Advertisement
ಕೋಪಿಷ್ಠ ಅರ್ಜುನ ಮಾವುತನನ್ನೇ ಕೊಂದಿದ್ದ!:
Related Articles
Advertisement
ನರಬಲಿ ಪಡೆದ ಗಜಗಳು:
ಕಾಡಿನ ರಸ್ತೆಯಲ್ಲಿ ಸಾಗುವಾಗ ಎದುರಿಗೆ ಬಂದ ವಾಹನಗಳಿಗೆ ಅಡ್ಡವಾಗಿ ಪುಂಡಾನೆಗಳು ನಿಲ್ಲುತ್ತಿದ್ದವು. ಗಾಡಿ ತಡೆಯುವುದು, ಅದಕ್ಕೆ ಸೊಂಡಿಲಿನಿಂದ ಹೊಡೆಯುವುದು, ಜನರನ್ನು ಹೆದರಿಸುವುದು ಇದೇ ರೌಡಿ ಆನೆಗಳ ನಿತ್ಯ ರೂಢಿ. ಕೋಪ ನೆತ್ತಿಗೇರಿದರೆ ಮನುಷ್ಯರನ್ನು ಕೊಲ್ಲುವುದಕ್ಕೂ ಅವು ಹಿಂಜರಿಯುವುದಿಲ್ಲ. ಕುಶಾಲನಗರದ ಸುಗ್ರೀವ, ಹಾಸನದ ಯಸಳೂರು ಅರಣ್ಯ ಪ್ರದೇಶದ ಧನಂಜಯ್, ಕಂಜನ್, ಕಾರೇಕೊಪ್ಪ ಅರಣ್ಯದ ಗೋಪಿ ಇವೆಲ್ಲ ಜನರನ್ನು ಕೊಂದೇ ಕ್ಯಾಂಪ್‌ಗೆ ಬಂದಿವೆ. ಸ್ಥಳೀಯ ಜನರು ನೀಡಿದ ವರದಿ ಆಧಾರದ ಮೇಲೆ ಅವುಗಳನ್ನು ಸೆರೆ ಹಿಡಿದು, ಕ್ಯಾಂಪ್‌ಗೆ ಕರೆತಂದು ತರಬೇತಿ ನೀಡಲಾಗಿದೆ.
ಕೊಡಗಿನ ಕಾವೇರಿ ಎಂಬ ಲೇಡಿ ಡಾನ್:
ರೌಡಿ ಆನೆಗಳ ಪಟ್ಟಿಯಲ್ಲಿ ಹೆಣ್ಣಾನೆಗಳೂ ಇರುವುದು ಅಚ್ಚರಿ. ಸಾಮಾನ್ಯವಾಗಿ ಹೆಣ್ಣಾನೆಗಳು ಗಂಡಾನೆಯಷ್ಟು ಪುಂಡ ಆಗಿರುವುದಿಲ್ಲ. ಆದರೆ ಕಾವೇರಿ ಇದಕ್ಕೆ ಹೊರತು. ಸೋಮವಾರಪೇಟೆ ಭಾಗದಲ್ಲಿದ್ದ ಈ ಆನೆ ರಾಗಿ ತೋಟಕ್ಕೆ ನುಗ್ಗಿ ಬೆಳೆಗಳನ್ನು ಹಾಳು ಮಾಡಿದೆ. ಮನುಷ್ಯರ ಮೇಲೂ ಆಕ್ರಮಣ ಮಾಡಿದ ಘಟನೆ ಗಳುಂಟು. ಅದು ಮರಿ ಹಾಕಿದಾಗ ಮನುಷ್ಯರಿಂದ ಅಂತರ ಕಾಯ್ದುಕೊಂಡಿತ್ತು. ಮರಿಗಳು ಕಿರುಚಿದಾಗ, ಓಡಿ ಹೋದಾಗ ಈ ಆನೆಗೆ ಎಲ್ಲಿಲ್ಲದ ಕೋಪ, ಗಾಬರಿ… ತನ್ನ ಮರಿಗಳ ರಕ್ಷಣೆಗೆ ಸಿಕ್ಕವರ ಮೇಲೆಲ್ಲ ಆಕ್ರಮಣ ಮಾಡಿದ್ದಳು. ಪಳಗಿಸಿದ ಮೇಲೆ ದಸರಾ ಉತ್ಸವದಲ್ಲಿ ಭಾಗವಹಿಸಿದ್ದಳು.
