Advertisement

ದಸರಾ ಆನೆಗಳಿಗೆ ಈಗ ಹುಲಿ ಕಾರ್ಯಾಚರಣೆ ಹೊಣೆ

10:56 PM Oct 09, 2019 | Lakshmi GovindaRaju |

ಗುಂಡ್ಲುಪೇಟೆ /ಬೆಂಗಳೂರು: ಮೈಸೂರು ದಸರಾ ಮುಗಿದ ಬೆನ್ನಲ್ಲೇ ಅರ್ಜುನ ಮತ್ತು ಅಭಿಮನ್ಯು ಆನೆಗಳನ್ನು ನರಹಂತಕ ಹುಲಿಯ ಕಾರ್ಯಾಚರಣೆಗೆ ಗುಂಡ್ಲು ಪೇಟೆಗೆ ಕಳುಹಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಚರ್ಚೆ ನಡೆಸಿದ್ದಾರೆ. ಈಗಾಗಲೇ ಹುಲಿಯ ಸೆರೆಗಾಗಿ ಅರಣ್ಯ ಇಲಾಖೆ ಸಿಬ್ಬಂದಿ 3 ತಂಡಗಳಲ್ಲಿ ಕಾರ್ಯಾಚರಣೆ ಕೈಗೊಂಡಿದ್ದಾರೆ.

Advertisement

ಎಸಿಎಫ್ಗಳಾದ ಎಂ.ಎಸ್‌.ರವಿಕುಮಾರ್‌, ಕೆ.ಪರಮೇಶ್‌ ನೇತೃತ್ವದಲ್ಲಿ ಐವರು ಆರ್‌ಎಫ್ಒಗಳು ಅರಣ್ಯ ಇಲಾಖೆ ಪಶುವೈದ್ಯರು ತಂಡದಲ್ಲಿದ್ದಾರೆ. ಗುಂಡ್ಲುಪೇಟೆ ತಾಲೂಕಿನ ಹುಂಡೀಪುರ ಮತ್ತು ಚೌಡಹಳ್ಳಿ ಸಮೀಪದ ಗುಡ್ಡಗಳಲ್ಲಿ ಹಾಗೂ ಮಕ್ಕಳಮಲ್ಲಪ್ಪ ದೇವಸ್ಥಾನ ಹಾಗೂ ಸುತ್ತಲಿನ ಪ್ರದೇಶದಲ್ಲಿ ಡ್ರೋಣ್‌ ಕ್ಯಾಮರಾ, ಆಯಕಟ್ಟಿನ ಜಾಗದಲ್ಲಿ ಬೋನುಗಳನ್ನು ಅಳವಡಿಸಲಾಗಿದೆ.

ಸಾಕಾನೆಗಳಾದ ರೋಹಿತ್‌, ಪಾರ್ಥಸಾರಥಿ ಹಾಗೂ ಗಣೇಶ ಜತೆಗೂಡಿ ಹಗಲು-ರಾತ್ರಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿ ಬರುವ ಚೌಡಹಳ್ಳಿ ಗ್ರಾಮದ ಜಮೀನಿನಲ್ಲಿ ತಮ್ಮ ಹಸುಗಳನ್ನು ಮೇಯಿಸುತ್ತಿದ್ದಾಗ ಮಂಗಳವಾರ ಏಕಾಏಕಿ ದಾಳಿ ನಡೆಸಿದ್ದ ಹುಲಿ, ರೈತ ಶಿವಲಿಂಗಪ್ಪನನ್ನು ಕೊಂದಿತ್ತು.

ಹುಲಿಯನ್ನು ಕೊಲ್ಲುವುದಿಲ್ಲ: ಗುಂಡ್ಲುಪೇಟೆ ತಾಲೂಕಿನ ಚೌಡಹಳ್ಳಿಯಲ್ಲಿ ರೈತನನ್ನು ಬಲಿ ಪಡೆದ ಹುಲಿಯನ್ನು ಯಾವುದೇ ಕಾರಣಕ್ಕೂ ಕೊಲ್ಲುವುದಿಲ್ಲ ಎಂದು ಅರಣ್ಯ ಇಲಾಖೆ ವನ್ಯಜೀವಿ ವಿಭಾ ಗದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾ ಧಿಕಾರಿ ಸಂಜಯ್‌ ಮೋಹನ್‌ ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹುಲಿಯ ನ್ನು ಸೆರೆಹಿಡಿಯುವ ಆಥವಾ ಗುಂಡಿಕ್ಕಿ ಕೊ ಲ್ಲುವ ಅರಣ್ಯ ಇಲಾಖೆಯ ಆದೇಶ ವೈರಲ್‌ ಆದ ಹಿನ್ನೆಲೆಯಲ್ಲಿ ಈ ಸ್ಪಷ್ಟನೆ ನೀಡಿದ್ದಾರೆ. ಬುಧವಾರ ಬೆಂಗಳೂರಿನ ಅರಣ್ಯಭವನದಲ್ಲಿ ಮಾತನಾಡಿ, ನರಭಕ್ಷಕ ಹುಲಿಯನ್ನು ಗುಂಡಿಕ್ಕಿ ಕೊಲ್ಲುವುದಕ್ಕೆ ಯಾವುದೇ ಆದೇಶ ಮಾಡಿಲ್ಲ, ಮಾಡುವುದೂ ಇಲ್ಲ. ಜೀವಂತವಾಗಿ ಸೆರೆಹಿಡಿಯಲಾಗುತ್ತದೆ ಎಂದು ತಿಳಿಸಿದರು.

