Advertisement
ಒಂದು ದಿನ ನಮ್ಮಲ್ಲಿ ಒಬ್ಬನಿಗೆ ಜ್ವರ ಬಂದು, “ಇವತ್ತು ನಾನು ಶಾಲೆಗೆ ಬರುವುದಿಲ್ಲ’ ಎಂದು ಹೇಳಿ ಮನೆಯಲ್ಲೇ ಉಳಿದುಬಿಟ್ಟ. ನನಗೂ ಹೀಗೆಯೇ ಜ್ವರ ಬಂದರೆ ಒಳ್ಳೆಯದಿತ್ತು. ಮನೆಯಲ್ಲೇ ಇರಬಹುದಿತ್ತು ಎಂದು ಅನಿಸಿತು. ಸರಿ, ನಾವೆಲ್ಲರೂ ಸೇರಿ “ಇವತ್ತು ಶಾಲೆಗೆ ಹೋಗುವುದು ಬೇಡ’ ಎಂದು ನಿರ್ಧರಿಸಿದೆವು. ಹಾಗಂತ ಮನೆಗೆ ಹೋದರೆ ಅಮ್ಮನಿಂದ ಪೆಟ್ಟು ತಿನ್ನಬೇಕಾಗುತ್ತದೆ. ಒಬ್ಬ ಅಲ್ಲೇ ಸ್ವಲ್ಪ ದೂರದಲ್ಲಿ ಇರುವ ಅಜ್ಜಿ ಮನೆಗೆ ಹೋಗುತ್ತೇನೆಂದ. ಅದಕ್ಕೆ ನಾನು ಹೇಳಿದೆ, “ಎಲ್ಲಿಯೂ ಹೋಗುವುದು ಬೇಡ. ಇಲ್ಲೇ ಇರುವ ಗುಡ್ಡದಲ್ಲಿ ನಾವೆಲ್ಲ ಕುಳಿತುಕೊಂಡು ಸಮಯ ಕಳೆಯೋಣ’ ಎಂದೆ. ಎಲ್ಲರೂ ಒಪ್ಪಿದರು. ಅಲ್ಲೇ ಸೇರಿ ಸಮಯ ಕಳೆದೆವು. ಸ್ವಲ್ಪ ಹೊತ್ತಿನಲ್ಲಿ ನಮಗೆ ಹಸಿವೆಯಾಗಲು ಶುರುವಾಯಿತು. ಏನು ಮಾಡುವುದು ನಮ್ಮಲ್ಲಿ ತಿನ್ನಲೂ ಏನೂ ಇರಲಿಲ್ಲ. ಹಾಗೆ ಅತ್ತಿತ್ತ ಕಣ್ಣು ಆಡಿಸುವಾಗ ಗಿಡಗಳ ಪೊದೆಯಲ್ಲೆಲ್ಲ ಸಿಕ್ಕಿದ ಹಣ್ಣುಗಳನ್ನು ತಿಂದು ಪಕ್ಕದಲ್ಲಿದ್ದ ಕೆರೆಯ ನೀರನ್ನು ಕುಡಿದು ಹೊಟ್ಟೆ ತಂಪಾಗಿಸಿದೆವು. ನಂತರ ಎಲ್ಲರೂ ಸೇರಿ ಆಟ ಆಡಿದೆವು. ಹಾಗೆ ಆಡುತ್ತ ಆಡುತ್ತ ಎಲ್ಲೆಲ್ಲೂ ಓಡಾಡುವಾಗ ಗುಡ್ಡದ ಪಕ್ಕದ ಮನೆಯವರ್ಯಾರೋ ನೋಡಿ ನಮ್ಮ ಬಗ್ಗೆ ನಮ್ಮ ಮನೆಗೆ ಹಾಗೂ ಶಾಲೆಗೆ ಹೇಳಿಬಿಟ್ಟರು. ನಾನು ಮನೆಗೆ ಕಾಲಿಡುತ್ತಿದ್ದಂತೆ ನನ್ನ ಅಮ್ಮ ಒಂದು ದೊಡ್ಡ ಬೆತ್ತದಿಂದ ಬೆನ್ನಿಗೆ ಎರಡು ಬಾರಿಸಿದರು. ಶಾಲೆಗೆ ಹೋಗದೆ ಗುಡ್ಡೆಯಲ್ಲಿ ಕಾಲಕಳೆಯಲು ನಿಮಗೆ ಯಾರು ಹೇಳಿದ್ದು ಎಂದು ಚೆನ್ನಾಗಿ ಬೈಯ್ದರು. ಶಾಲೆಯಲ್ಲೂ ಮೇಸ್ಟ್ರೆ ನಮಗೆ ಕೈಗೆ ಮುಂದಕ್ಕೆ ಚಾಚಲು ಹೇಳಿ ಎರಡೆರಡು ಪೆಟ್ಟು ಕೊಟ್ಟರು. ಮುಂದೆ ನಾನು ಇದರಿಂದ ಒಳ್ಳೆಯ ಪಾಠ ಕಲಿತೆ. ಶಾಲೆಗೆ ಹೋಗುವುದನ್ನು ಒಂದು ದಿನವೂ ತಪ್ಪಿಸಲಿಲ್ಲ.
ದ್ವಿತೀಯ ಪಿಯುಸಿ, ವಿವೇಕಾನಂದ ಪದವಿಪೂರ್ವ ಕಾಲೇಜು, ಎಡಪದವು