ಮಾವುತರಿಗೆ ತಲೆನೋವಾಗಿದ್ದ ಗೋಪಿ: ದಸರಾ ಉತ್ಸವದಲ್ಲಿ ಸಿಗುವ ಮತ್ತೂಬ್ಬ ಗಜರಾಜ ಗೋಪಿ. ಈತ ಮಹಾ ಪೋಲಿ… ಎಷ್ಟು ಪೋಲಿ ಎಂದರೆ; 1993ರಲ್ಲಿ ಕಾರೇಕೊಪ್ಪ ಅರಣ್ಯದಿಂದ ಸೆರೆ ಹಿಡಿದು ಕ್ಯಾಂಪ್‌ಗೆ ಕರೆತಂದಾಗ ಈತ, ಸಿಕ್ಕ ಸಿಕ್ಕ ವಸ್ತುಗಳು, ಜನರ ಮೇಲೆ ಎರಗಿ ಹೋಗುತ್ತಿದ್ದ, ಎಲ್ಲವನ್ನೂ ಬೀಳಿಸುತ್ತಿದ್ದ. ಇವನನ್ನು ಸರಿಪಡಿಸಲು ಬರೋಬ್ಬರಿ 18 ಜನ ಮಾವುತರು ಕಷ್ಟಪಟ್ಟರು. ಒಂದು ಕಾಲದಲ್ಲಿ ಮಹಾ ಪೋಲಿಯಾಗಿದ್ದ ಗೋಪಿ ಈಗ ಮೈಸೂರು ಅರಮನೆಯ ಪಟ್ಟದ ಆನೆಯಾಗಿದ್ದಾನೆ. ಕಳೆದ 13 ವರ್ಷಗಳಿಂದ ದಸರಾದಲ್ಲಿ ಭಾಗವಹಿಸುತ್ತಿದ್ದಾನೆ. ಇಷ್ಟೇ ಅಲ್ಲ ಪ್ರಸನ್ನ, ಹರ್ಷ, ಚಂದ್ರ, ವಿಕ್ರಮ, ಇಂದ್ರ ಹೀಗೆ ರೌಡಿ ಆನೆಗಳ ಪಟ್ಟಿ ದೊಡ್ಡದ್ದಿದೆ.
ಗಂಡಾನೆಗಳಲ್ಲಿ ಅಹಂ ಜಾಸ್ತಿ!:
ಗಂಡಾನೆಗಳಲ್ಲಿ ಅಹಂ ಭಾವ ಜಾಸ್ತಿ. ನಾನು ಗಂಡು ಎಂಬ ಬಿಗುಮಾನ.. ಅದರಲ್ಲೂ ಮದ ಬಂದ ಆನೆಗಳನ್ನು ನಿಯಂತ್ರಣಕ್ಕೆ ತರುವುದು ಬಹಳ ಕಷ್ಟ. ಇದಕ್ಕೆ ಧೈರ್ಯವಂತ ಮತ್ತು ಅಷ್ಟೇ ತಾಳ್ಮೆ ಹೊಂದಿದ ಮಾವುತರು ಬೇಕು. ಸುಮಾರು ಐವತ್ತು ವರ್ಷಗಳ ಹಿಂದೆ ಸುಭಾಶ್, ಅರ್ಜುನ್, ಪಟೇಲ್ ಇವೆಲ್ಲ ದೊಡ್ಡ ಆನೆಗಳು. ಅವುಗಳೇ ಪರಸ್ಪರ ಕಾದಾಡುತ್ತಿದ್ದವು. ಎರಡು ಮದ ಗಜಗಳು ಜಗಳಕ್ಕೆ ನಿಲ್ಲುವುದು, ಒಬ್ಬರಿಗೊಬ್ಬರು ಹೊಡೆಯುವುದು ಸಾಮಾನ್ಯವಾಗಿತ್ತು. ಈ ಆನೆಗಳಿಗೆ ಕೋಪ ವಿಪರೀತ. ಅದನ್ನು ಅಂದಾಜಿಸುವುದೂ ಕಷ್ಟ. ಇಂಥ ಆನೆಗಳನ್ನು ಸಂಪೂರ್ಣ ಸರಿ ಮಾಡುವುದು ಕಷ್ಟಕರ.