ಹೊರರಾಜ್ಯದವರು ಪಾಲ್ಗೊಳ್ಳಲ್ಲ: ಹುಲಿ ಕೊಲ್ಲಲು ಮಹಾರಾಷ್ಟ್ರದಿಂದ ಶೂಟರ್‌ಗಳು ಬಂದಿದ್ದಾರೆ ಎಂಬ ಬಗ್ಗೆ ಗೊತ್ತಿಲ್ಲ. ಒಂದು ವೇಳೆ ಆ ರೀತಿಯ ತಜ್ಞರು ಬಂದಿದ್ದರೂ ಅವರನ್ನು ಕೂಡಲೇ ವಾಪಸ್‌ ಕಳುಹಿಸಲಾಗುವುದು. ಶೌಕತ್‌ ಅಲಿ ಖಾನ್‌ ಸೇರಿದಂತೆ ಯಾರೇ ಆದರೂ ಹೊರರಾಜ್ಯದಿಂದ ಬಂದಿರುವ ಶೂಟರ್‌ಗಳು ಅಥವಾ ಸಿಬ್ಬಂದಿ ಈ ಆಪರೇಷನ್‌ನಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಸಂಜಯ್‌ ಮೋಹನ್‌ ತಿಳಿಸಿದರು.

Advertisement

ಮಂಗಳವಾರ ಸಂಜೆ ನಡೆದ ಅರಣ್ಯ ಇಲಾಖೆ ವನ್ಯಜೀವಿ ವಿಭಾಗದ ಮುಖ್ಯಸ್ಥರ ಸಭೆಯಲ್ಲಿ ಗುಂಡ್ಲುಪೇಟೆ ತಾಲೂಕಿನ ಚೌಡಹಳ್ಳಿಯಲ್ಲಿ ರೈತನನ್ನು ಬಲಿ ಪಡೆದ ಹುಲಿಯನ್ನು ಮುಂದಿನ 48 ಗಂಟೆಯಲ್ಲಿ ಸೆರೆ ಹಿಡಿಯಬೇಕು ಅಥವಾ ಕೊಲ್ಲಬೇಕು ಎಂದು ತೀರ್ಮಾನಿಸಲಾಗಿದೆ ಎಂಬ ಪತ್ರಿಕಾ ಪ್ರಕಟಣೆಯೊಂದನ್ನು ಮೈಸೂರು ಅರಣ್ಯ ಇಲಾಖೆ ನೀಡಿತ್ತು. ಈ ಪತ್ರಿಕಾ ಪ್ರಕಟಣೆ “ದಾಳಿ ಮಾಡಿದ ಹುಲಿಯನ್ನು ಗುಂಡಿಕ್ಕಿ ಕೊಲ್ಲಲು ಅರಣ್ಯ ಇಲಾಖೆ ಮುಂದಾಗಿದೆ’ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಅರಣ್ಯ ಇಲಾಖೆಯ ಈ ನಡೆ ಕುರಿತು ಪರಿಸರವಾದಿಗಳು, ವನ್ಯಜೀವಿ ತಜ್ಞರು ಆಕ್ರೋಶ ವ್ಯಕ್ತಪಡಿಸಿದ್ದರು.

ಬಂಡೀಪುರ ರಾತ್ರಿ ಸಂಚಾರ ನಿಷೇಧ ಮುಂದುವರಿಕೆ: ಬಂಡೀಪುರ ಹೆದ್ದಾರಿಯಲ್ಲಿ ರಾತ್ರಿ ವಾಹನ ಸಂಚಾರ ನಿಷೇಧ ಮುಂದು ವರಿಯುತ್ತದೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ. ಸದ್ಯ ಹಗಲು ಸಂಚಾರಕ್ಕೆ ಮಾತ್ರ ಅನುಮತಿ ಇದೆ. ರಾತ್ರಿ ಸಂಚಾರಕ್ಕಾಗಿ ಕಳೆದ 8 ವರ್ಷಗಳಿಂದಲೂ ಕೇರಳ ಕಡೆಯಿಂದ ಒತ್ತಡವಿದೆ. ಆದರೆ, ಯಾವುದೇ ಕಾರಣಕ್ಕೂ ಜಿಲ್ಲಾಡಳಿತವಾಗಲಿ ಅಥವಾ ಅರಣ್ಯ ಇಲಾಖೆಯಾಗಲಿ ನಿರ್ಬಂಧ ಸಡಿಲಿಸುವುದಿಲ್ಲ ಎಂದು ಪಿಸಿಸಿಎಫ್‌ ಸಂಜಯ್‌ ಮೋಹನ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next