿಕ್ಕಿರಬಹುದು. ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷನಾಗಿರಬಹುದು, ಆದರೆ, ನಾಡಹಬ್ಬವನ್ನು ಉದ್ಘಾಟಿಸಿದ್ದು ಹೆಮ್ಮೆ ತಂದಿದೆ ಎಂದು ಹೇಳಿದರು. 

ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ, ರಾಜ್ಯ, ರಾಷ್ಟ್ರ ಹಾಗೂ ಹೊರ ರಾಷ್ಟ್ರದವರೆಗೆ ಖ್ಯಾತಿ ಪಡೆದ ದಸರಾ, ಜನರ ಉತ್ಸವ. ಈ ಬಾರಿ ಸಂವಿಧಾನ-ಪ್ರಜಾಸತ್ತೆ- ಸಮಾನತೆ ಆಶಯದೊಂದಿಗೆ ದಸರಾ ಆಚರಿಸಲಾಗುತ್ತಿದ್ದು, ಕೋಮುಸೌಹಾರ್ದ, ಸಮಾನತೆ ಪ್ರತಿಬಿಂಬಿಸುವ ದ್ಯೋತಕವಾಗಿ ಪ್ರೊ.ನಿಸಾರ್‌ ಅಹಮದ್‌ರಿಂದ ದಸರಾ ಉದ್ಘಾಟಿಸಲಾಗಿದೆ ಎಂದು ಹೇಳಿದರು.

Advertisement

ಸಂಸದ ಪ್ರತಾಪ್‌ಸಿಂಹ, ಕನ್ನಂಬಾಡಿ ಕಟ್ಟೆಯಿಂದ ಹಿಡಿದು ಮೈಸೂರಿನ ಅಭಿವೃದ್ಧಿಗೆ ಯದುವಂಶದ ಕೊಡುಗೆ ಅಪಾರ. ಅವರು ಹಾಕಿಕೊಟ್ಟ ದಸರಾ ಪರಂಪರೆಯಿಂದ ಪ್ರವಾಸೋದ್ಯಮ ಅಭಿವೃದ್ಧಿಯಾಗುತ್ತಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಶಾಸಕ ಜಿ.ಟಿ.ದೇವೇಗೌಡ, ಮೈಸೂರಿಗೆ ಮಹಾರಾಜರ ಕೊಡುಗೆ ಅಪಾರ. ಹೀಗಾಗಿ ಅವರ ಹೆಸರಲ್ಲಿ ಕಾರ್ಯಕ್ರಮ ರೂಪಿಸಿ. ಚಾಮುಂಡಿಬೆಟ್ಟ ಗ್ರಾಮ ಹಾಗೂ ಉಂಡುವಾಡಿ ಶಾಶ್ವತ ಕುಡಿಯುವ ನೀರಿನ ಯೋಜನೆ ಜಾರಿ ಮಾಡಿಕೊಡುವಂತೆ ಸಿಎಂ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿದರು. 

ಭಾವುಕರಾದ ನಿತ್ಯೋತ್ಸವ ಕವಿ
ಕನ್ನಡ ನಾಡಿನ ಮೂರ್ತಿಗಾಗಿ ಮುಗಿದ ಕೈಯೂ ದುಡಿದು ಸಲ್ಲುವಂತೆಯೇ.. ಎಲ್ಲಾ ಹೊನ್ನು ಎಂಬಂತೆ ಎಂಬ ದ.ರಾ.ಬೇಂದ್ರೆ ಅವರ ಕಾವ್ಯದ ಪಂಕ್ತಿಯನ್ನು ಉಲ್ಲೇಖೀಸಿದ ಕವಿ ನಿಸಾರ್‌ ಅಹಮದ್‌, ಕನ್ನಡ ತಾಯಿ ಆಡಿಸಿದಂತೆ ನಾನು ಆಡುತ್ತಿದ್ದೇನೆ. ಇದೊಂದು ಚಾರಿತ್ರಿಕ ಘಟನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತನಗೆ 33 ವರ್ಷಗಳಿಂದ ಗೆಳೆಯರು. ಅವರು ದಸರಾ ಉದ್ಘಾಟನೆಗೆ ನನ್ನನ್ನು ಆಯ್ಕೆ ಮಾಡಿದ್ದಕ್ಕೆ ಚಿರಋಣಿ. ಮೈಸೂರು ಅರಸರ, ಕನ್ನಡದ ಕುಲದೇವತೆ ದುರ್ಗೆ ಸನ್ನಿಧಿಯಲ್ಲಿ ನಿಂತು ಮಾತನಾಡುವುದೇ ಸುಯೋಗ ಎಂದು ಭಾವುಕರಾದ ಅಹಮದ್‌, ಈ ಸಂತೋಷ, ಪುಳಕದಲ್ಲಿ ಮಾತನಾಡಲೇ ಆಗುತ್ತಿಲ್ಲ ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next