Advertisement
ಜಂಬೂ ಸವಾರಿ ಮೆರವಣಿಗೆಯಲ್ಲಿ ಸ್ಥಳೀಯ ಕಲಾವಿದರರಿಗೆ ಹೆಚ್ಚಿನ ಅವಕಾಶ ಸಿಗುವುದಿಲ್ಲ ಹಾಗೂ ಜಂಬೂಸವಾರಿ ಸಾಗುವ ಮಾರ್ಗದಲ್ಲಿ ಅಂದು ಪ್ರವಾಸಿಗರ ದಂಡೇ ನೆರೆಯುವುದರಿಂದ ಸ್ಥಳೀಯ ಜನರು ಮೆರವಣಿಗೆ ನೋಡಲಾಗುತ್ತಿಲ್ಲ ಎಂಬ ಹಲವು ವರ್ಷಗಳ ಕೊರಗನ್ನು ಹೋಗಲಾಡಿಸಲು ಸಾಂಸ್ಕೃತಿಕ ಮೆರವಣಿಗೆ ಆಯೋಜಿಸಲಾಗಿತ್ತು.
Related Articles
Advertisement
ಮೊದಲಿಗೆ ನಾದಸ್ವರ, ಕೊಂಬು ಕಹಳೆ, ವೀರಗಾಸೆ ತಂಡಗಳು ತೆರಳಿದ ನಂತರ ನಿಶಾನೆ ಆನೆಗಳಾದ ಬಲರಾಮ ಮತ್ತು ಅಭಿಮನ್ಯು ಒಂದರ ಹಿಂದೆ ಒಂದು ಸಾಗಿದರೆ, ನೌಪತ್ ಆನೆಗಳಾದ ಪ್ರಶಾಂತ, ಚೈತ್ರ, ಧನಂಜಯ, ದ್ರೋಣ, ವಿಜಯ ಆನೆಗಳು ಒಟ್ಟಾಗಿ ಸಾಗಿದವು.
ಅವುಗಳ ಹಿಂದೆ ಪೂಜಾ ಕುಣಿತ, ನಾಸಿಕ್ ಡೋಲು, ಕತ್ತಿ ವರಸೆ, ದೊಣ್ಣೆ ವರಸೆ, ದಕ್ಷಿಣ ವಲಯ ಸಾಂಸ್ಕೃತಿಕ ಕಲಾ ತಂಡ, ಗಾರುಡಿ ಗೊಂಬೆ, ಫಲಕ ಕುಣಿತ, ಸೋಮನ ಕುಣಿತ, ಮಾರಿ ಕುಣಿತ, ಗೊರವರ ಕುಣಿತ, ಡೊಳ್ಳು ಕುಣಿತ, ಗೊರಕಾನ ನೃತ್ಯ, ತಮಟೆ-ನಗಾರಿ, ಝಾಂಜ್ ಪಥಕ್, ಪಟ ಕುಣಿತ, ಕಂಸಾಳೆ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ತಂಡಗಳು, ನಾದಸ್ವರ ತಂಡಗಳು ಮೆರವಣಿಗೆಯಲ್ಲಿ ಸಾಗಿದವು.
ಮಧ್ಯಾಹ್ನ 3.10ಕ್ಕೆ ಅರಮನೆಯ ಬಲರಾಮ ದ್ವಾರದಿಂದ ವೀರಗಾಸೆ ತಂಡ ಹೊರ ಬಂದರೆ, 3.55ಕ್ಕೆ ಕೊನೆಯದಾಗಿ ನಾದಸ್ವರ ತಂಡ ಹೊರಬಂತು. ಸಂಜೆ 5.20ಕ್ಕೆ ಬನ್ನಿಮಂಟಪ ಮೈದಾನ ತಲುಪಿತು.
ಪುಷ್ಪಾರ್ಚನೆ: ಬಣ್ಣ ಬಣ್ಣದ ಚಿತ್ತಾರಗಳು, ಝರಿ ಪೋಷಾಕುಗಳಿಂದ ಅಲಂಕೃತನಾಗಿ ಎಡ-ಬಲಕ್ಕೆ ಕಾವೇರಿ, ವರಲಕ್ಷ್ಮೀಯರನ್ನಿಟ್ಟುಕೊಂಡು ಬಂದ ಕ್ಯಾಪ್ಟನ್ ಅರ್ಜುನನಿಗೆ ಮಧ್ಯಾಹ್ನ 3.44ಕ್ಕೆ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮತ್ತು ಅವರ ಪತ್ನಿ ಕನ್ನಿಕಾ ಪರಮೇಶ್ವರಿ ಮಂಗಳವಾದ್ಯದೊಂದಿಗೆ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಿದರು.
ಈ ವೇಳೆಗೆ ಕುಶಾಲತೋಪು ಹಾರಿಸಲಾಯಿತು. ಸಚಿವರಾದ ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್, ಶಾಸಕ ಬಿ.ಹರ್ಷವರ್ಧನ್, ಜಿಪಂ ಅಧ್ಯಕ್ಷೆ ನಯಿಮಾ ಸುಲ್ತಾನ, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಜಿಪಂ ಸಿಇಒ ಕೆ.ಜ್ಯೋತಿ ಇತರರಿದ್ದರು.