ಮಂಗಳೂರು/ ಉಡುಪಿ: ಸರಣಿ ರಜೆ ಹಾಗೂ ವಾರಾಂತ್ಯದ ಹಿನ್ನೆಲೆಯಲ್ಲಿ ರವಿವಾರ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಪ್ರವಾಸಿ ಕೇಂದ್ರಗಳಲ್ಲಿ ಜನದಟ್ಟಣೆ ಕಂಡು ಬಂದಿದೆ.
ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಮಂಗಳೂರು ನಗರ, ಪಣಂಬೂರು ಬೀಚ್, ಉಡುಪಿಯ ಮಲ್ಪೆ ಬೀಚ್, ಸೈಂಟ್‌ಮೇರಿಸ್ ದ್ವೀಪ, ಮರವಂತೆ, ತ್ರಾಸಿ, ಕೋಡಿ ಬೀಚ್, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ ಮುಂತಾದಡೆ ಅಪಾರ ಸಂಖ್ಯೆಯಲ್ಲಿ ಜನರು ಕಂಡು ಬಂದರು.
ಮಂಗಳೂರಿನ ಕುದ್ರೋಳಿ ದೇವಸ್ಥಾನದ ದಸರಾ ಶೋಭಾಯಾತ್ರೆ ಹಾಗೂ ಮಂಗಳಾದೇವಿ ದೇವಸ್ಥಾನದಲ್ಲಿ ನವರಾತ್ರಿ ರಥೋತ್ಸವವೂ ರವಿವಾರ ನಡೆಯಲಿರುವ ಕಾರಣ ಜನರ ಓಡಾಟ ಹೆಚ್ಚಾಗಿತ್ತು. ಪಕ್ಕೆ ಪ್ರವಾಸಿಗರ ದಂಡೆ ಹರಿದು ಬಂದಿದೆ.
ಮಲ್ಪೆ ಬೀಚ್‌ಗೆ ಬೆಂಗಳೂರು, ಮೈಸೂರು, ಮಂಡ್ಯ ಹಾಸನ ಜಿಲ್ಲೆಗಳಿಂದಲೂ ಅಪಾರ ಸಂಖ್ಯೆಯ ಪ್ರವಾಸಿಗರು ಅಗಮಿಸುತ್ತಿದ್ದು, ಬೀಚ್ ಸಂಪರ್ಕದ ರಸ್ತೆಯಲ್ಲೂ ವಾಹನದಟ್ಟಣೆ ಕಂಡುಬಂತು. ಕಳೆದ ಮೂರ್‍ನಾಲ್ಕು ದಿನಗಳಿಂದಲ್ಲೂ ಇಲ್ಲಿ ಜನದಟ್ಟಣೆ ಹೆಚ್ಚಾಗಿಯೇ ಇದೆ.
ಕೊಲ್ಲೂರಿನಲ್ಲಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ರವಿವಾರ 10 ಸಾವಿರಕ್ಕಿಂತಲೂ ಹೆಚ್ಚಿನ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು. ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿ ಮಂಜುನಾಥ ಪ್ರಸಾದ್, ಮಲಯಾಳಂ ಚಿತ್ರನಟ ಜಯಸೂರ್ಯ ಶ್ರೀದೇವಿ ಮುಂತಾದ ಹಲವು ಗಣ್ಯರೂ ದೇವಿಯ ದರ್ಶನ ಪಡೆದರು.
ಕುಂದಾಪರ ಭಾಗದ ಕಮಲಶಿಲೆ ಸಹಿತ ಪ್ರಮುಖ ದೇವಸ್ಥಾನ, ಬೈಂದೂರು ಸಮೀಪದ ಸೋಮೇಶ್ವರ ಬೀಚ್, ಒತ್ತಿನೆಣೆ ನಿಸರ್ಗಧಾಮದಲ್ಲೂ ಪ್ರವಾಸಿಗರ ಸಂಖ್ಯೆ ಹೆಚ್ಚಿತ್ತು.