ಈ ವರ್ಷ ದಸರಾದಲ್ಲಿ ಹೆಜ್ಜೆ ಹಾಕುವ 14 ಆನೆಗಳು!:
ಅಭಿಮನ್ಯು: 4 ವರ್ಷಗಳಿಂದ ಚಿನ್ನದ ಅಂಬಾರಿ ಹೊರುತ್ತಿರುವ ಆನೆಗೆ 58 ವರ್ಷ. 1970ರಲ್ಲಿ ಕೊಡಗಿನ ಹೆಬ್ಟಾಳ ಅರಣ್ಯ ಪ್ರದೇಶದಲ್ಲಿ ಸೆರೆ. 4700 ಕೆ.ಜಿ. ತೂಕ. ಈವರೆಗೆ 150 ಕಾಡಾನೆ ಹಾಗೂ 50 ಹುಲಿ ಸೆರೆಹಿಡಿಯುವ ಕಾರ್ಯಾಚರಣೆಯಲ್ಲಿ ಭಾಗಿ.
ಲಕ್ಷ್ಮೀ: ರಾಮಪುರ ಆನೆ ಶಿಬಿರದ ಲಕ್ಷ್ಮೀ 2400 ಕೆ.ಜಿ. ತೂಗುತ್ತಾಳೆ. ಲಕ್ಷ್ಮೀಯನ್ನು 2002ರಿಂದ ಅರಣ್ಯ ಇಲಾಖೆಯ ಶಿಬಿರದಲ್ಲಿ ಪೋಷಿಸಲಾಯಿತು. ಕಳೆದ 3 ವರ್ಷಗಳಿಂದ ದಸರಾದಲ್ಲಿ ಭಾಗಿ.
ವರಲಕ್ಷ್ಮೀ: 1977ರಲ್ಲಿ ಕಾಕನಕೋಟೆ ಅರಣ್ಯ ಪ್ರದೇಶದಲ್ಲಿ ವರಲಕ್ಷ್ಮೀ ಸೆರೆ. ಆಕೆಗೀಗ 68 ವರ್ಷ. 9 ಬಾರಿ ಅಂಬಾರಿ ಆನೆಯ ಜತೆ ಕುಮ್ಕಿ ಆನೆಯಾಗಿ ದಸರಾದಲ್ಲಿ ಭಾಗಿ. ತೂಕ 3300 ಕೆ.ಜಿ.
ಧನಂಜಯ: 2013ರಲ್ಲಿ ಹಾಸನದ ಯಸಳೂರು ಅರಣ್ಯ ವಲಯದಲ್ಲಿ ಸೆರೆಯಾಗಿದ್ದ. ಕಾಡಾನೆ ಹಾಗೂ ಹುಲಿ ಕಾರ್ಯಾಚರಣೆಯಲ್ಲಿ ಭಾಗಿ. ತೂಕ 4900 ಕೆ.ಜಿ., ವಯಸ್ಸು 44 ವರ್ಷ. ದುಬಾರೆ ಆನೆ ಶಿಬಿರದಲ್ಲಿ ವಾಸ. 6 ವರ್ಷದಿಂದ ದಸರಾದಲ್ಲಿ ಭಾಗಿಯಾಗಿದ್ದಾನೆ ಧನಂಜಯ.
ಮಹೇಂದ್ರ: ಮತ್ತಿಗೋಡು ಆನೆ ಶಿಬಿರ ವಾಸ. 2018ರಲ್ಲಿ ರಾಮನಗರ ಅರಣ್ಯದಲ್ಲಿ ಸೆರೆ. 2 ವರ್ಷದಿಂದ ಶ್ರೀರಂಗಪಟ್ಟಣ ಗ್ರಾಮೀಣ ದಸರಾ ಮಹೋತ್ಸವದಲ್ಲಿ ಅಂಬಾರಿ ಆನೆಯಾಗಿ ಭಾಗಿ. ತೂಕ 4600 ಕೆ.ಜಿ.
ಭೀಮ: 2000ರಲ್ಲಿ ಭೀಮನಕಟ್ಟೆ ಅರಣ್ಯದಲ್ಲಿ ಸೆರೆ. 2017ರಿಂದ ದಸರಾದಲ್ಲಿ ಭಾಗಿ. 2022ರಿಂದ ಪಟ್ಟದಾನೆಯಾಗಿ ಬಡ್ತಿ. 24 ವರ್ಷದ ಭೀಮ ತೂಕ 4300 ಕೆ.ಜಿ.
ಗೋಪಿ: 1993ರಲ್ಲಿ ಕಾರೇಕೊಪ್ಪ ಅರಣ್ಯದಲ್ಲಿ ಸೆರೆ. 13 ವರ್ಷಗಳಿಂದ ದಸರಾ ಭಾಗಿ. 2015ರಿಂದ ಪಟ್ಟದಾನೆಯಾಗಿ ಅರಮನೆ ಪೂಜಾ ವಿಧಿ-ವಿಧಾನದಲ್ಲಿ ಸಕ್ರಿಯ ಭಾಗಿ. 42 ವರ್ಷದ ಗೋಪಿ ತೂಕ 4900 ಕೆ.ಜಿ.
