ಮೈಸೂರು: ನಾಡಹಬ್ಬ 407ನೇ ದಸರಾ ಮಹೋತ್ಸವದಲ್ಲಿ ಶನಿವಾರ ಮಧ್ಯಾಹ್ನ ಸಿಎಂ ಸಿದ್ದರಾಮಯ್ಯ ಅವರು ಶುಭ ಮಕರ ಲಗ್ನದಲ್ಲಿ ಅರಮನೆ ಬಲರಾಮ ದ್ವಾರದಲ್ಲಿ ನಂದೀಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ವಿಶ್ವವಿಖ್ಯಾತ ಜಂಬು ಸವಾರಿ ಮೆರವಣಿಗೆಗೆ ಚಾಲನೆ ನೀಡಿದರು. ಸಂಜೆ ಸಿಎಂ ಸಿದ್ದರಾಮಯ್ಯ ರಾಜವಂಶಸ್ಥರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅರ್ಜುನ ಹೊತ್ತು ತರುವ 750 ಕೆಜಿ ತೂಕದ ಚಿನ್ನದ ಅಂಬಾರಿಯಲ್ಲಿನ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡಿ ಜಂಬೂಸವಾರಿಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ.ಮಹದೇವಪ್ಪ , ಮೈಸೂರು ಮಹಾನಗರ ಪಾಲಿಕೆ ಮೇಯರ್ ರವಿಕುಮಾರ್, ಪೊಲೀಸ್ ಆಯಕ್ತ ಡಾ.ಸುಬ್ರಹ್ಮಣ್ಯೇಶ್ವರ ರಾವ್, ನಿತ್ಯೋತ್ಸವ ಕವಿ, ದಸರಾ ಉದ್ಘಾಟಕ ಪ್ರೊ.ಕೆಎಸ್ ನಿಸಾರ್ ಅಹಮ್ಮದ್, ಮೈಸೂರು ಜಿಲ್ಲಾಧಿಕಾರಿ ರಂದೀಪ್ ಭಾಗಿಯಾಗಿದ್ದರು.
ಅರಮನೆಯಿಂದ ಬನ್ನಿಮಂಟಪದತ್ತ ಅರ್ಜುನ ಹೆಜ್ಜೆ ಹಾಕುತ್ತಿದ್ದು, ಒಟ್ಟು 5.5 ಕಿಲೋ ಮೀಟರ್ ದೂರದವರೆಗೆ ಜಂಬೂ ಸವಾರಿ ನಡೆಯಲಿದೆ. ಲಕ್ಷಾಂತರ ಮಂದಿ ಜಂಬೂ ಸವಾರಿಯ ಆಕರ್ಷಕ ದೃಶ್ಯವನ್ನು ಕಣ್ತುಂಬಿಕೊಂಡರು.
ಜಂಬೂಸವಾರಿ ವೀಕ್ಷಣೆಗೆ ಜನಸಾಗರ:
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಜಂಬೂಸವಾರಿ ವೀಕ್ಷಣೆಗೆ ಲಕ್ಷಾಂತರ ಜನ ಭಾಗವಹಿಸಿದ್ದರು. ಬಣ್ಣ, ಬಣ್ಣದ ಚಿತ್ತಾರಗಳಿಂದ ಗಜಪಡೆ ಕಂಗೊಳಿಸುತ್ತಿದ್ದವು. ವೀರಗಾಸೆ ಕುಣಿತ, ಡೊಳ್ಳು ಕುಣಿತ ಜನರನ್ನು ರಂಜಿಸಿದವು. ಸಂಜೆ 4.45ಕ್ಕೆ ಸಿಎಂ ಸಿದ್ದರಾಮಯ್ಯ ಚಾಮುಂಡಿ ದೇವಿಗೆ ಪೂಜೆ ಸಲ್ಲಿಸಲಿದ್ದಾರೆ.
ಮುಂದಿನ ವರ್ಷವೂ ನಾನೇ ದಸರಾ ಪೂಜೆ ಮಾಡುತ್ತೇನೆ: ಸಿಎಂ ಸಿದ್ದರಾಮಯ್ಯ
ಮುಂದಿನ ಬಾರಿಯೂ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತೆ, ಹಾಗಾಗಿ ಮುಂದಿನ ಸಲವೂ ನಾನೇ ದಸರಾ ಪೂಜೆಯನ್ನು ಮಾಡುತ್ತೇನೆ ಎಂದು ನಂದಿಧ್ವಜ ಪೂಜೆಯ ಬಳಿಕ ಸುದ್ದಿಗಾರರ ಜತೆ ಮಾತನಾಡುತ್ತ ಸಿಎಂ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.
ನಂದಿ ಧ್ವಜ ಪೂಜೆ ಮೂಲಕ ಮೆರವಣಿಗೆಗೆ ಚಾಲನೆ ನೀಡಿದ್ದೇನೆ. ಈ ಬಾರಿ ಉತ್ತಮ ಮಳೆಯಾಗಿರುವುದರಿಂದ ಕೆರೆ, ಕಟ್ಟೆಗಳು ತುಂಬಿವೆ, ಆ ಹಿನ್ನೆಲೆಯಲ್ಲಿ ಕುಡಿಯುವ ನೀರಿಗೆ, ಬೆಳೆಗೆ ಹೆಚ್ಚಿನ ತೊಂದರೆ ಉಂಟಾಗುವುದಿಲ್ಲ ಎಂದು ಹೇಳಿದರು.