ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಸಿದ್ಧತೆ ಆರಂಭವಾಗಿದ್ದು, ಪ್ರಮುಖ ಆಕರ್ಷಣೆ ಜಂಬೂ ಸವಾರಿಯಲ್ಲಿ ಭಾಗವಹಿಸುವ ಗಜಪಡೆಯ ಆಯ್ಕೆಯೂ ನಡೆದಿದೆ. ಅರ್ಜುನ ಆನೆ 750 ಕೇಜಿ ತೂಕದ ಚಿನ್ನದ
ಅಂಬಾರಿ ಹೊತ್ತು ಸಾಗಲಿದೆ.
ಉಳಿದ ಆನೆಗಳ ಮೊದಲ ತಂಡವನ್ನು ಆಗಸ್ಟ್ 10ರೊಳಗೆ ಮೈಸೂರಿಗೆ ಕರೆತರಲು ಸಿದ್ಧತೆ ನಡೆಯುತ್ತಿದೆ.
ನಾಗರಹೊಳೆ ರಾಷ್ಟ್ರೀಯ ಉದ್ಯಾನ ವನದ ಬಳ್ಳೆ ಆನೆ ಶಿಬಿರದಲ್ಲಿರುವ ಅರ್ಜುನ ಹಾಗೂ ಮತ್ತಿಗೋಡು, ದುಬಾರೆ, ದೊಡ್ಡ ಹರವೆ, ಕೆ.ಗುಡಿ ಆನೆ ಶಿಬಿರಗ ಳಲ್ಲಿರುವ 12 ಆನೆಗಳನ್ನು ಈ ಬಾರಿಯ ದಸರೆಗೆ ಕರೆತರಲಾಗುವುದು.
ಮೈಸೂರು ವಲಯದ ಉಪ ಅರಣ್ಯ ಸಂರಕ್ಷಣಾಧಿಕಾರಿ ಏಡುಕೊಂಡ ಹಾಗೂ ಅರಣ್ಯ ಇಲಾಖೆ ಪಶುವೈದ್ಯ ಡಾ.ನಾಗರಾಜು ಈಗಾಗಲೇ ಶಿಬಿರಗಳಿಗೆ ಭೇಟಿ ನೀಡಿ ಆನೆಗಳ ಆರೋಗ್ಯ ಮತ್ತು ದೃಢಕಾಯತೆ ಪರೀಕ್ಷೆ ನಡೆಸಿದ್ದಾರೆ. ಅಭಿಮನ್ಯು, ಬಲರಾಮ, ವಿಜಯ, ಕಾವೇರಿ, ಗೋಪಾಲ ಸ್ವಾಮಿ, ಹರ್ಷ, ಪ್ರಶಾಂತ, ವಿಕ್ರಮ,ಗೋಪಿ, ದುರ್ಗಾ ಪರಮೇಶ್ವರಿ,ಗಜೇಂದ್ರನ ಜತೆಗೆ ಶ್ರೀನಿವಾಸ ಹಾಗೂ ಭೀಮ ಆನೆಗಳನ್ನು ಹೆಚ್ಚುವರಿಯಾಗಿ ಆಯ್ಕೆ ಮಾಡಲಾಗಿದೆ.
ಈ ಆನೆಗಳಿಗೆ ವನ್ಯಜೀವಿ ವಿಭಾಗದ ಪ್ರಧಾನ ಮುಖ್ಯ ಅರಣ್ಯಾಧಿಕಾರಿ ಅನುಮೋದನೆ ನೀಡಿದ ನಂತರ ಪುರೋಹಿತರು ನಿಗದಿಪಡಿಸಿದ ಶುಭ ಮುಹೂರ್ತದಲ್ಲಿ ಹುಣಸೂರು ತಾಲೂಕಿನ ನಾಗಾಪುರ ಗಿರಿಜನ ಆಶ್ರಮ ಶಾಲೆ ಆವರಣದಲ್ಲಿ
ಗಜಪಯಣ ಏರ್ಪಡಿಸಲಾಗುವುದು