ಸುಗ್ರೀವ: 2016ರಲ್ಲಿ ಸುಗ್ರೀವ ಸೆರೆ. 42 ವರ್ಷ ಹಾಗೂ 4800 ಕೆ.ಜಿ. ತೂಕ. ದುಬಾರೆ ಆನೆ ಶಿಬಿರದಲ್ಲಿ ವಾಸ. 3ನೇ ಬಾರಿ ದಸರಾದಲ್ಲಿ ಭಾಗಿ
ಪ್ರಶಾಂತ: 1993ರಲ್ಲಿ ಕಾರೇಕೊಪ್ಪ ಅರಣ್ಯದಲ್ಲಿ ಸೆರೆಸಿಕ್ಕ ಆನೆ. ಪ್ರಸ್ತುತ ದುಬಾರೆ ಆನೆ ಶಿಬಿರದಲ್ಲಿ ವಾಸವಿದ್ದಾನೆ. 14 ವರ್ಷಗಳಿಂದ ದಸರಾ ಉತ್ಸವದಲ್ಲಿ ಭಾಗಿಯಾಗಿರುವ 51 ವಯಸ್ಸಿನ ಪ್ರಶಾಂತ ತೂಕ 4700 ಕೆ.ಜಿ
ಕಂಜನ್: ದುಬಾರೆ ಆನೆ ಶಿಬಿರದ ಕಂಜನ್ 2014ರಲ್ಲಿ ಹಾಸನದ ಯಸಳೂರಿನಲ್ಲಿ ಸೆರೆ. 25 ವರ್ಷ ಹಾಗೂ ತೂಕ 4200 ಕೆ.ಜಿ. 2ನೇ ಬಾರಿ ದಸರಾದಲ್ಲಿ ಭಾಗಿ.
ರೋಹಿತ್: 6 ತಿಂಗಳು ಮರಿಯಾಗಿದ್ದಾಗ 2001ರಲ್ಲಿ ಹೆಡಿಯಾಲ ಅರಣ್ಯದಲ್ಲಿ ಸೆರೆ. ರಾಮಪುರ ಆನೆ ಶಿಬಿರದಲ್ಲಿ ವಾಸ. 22 ವರ್ಷ. 3200 ಕೆ.ಜಿ. ತೂಕ.
ಹಿರಣ್ಯ: ಹೆಣ್ಣಾನೆ ಪ್ರಸ್ತುತ ರಾಮಪುರ ಶಿಬಿರದಲ್ಲಿ ವಾಸ. 47 ವಯಸ್ಸಿನ ಹಿರಣ್ಯ 2800 ಕೆ.ಜಿ. ತೂಕ. ಎರಡನೇ ಬಾರಿಗೆ ದಸರಾ ಮಹೋತ್ಸವದಲ್ಲಿ ಭಾಗಿ.
ದೊಡ್ಡಹರವೇ ಲಕ್ಷ್ಮೀ: ದೊಡ್ಡಹರವೇ ಆನೆ ಶಿಬಿರ ದಲ್ಲಿರುವ ಲಕ್ಷ್ಮೀ ಆನೆ ಕಳೆದ 2 ವರ್ಷಗಳಿಂದ ದಸರಾ ಉತ್ಸವದಲ್ಲಿ ಭಾಗಿಯಾಗುತ್ತಿದ್ದಾಳೆ. 53 ವರ್ಷದ ದೊಡ್ಡ ಹರವೇ ಲಕ್ಷ್ಮೀ 3500 ಕೆ.ಜಿ. ತೂಕ.
ಏಕಲವ್ಯ: ಮೊದಲ ಬಾರಿಗೆ ದಸರಾದಲ್ಲಿ ಭಾಗಿಯಾಗುತ್ತಿದ್ದಾನೆ. 2022ರಲ್ಲಿ ಮೂಡಿಗೆರೆ ಅರಣ್ಯದಲ್ಲಿ ಸೆರೆಯಾಗಿರುವ ಏಕಲವ್ಯ ಈಗ ಮತ್ತಿಗೋಡು ಶಿಬಿರದಲ್ಲಿ ಆಶ್ರಯ. 39 ವಯಸ್ಸು. 4200 ಕೆ.ಜಿ. ತೂಕ.